ವಾಷಿಂಗ್ಟನ್‌[ಆ.30]: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಆಗಿದ್ದರೂ, ಅಲ್ಲಿಯ ಆಡಳಿತದ ಮೇಲೆ ಸೇನೆಯೇ ಸಂಪೂರ್ಣ ಹಿಡಿತ ಸಾಧಿಸಿದೆ ಎಂದು ಅಮೆರಿಕ ಸಂಸತ್ತಿನ ವರದಿಯೊಂದು ತಿಳಿಸಿದೆ. ಪಾಕಿಸ್ತಾನದ ವಿದೇಶಾಂಗ ನೀತಿ ಮತ್ತು ಭದ್ರತಾ ನೀತಿಗಳ ಮೇಲೆ ಸೇನೆ ಈಗಲೂ ಪ್ರಭಾವ ಬೀರುವ ಸಾಮರ್ಥ್ಯ ಉಳಿಸಿಕೊಂಡಿದೆ ಎಂದು ಸಂಸದೀಯ ಸಂಶೋಧನಾ ಸೇವೆ(ಸಿಆರ್‌ಎಸ್‌) ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಮ್ರಾನ್‌ ಖಾನ್‌ ಅಧಿಕಾರಕ್ಕೆ ಬರುವ ಮುನ್ನ ಯಾವುದೇ ಆಡಳಿತ ಅನುಭವ ಹೊಂದಿರಲಿಲ್ಲ. ಇದರಿಂದ ದೇಶದ ಆಡಳಿತಾತ್ಮಕ ವಿಷಯಗಳನ್ನು ಸೇನೆಯೇ ನಿರ್ವಹಿಸುತ್ತಿದೆ. ಈ ಹಿಂದಿನ ಪ್ರಧಾನಿ ನವಾಜ್‌ ಷರೀಫ್‌ರನ್ನು ಅಧಿಕಾರದಿಂದ ಕಿತ್ತೊಗೆಯುವಲ್ಲಿ ಸೇನೆಯೇ ಪ್ರಮುಖ ಪಾತ್ರ ವಹಿಸಿತ್ತು ಎಂದು ವರದಿ ತಿಳಿಸಿದೆ.

ಚುನಾವಣೆ ವೇಳೆ ಇಮ್ರಾನ್‌ ಖಾನ್‌ರ ‘ನವ ಪಾಕಿಸ್ತಾನ’ ಘೋಷಣೆ, ಭ್ರಷ್ಟಾಚಾರ ವಿರುದ್ಧದ ಹೋರಾಟ ‘ಕಲ್ಯಾಣ ರಾಜ್ಯ’ ಪರಿಕಲ್ಪನೆಯು ಅಲ್ಲಿನ ಜನರನ್ನು ಸೆಳೆದಿತ್ತು. ಉತ್ತಮ ಶಿಕ್ಷಣ, ಆರೋಗ್ಯ ಭರವಸೆಗಳು ದೇಶದ ಆರ್ಥಿಕ ಬಿಕ್ಕಟ್ಟು, ಹೊಸ ವಿದೇಶಿ ಸಾಲ, ರಾಜಕೀಯ ಕಠಿಣತೆಯಿಂದ ಸಾಕಷ್ಟುಯಶಸ್ಸು ಕಾಣಲಿಲ್ಲ ಎಂದು ವಿಶ್ಲೇಷಿಸಲಾಗಿದೆ.

ಈ ಎಲ್ಲದರ ಮಧ್ಯೆ ರಾಜಕೀಯ ಆಡಳಿತದ ಮೇಲೆ ಸೇನೆ ಹೊಂದಿರುವ ಭಾರೀ ಪ್ರಭಾವದಿಂದ ಪ್ರಧಾನಿ ಖಾನ್‌ರ ಅಧಿಕಾರವನ್ನು ಮೊಟಕುಗೊಳಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.