ಭುವನೇಶ್ವರ :  1999ರಲ್ಲಿ 10 ಸಾವಿರ ಮಂದಿಯನ್ನು ಬಲಿ ಪಡೆದಿದ್ದ ‘ಸೂಪರ್‌ ಸೈಕ್ಲೋನ್‌’ ನಂತರ ಇದೇ ಮೊದಲ ಬಾರಿಗೆ ಮತ್ತೊಂದು ಅತ್ಯಂತ ಪ್ರಬಲ ಚಂಡಮಾರುತ ಒಡಿಶಾ ಕರಾವಳಿಯತ್ತ ಮುನ್ನುಗ್ಗಿ ಬರುತ್ತಿದೆ. ಗಂಟೆಗೆ 205 ಕಿ.ಮೀ. ವೇಗದಲ್ಲಿ ಒಡಿಶಾ ಕರಾವಳಿಗೆ ಶುಕ್ರವಾರ ಬೆಳಗ್ಗೆ 8ರಿಂದ 10 ಗಂಟೆ ವೇಳೆಗೆ ‘ಫನಿ’ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಒಡಿಶಾದ 30 ಜಿಲ್ಲೆಗಳ ಪೈಕಿ 14ರಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. 11.5 ಲಕ್ಷಕ್ಕೂ ಅಧಿಕ ಜನರನ್ನು ತಗ್ಗುಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ತೆರವುಗೊಳಿಸುವ ಕಾರ್ಯಾಚರಣೆಯನ್ನು ಗುರುವಾರ ರಾತ್ರಿವರೆಗೂ ನಡೆಸಲಾಗಿದೆ. ದೇಶದ ಇತಿಹಾಸದಲ್ಲೇ ಇಷ್ಟೊಂದು ಸಂಖ್ಯೆಯ ಜನರನ್ನು ನೈಸರ್ಗಿಕ ವಿಕೋಪಕ್ಕೂ ಮುನ್ನ ತೆರವುಗೊಳಿಸಿದ್ದು ಇದೇ ಮೊದಲು ಎಂದು ಹೇಳಲಾಗಿದೆ.

ಒಡಿಶಾ ಕರಾವಳಿಯ ಪುಣ್ಯ ಕ್ಷೇತ್ರ ಪುರಿಯಿಂದ ಗುರುವಾರ ಸಂಜೆ 320 ಕಿ.ಮೀ. ದೂರದಲ್ಲಿದ್ದ ಚಂಡಮಾರುತ ಗಂಟೆಗೆ 16 ಕಿ.ಮೀ. ವೇಗದಲ್ಲಿ ಒಡಿಶಾ ಕರಾವಳಿಯತ್ತ ಆಗಮಿಸುತ್ತಿದೆ. ಪುರಿ ಸಮೀಪದ ಗೋಪಾಲಪುರಕ್ಕೆ ಬೆಳಗ್ಗೆ 8ರಿಂದ 10ರೊಳಗೆ ಫನಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶ, ಪಶ್ಚಿಮಬಂಗಾಳ ಹಾಗೂ ತಮಿಳುನಾಡಿನಲ್ಲೂ ಚಂಡಮಾರುತದ ಪ್ರಭಾವವಿರಲಿದೆ. 43 ವರ್ಷಗಳ ಅವಧಿಯಲ್ಲಿ ಹಿಂದು ಮಹಾಸಾಗರದ ಅಕ್ಕಪಕ್ಕ ಏಪ್ರಿಲ್‌ ತಿಂಗಳಿನಲ್ಲಿ ಸೃಷ್ಟಿಯಾಗಿರುವ ಮೊದಲ ಚಂಡಮಾರುತ ಇದಾಗಿದೆ. ಪುರಿ ಪ್ರವೇಶದ ಬಳಿಕ ಪಶ್ಚಿಮಬಂಗಾಳದತ್ತ ಈ ಚಂಡಮಾರುತ ಮುಖ ಮಾಡಲಿದ್ದು, ಆ ಬಳಿಕ ದುರ್ಬಲವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಚಂಡಮಾರುತದಿಂದಾಗಿ ಹಲವು ಕಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಈ ಮಳೆ 20 ಸೆಂ.ಮೀ.ನಷ್ಟಿರುತ್ತದೆ. ಸಮುದ್ರದಲ್ಲಿ ಅಲೆಗಳ ಎತ್ತರ 1.5 ಮೀಟರ್‌ವರೆಗೂ ಇರಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚಂಡಮಾರುತ ದಾಳಿಯ ಹಿನ್ನೆಲೆಯಲ್ಲಿ ಒಡಿಶಾದ ಶಾಲಾ- ಕಾಲೇಜುಗಳಿಗೆ ಗುರುವಾರದಿಂದ 3 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ವೈದ್ಯರು, ಆರೋಗ್ಯಾಧಿಕಾರಿಗಳ ರಜೆಯನ್ನು ಮೇ 15ರವರೆಗೆ ರದ್ದುಗೊಳಿಸಲಾಗಿದೆ. ಪೊಲೀಸರ ರಜೆಯನ್ನು ಮೊಟಕುಗೊಳಿಸಲಾಗಿದೆ. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಗುರುವಾರ ಮಧ್ಯರಾತ್ರಿಯಿಂದ 24 ತಾಸು ರದ್ದುಗೊಳಿಸಲಾಗಿದೆ.

ಚಂಡಮಾರುತವು ಒಡಿಶಾದ 52 ಪಟ್ಟಣಗಳು ಮತ್ತು 10000 ಗ್ರಾಮಗಳ ಮೇಲೆ ತನ್ನ ಪ್ರಭಾವ ಭೀರಲಿದೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ಮೋದಿ ಸಭೆ:  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಿಗೆ ರವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಉನ್ನತ ಸಭೆ ನಡೆಸಿ, ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಮಾಹಿತಿ ಪಡೆದಿದ್ದಾರೆ. ಜನರು ಗಾಬರಿಯಾಗಬೇಕಿಲ್ಲ, ಚಂಡಮಾರುತದ ನಂತರದ ಪರಿಸ್ಥಿತಿ ಎದುರಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ತಿಳಿಸಿದ್ದಾರೆ.

223 ರೈಲು ಸಂಚಾರ ರದ್ದು:  ತಗ್ಗುಪ್ರದೇಶಗಳಿಂದ ತೆರವುಗೊಳಿಸಲಾಗಿರುವ ಜನರನ್ನು 880 ಚಂಡಮಾರುತ ನಿರಾಶ್ರಿತ ಶಿಬಿರಗಳಿಗೆ ಸಾಗಿಸಲಾಗಿದೆ. ಇಂತಹ ಸೌಲಭ್ಯ ಇಲ್ಲದ ಕಡೆ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಇಲಾಖೆ 223 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಈಗಾಗಲೇ ಮುಂಗಡ ಟಿಕೆಟ್‌ ಕಾದಿರಿಸಿದ್ದವರಿಗೆ ಹಣ ವಾಪಸ್‌ ಮಾಡುವುದಾಗಿ ತಿಳಿಸಿದೆ. ಪುರಿಯಲ್ಲಿದ್ದ ಪ್ರವಾಸಿಗರನ್ನು ಗುರುವಾರ ಸಂಜೆಯೇ ವಾಪಸ್‌ ಕಳುಹಿಸಲಾಗಿದೆ.

ಈ ನಡುವೆ, ಒಡಿಶಾದಲ್ಲಿರುವ ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ಕ್ಷಿಪ್ರವಾಗಿ ಕಳುಹಿಸಿಕೊಡಲು ಪುರಿಯಿಂದ ಹೌರಾ ಹಾಗೂ ಶಾಲಿಮಾರ್‌ಗೆ ಗುರುವಾರ 3 ವಿಶೇಷ ರೈಲುಗಳನ್ನು ಓಡಿಸಲಾಗಿದೆ.

ಜನರ ಸಾಮೂಹಿಕ ವಲಸೆ:  ಚಂಡಮಾರುತದಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ಸಹಸ್ರಾರು ಜನರು ತಮ್ಮ ಗ್ರಾಮಗಳನ್ನು ಬಿಟ್ಟು, ಬೆಲೆಬಾಳುವ ವಸ್ತುಗಳೊಂದಿಗೆ ಜಿಟಿ ಜಿಟಿ ಮಳೆಯಲ್ಲೇ ಕಾಲ್ನಡಿಗೆ ಅಥವಾ ಸರ್ಕಾರ ಏರ್ಪಾಟು ಮಾಡಿರುವ ವಾಹನಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುವ ದೃಶ್ಯ ಗುರುವಾರ ಸಾಮಾನ್ಯವಾಗಿತ್ತು.

ಎನ್‌ಡಿಆರ್‌ಎಫ್‌: ಚಂಡಮಾರುತದಿಂದ ಎದುರಾಗಬಹುದಾದ ಪರಿಸ್ಥಿತ ನಿರ್ವಹಣೆಗೆ 4000 ಸಿಬ್ಬಂದಿಗಳನ್ನು ಒಳಗೊಂಡ ಎನ್‌ಡಿಆರ್‌ಎಫ್‌ನ 81 ತುಕಡಿಗಳನ್ನು ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದೆ.