ನವದೆಹಲಿ[ಸೆ.15]: ಜಮ್ಮು-ಕಾಶ್ಮೀರದಲ್ಲಿದ್ದ ವಿಶೇಷಾಧಿಕಾರ ರದ್ದುಗೊಳಿಸಿದ ಭಾರತದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನೇ ಬೆತ್ತಲಾಗುತ್ತಿರುವ ಹೊರತಾಗಿಯೂ, ಪಾಕಿಸ್ತಾನ ಮಾತ್ರ ಇನ್ನೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ.

ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಭಾರತದ ವಿರುದ್ಧ ಸುಳ್ಳು ಆರೋಪಿಸಿದ್ದ ಪಾಕಿಸ್ತಾನದ ಕಪಟತನದ ಮುಖವಾಡವನ್ನು ಭಾರತ ಬಯಲು ಮಾಡಿತ್ತು. ಇದರ ಬೆನ್ನಲ್ಲೇ, ಪಾಕ್‌ ಆಕ್ರಮಿತ ಕಾಶ್ಮೀರವನ್ನು ಎತ್ತಿಕಟ್ಟಬೇಕೆಂಬ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಲ್ಲಿನ ಜನರಿಂದಲೇ ಮುಖಭಂಗ ಅನುಭವಿಸಿದ ಘಟನೆ ನಡೆದಿದೆ.

ಪಿಒಕೆಯಲ್ಲಿನ ಮುಜಾಫ್ಫರಬಾದ್‌ಗೆ ಭೇಟಿ ನೀಡಿದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನುದ್ದೇಶಿಸಿ ಸ್ಥಳೀಯರು ‘ಗೋ ನಿಯಾಜಿ ಗೋ ಬ್ಯಾಕ್‌’(ಪಾಕ್‌ ಪ್ರಧಾನಿ ಹಿಂದಕ್ಕೆ ಹೋಗಿ) ಎಂಬ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ ಭಾರತ ಸರ್ಕಾರ ನಿಷೇಧಾಜ್ಞೆ ಹೇರುವ ಮೂಲಕ ಜನರ ಬದುಕನ್ನು ತೊಂದರೆಗೆ ಸಿಲುಕಿಸಿದೆ ಎಂದು ದೂರಲು ಮುಂದಾಗಿದ್ದ ಪಾಕ್‌ಗೆ ಭಾರೀ ಅವಮಾನವಾದಂತಾಗಿದೆ.

ಶುಕ್ರವಾರ ಮುಜಾಫ್ಫರಬಾದ್‌ಗೆ ಭೇಟಿ ನೀಡಿದ ಪಾಕ್‌ ಪ್ರಧಾನಿ ಇಮ್ರಾನ್‌, ಅಲ್ಲಿನ ಜನರನ್ನುದ್ದೇಶಿಸಿ ಜಮ್ಮು-ಕಾಶ್ಮೀರ ಜನತೆಯ ಹಕ್ಕುಗಳಿಗಾಗಿ ಹೋರಾಡುವಂತೆ ಕರೆ ನೀಡಿದರು. ಮುಂದುವರಿದ ಅವರು, ಜಮ್ಮು-ಕಾಶ್ಮೀರ ಜನತೆಯ ಹಕ್ಕುಗಳನ್ನು ಭಾರತ ಸರ್ಕಾರ ಕಸಿದುಕೊಂಡಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಯೊಂದು ವೇದಿಕೆಗಳಲ್ಲೂ ಪಾಕಿಸ್ತಾನ ಮಾತ್ರವೇ ಏಕಾಂಗಿಯಾಗಿ ಹೋರಾಟ ಮಾಡುತ್ತಿದೆ ಎಂಬುದಾಗಿ ಸುಳ್ಳು ಭಾಷಣ ಶುರುವಿಟ್ಟುಕೊಂಡರು. ಈ ವೇಳೆ ಪಿಒಕೆ ಜನತೆ, ಇಮ್ರಾನ್‌ ಅವರು ತಮ್ಮ ಸುಳ್ಳಿನ ಕಂತೆಯ ಭಾಷಣಕ್ಕೆ ತಲೆದೂಗುತ್ತಾರೆ ಎಂಬ ಆಶಾವಾದದಲ್ಲಿದ್ದರು.

ಆದರೆ, ಅಲ್ಲಿ ನೆರೆದಿದ್ದ ನೂರಾರು ಜನ ‘ಇಮ್ರಾನ್‌ ಗೋ ಬ್ಯಾಕ್‌’ ಎಂಬಂಥ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ನಡೆದುಕೊಂಡ ರೀತಿಯ ವಿರುದ್ಧವೂ ಪ್ರತಿಭಟನೆ ಕೈಗೊಂಡರು. ಜೊತೆಗೆ, ತಮ್ಮ ಮೇಲೆ ಪಾಕಿಸ್ತಾನ ಸೇನೆ ಹಲವು ದೌರ್ಜನ್ಯಗಳನ್ನು ಎಸಗಿದೆ ಎಂದು ಬಹಿರಂಗವಾಗಿಯೇ ದೂರಿದರು. ತಮ್ಮ ಭಾಗಕ್ಕೆ ಬರಬೇಕಿದ್ದ ನದಿ ನೀರನ್ನು ಪಾಕಿಸ್ತಾನದ ಇತರ ಭಾಗಗಳಿಗೆ ಹರಿಸಿಕೊಳ್ಳುವ ಮೂಲಕ ಪಾಕಿಸ್ತಾನ ತಮ್ಮ ಮೇಲೆ ನೀರಿನ ಯುದ್ಧ ಸಾರಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಬಹಿರಂಗವಾಗಿಯೇ ಹಲವು ಭಯೋತ್ಪಾದಕ ಕೇಂದ್ರಗಳನ್ನು ಪುನಃ ಆರಂಭಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು.