ನವದೆಹಲಿ[ಏ.30]: ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಿಗೆ ಅಪ್ಪಳಿಸುವ ಭೀತಿ ಮೂಡಿಸಿದ್ದ ‘ಫನಿ’ ಚಂಡಮಾರುತ, ಸೋಮವಾರ ಇನ್ನಷ್ಟು ಪ್ರಬಲಗೊಂಡಿದ್ದು ಒಡಿಶಾ ಕರಾವಳಿಯತ್ತ ಮುಖಮಾಡಿದೆ. ಗುರುವಾರ ಈ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಭಾರತೀಯ ಕರಾವಳಿ ಭದ್ರತಾ ಪಡೆಯನ್ನು ಕಟ್ಟೆಚ್ಚರದಿಂದ ಇರಿಸಲಾಗಿದೆ.

ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಒಡಿಶಾದಲ್ಲಿ ಚಂಡಮಾರುತಗಳು ಉಂಟಾಗುವುದಿಲ್ಲ. ಆದರೆ, ‘ಫನಿ’ ಚಂಡಮಾರುತ ಅನಿರೀಕ್ಷಿತ ಬೆಳವಣಿಗೆಯಾಗಿದ್ದು, ಸಮುದ್ರದಲ್ಲಿ ಭಾರೀ ದೂರಕ್ಕೆ ಸಂಚರಿ ಸುತ್ತಿದೆ. ಈ ಮುನ್ನ ‘ಫನಿ’ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಒಡಿಶಾದತ್ತ ಮುಖಮಾಡಿದೆ. ಚಂಡಮಾರುತದ ಪರಿಣಾಮವಾಗಿ ಒಡಿಶಾ ಹಾಗೂ ಆಂಧ್ರ ಉತ್ತರ ಕರಾವಳಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಪಶ್ಚಿಮ ಬಂಗಾಳಕ್ಕೂ ಚಂಡಮಾರುತ ವ್ಯಾಪಿಸಲಿದೆ.

ಫನಿ ಚಂಡಮಾರುತ : ರಾಜ್ಯದ ಈ ಪ್ರದೇಶಗಳಲ್ಲಿ 2 ದಿನ ಮಳೆ

ಶ್ರೀಲಂಕಾದ ಕರಾ ವಳಿಯ 620 ಕಿ.ಮೀ. ಪೂರ್ವ ಹಾಗೂ ಚೆನ್ನೈನಿಂದ 880 ಕಿ.ಮೀ. ದೂರದಲ್ಲಿ ‘ಫನಿ’ ಚಂಡಮಾರುತ ನೆಲೆಸಿದ್ದು, ಸೋಮವಾರ ಮತ್ತಷ್ಟು ವೇಗ ಪಡೆದು ಕೊಂಡಿದೆ. ಮಂಗಳವಾರ ಅತ್ಯಂತ ಗಂಭೀರ ಸ್ವರೂಪ ಪಡೆದು ಮೇ 1ರವರೆಗೆ ವಾಯವ್ಯ ದಿಕ್ಕಿನತ್ತ ಚಲಿಸಲಿದೆ. ಬಳಿಕ ಉತ್ತರದಿಕ್ಕಿನತ್ತ ಚಲಿಸಲಿದೆ. ಗಂಟೆಗೆ 80ರಿಂದ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 195 ಕಿ.ಮೀ.ವರೆಗೂ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹಮಾಮಾನ ಇಲಾಖೆ ತಿಳಿಸಿದೆ.

ಒಡಿಶಾದಲ್ಲಿ ಹೈ ಅಲರ್ಟ್: ‘ಫನಿ’ ಚಂಡಮಾರುತ ಎದುರಿಸಲು ಒಡಿಶಾ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಕರಾವಳಿಯಲ್ಲಿ ಕಟ್ಟೆಚ್ಚರ ಸಾರಲಾಗಿದೆ. ಏತನ್ಮಧ್ಯೆ, ಈ ಕುರಿತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ.