ಇ-ಸ್ವತ್ತು ನೀಡುವ ತಂತ್ರಾಂಶದಲ್ಲಿ ನ್ಯೂನ್ಯತೆ ಆಗಿರುವುದು ಸತ್ಯ. ಪ್ರಸ್ತುತ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದು, 15 ದಿನಗಳಲ್ಲಿ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಪರಿಷತ್ತು (ಮಾ.18): ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ಆಸ್ತಿಗಳಿಗೆ ಇ-ಸ್ವತ್ತು ನೀಡುವ ತಂತ್ರಾಂಶದಲ್ಲಿ ನ್ಯೂನ್ಯತೆ ಆಗಿರುವುದು ಸತ್ಯ. ಪ್ರಸ್ತುತ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದು, 15 ದಿನಗಳಲ್ಲಿ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಗಮನ ಸೆಳೆಯುವ ಸೂಚನೆ ಪ್ರಸ್ತಾಪಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಇ-ಸ್ವತ್ತು ತಂತ್ರಾಂಶದಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ ಇದೆ ಎಂದು ಹೇಳಿದರು. ಇದಕ್ಕೆ ಸಚಿವರು ಉತ್ತರಿಸಿದರು.
ಜತೆಗೆ ವಸತಿ ಯೋಜನೆಯ ಫಲಾನುಭವಿಗಳಿಗೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣಕ್ಕೂ ಮುನ್ನ ಗ್ರಾಪಂಗಳಲ್ಲಿ ಇ-ಸ್ವತ್ತು 11-ಎ ನಮೂನೆ ಪಡೆಯುವುದು ಕಡ್ಡಾಯ. ಇದು ಇಲ್ಲದಿದ್ದರೆ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. 2-3 ಗುಂಟೆ ಕೃಷಿ ಭೂಮಿಯಲ್ಲಿ ಮನೆ ಕಟ್ಟಲು ಇ-ಸ್ವತ್ತು ಅವಕಾಶ ನೀಡುತ್ತಿಲ್ಲ. ಗುಂಟೆ, ಸೆಂಟ್ ಬದಲು ಚದರಡಿ ಲೆಕ್ಕದಲ್ಲಿ ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಿದೆ. ಇದರಿಂದ ಬಡವರು ಸರ್ವೆ ನಂಬರ್ ಜಾಗದಲ್ಲಿ ಮನೆ ಕಟ್ಟಡಲು ಸಮಸ್ಯೆಯಾಗಿದೆ ಎಂದು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇ-ಸ್ವತ್ತು ತಂತ್ರಾಂಶದಲ್ಲಿ ನ್ಯೂನ್ಯತೆಗಳು ಸತ್ಯ. ಅದನ್ನು ಬಗೆಹರಿಸಲು ಈ ಹಿಂದೆ ಎರಡು ತಿಂಗಳ ಸಮಯಾವಕಾಶ ಕೇಳಿದ್ದೆ. ಈಗ ಬಹುತೇಕ ಸಮಸ್ಯೆ ಬಗೆಹರಿದಿದ್ದು, ಇನ್ನು 15 ದಿನಗಳಲ್ಲಿ ಸಂಪೂರ್ಣ ಸುಧಾರಿಸಲಾಗುವುದು ಎಂದು ಹೇಳಿದರು. ಇನ್ನು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಕೊರತೆಯಿಂದ ವಸತಿ ಯೋಜನೆ ಫಲಾನುಭವಿಗಳಿಗೆ ಕೃಷಿ ಭೂಮಿಯಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ 11-ಎ ನಮೂನೆ ನೀಡುವ ಕುರಿತು ವಸತಿ ಹಾಗೂ ಕಂದಾಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಇ-ಸ್ವತ್ತು ತಂತ್ರಾಂಶದಲ್ಲಿ 11ಎ ನಡಿ 1,39,562 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 1.21 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 11ಬಿ ನಮೂನೆಯಡಿ 51,559 ಅರ್ಜಿಗಳ ಪೈಕಿ 20 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕ್ರಯಪತ್ರ ಇಲ್ಲದೆ ಇ-ಖಾತೆ ಕಷ್ಟ
ಇದೇ ವೇಳೆ ಯತೀಂದ್ರ ಅವರು, ಈ ಹಿಂದೆ ಹಳ್ಳಿಗಳಲ್ಲಿ ಲಕ್ಷಾಂತರ ಜನ ಸರ್ವೆ ನಂಬರ್ ಭೂಮಿಯಲ್ಲಿ ನಿವೇಶನಗಳನ್ನು ಖರೀದಿಸಿದ್ದಾರೆ. ಅವರ ಬಳಿ ನೋಂದಣಿಯಾದ ಕ್ರಯಪತ್ರ, ಇಸಿ ಇರುವುದಿಲ್ಲ. ಮೂಲ ದಾಖಲೆಗಳಲ್ಲಿ ಮೂಲ ಮಾಲೀಕರ ಹೆಸರೇ ಬರುತ್ತಿರುತ್ತದೆ. ಅಂತಹವರಿಗೆ ಇ-ಖಾತಾ ನಿರಾಕರಿಸಲಾಗುತ್ತಿದ್ದು, ಹತ್ತಾರು ವರ್ಷದಿಂದ ವಾಸಿಸುತ್ತಿರುವವರಿಗೆ ಇ-ಖಾತಾ ಅವಕಾಶ ನೀಡಬೇಕು ಎಂದರು. ಇದಕ್ಕೆ ಪ್ರಿಯಾಂಕ್, ಕ್ರಯಪತ್ರ ಇಲ್ಲದಿದ್ದರೆ ಕಷ್ಟವಾಗುತ್ತದೆ. ಇದನ್ನು ಪರಿಶೀಲಿಸಲಾಗುವುದು ಎಂದಷ್ಟೇ ಹೇಳಿದರು.


