ಭುವನೇಶ್ವರ್(ಮೇ.03): 1999ರ ಬಳಿಕ ದೇಶ ಎದುರಿಸುತ್ತಿರುವ ಭೀಕರ ಚಂಡಮಾರುತಕ್ಕೆ ಒಡಿಶಾ ತತ್ತರಿಸಿ ಹೋಗಿದೆ. ಫನಿ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಈಗಾಗಲೇ ಮೂವರನ್ನು ಬಲಿ ಪಡೆದಿದೆ.

ಈ ಮಧ್ಯೆ ಒಡಿಶಾ ಜನತೆಗೆ ಧೈರ್ಯದ ಸಂದೇಶ ಕಳುಹಿಸಿರುವ ಪ್ರಧಾನಿ ಮೋದಿ, ಇಡೀ ದೇಶ ನಿಮ್ಮೊಂದಿಗಿದೆ ಎಂದು ಭರವಸೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಒಡಿಶಾಗೆ ಸಕಲ ನೆರವು ನೀಡಲು ಕೇಂದ್ರ ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಹುತೇಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ದೇವಾಲಯಗಳ ನಗರಿ ಪುರಿ ಭಾರೀ ಮಳೆಗೆ ಸಾಕ್ಷಿಯಾಗಿದೆ. ಇದುವರೆಗೂ ಸುಮಾರು 11 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, ಭೂಸೇನೆ, ನೌಕಾಸೇನೆ, ವಾಯುಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಸರ್ವ ಸನ್ನದ್ದುಗೊಳಿಸಲಾಗಿದೆ.

ಈ ಮಧ್ಯೆ ಒಡಿಶಾ ಕರಾವಳಿಯಲ್ಲಿ ಕರ್ತವ್ಯನಿರತವಾಗಿರುವ ನೌಕಾಪಡೆಯ ಹಡಗೊಂದು ಭೀಕರ ಅಲೆಗಳ ಹೊಡೆತಕ್ಕೆ ಸಿಕ್ಕಿದೆ. ಈ ಕುರಿತು ಫೋಟೋ ಬಿಡುಗಡೆ ಮಾಡಿರುವ ನೌಕಾಪಡೆ, ಸಮುದ್ರದ ನೀರು ಹಡಗಿನ ಡೆಕ್ ನ್ನು ಆವರಿಸಿರುವ ಕುರಿತು ಮಾಹಿತಿ ನೀಡಿದೆ.

ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಸಭೆಗಳನ್ನು ರದ್ದುಪಡಿಸಲಾಗಿದ್ದು, ಒಡಿಶಾ, ಆಂಧ್ರದಲ್ಲಿ ಚುನಾವಣಾ ನೀಡಿ ಸಂಹಿತೆಯನ್ನು ಸಡಿಲಗೊಳಿಸಲಾಗಿದೆ.

ಇನ್ನು ಫನಿ ಚಂಡಮಾರುತ ಎದುರಿಸಲು ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಮೂಲಗಳು ತಿಳಿಸಿವೆ.

"