Asianet Suvarna News Asianet Suvarna News

ಕೇಂದ್ರ ಸರ್ಕಾರದಲ್ಲಿ ಆಲಸಿಗಳು, ಲಂಚಕೋರರಿಗೆ ಶುರುವಾಗಿದೆ ನಡುಕ

ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕುವುದು ಈ ಬಾರಿಯ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶವಾಗಿತ್ತು. ಅದರಂತೆ ನರೇಂದ್ರ ಮೋದಿ 2ನೇ ಬಾರಿ ಪ್ರಧಾನಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ ಎಸಗಿದ ದೊಡ್ಡ ದೊಡ್ಡ ಅಧಿಕಾರಿಗಳು ವಜಾಗೊಂಡು ಮನೆಗೆ ಹೋಗತೊಡಗಿದ್ದಾರೆ. 

Modi government surgical strike on corruption
Author
Bengaluru, First Published Jun 23, 2019, 1:42 PM IST

ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕುವುದು ಈ ಬಾರಿಯ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶವಾಗಿತ್ತು. ಅದರಂತೆ ನರೇಂದ್ರ ಮೋದಿ 2ನೇ ಬಾರಿ ಪ್ರಧಾನಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ ಎಸಗಿದ ದೊಡ್ಡ ದೊಡ್ಡ ಅಧಿಕಾರಿಗಳು ವಜಾಗೊಂಡು ಮನೆಗೆ ಹೋಗತೊಡಗಿದ್ದಾರೆ.

ಮೊದಲನೇ ಅವಧಿಯಲ್ಲೂ ಮೋದಿ ಭ್ರಷ್ಟಾಚಾರದ ವಿರುದ್ಧ ಕೆಲ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಇದೀಗ ಎರಡನೇ ಅವಧಿಯಲ್ಲಿ ಅದನ್ನು ಇನ್ನೊಂದು ಹಂತಕ್ಕೆ ವಿಸ್ತರಿಸಿದ್ದಾರೆ. ಅದರ ಜೊತೆಗೆ, ಅಕ್ರಮ ಆಸ್ತಿ ಸಂಗ್ರಹಿಸಿದ ಮತ್ತು ಕಪ್ಪು ಹಣ ಹೊಂದಿರುವ ಖಾಸಗಿ ವ್ಯಕ್ತಿಗಳ ವಿರುದ್ಧವೂ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅವರ ಸರ್ಜಿಕಲ್‌ ಸ್ಟ್ರೈಕ್ ಹೇಗೆ ನಡೆಯುತ್ತಿದೆಯೆಂಬ ಮಾಹಿತಿ ಇಲ್ಲಿದೆ.

ಮತದಾರರನ್ನು ಮರೆಯದ ಸ್ಮೃತಿ, ಮುಂಬೈ ಬಿಟ್ಟು ಅಮೇಥಿಗೆ ಶಿಫ್ಟ್!

27 ದಿನದಲ್ಲಿ 27 ಅಧಿಕಾರಿಗಳ ವಜಾ!

ಮೋದಿ 2ನೇ ಬಾರಿ ಪ್ರಧಾನಿಯಾಗಿದ್ದು 2019ರ ಮೇ 26ರಂದು. ನಿನ್ನೆಗೆ ಅವರು ಪ್ರಧಾನಿಯಾಗಿ 27 ದಿನಗಳು ಪೂರ್ಣಗೊಂಡವು. ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ 27 ಭ್ರಷ್ಟಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. 2ನೇ ಅವಧಿಗೆ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಹಾಗೂ ದುರಾಚಾರದ ವಿರುದ್ಧ ಕಾರ್ಯಾಚರಣೆ ನಡೆಸಲು ಪ್ರಾಮಾಣಿಕ ಉನ್ನತ ಅಧಿಕಾರಿಗಳು ಮತ್ತು ಮಂತ್ರಿಗಳಿಗೆ ಮೋದಿ ಸೂಚಿಸಿದ್ದಾರೆ.

ಅದರಂತೆ ಓರ್ವ ಜಂಟಿ ಆಯುಕ್ತ ದರ್ಜೆಯ ಅಧಿಕಾರಿ ಸೇರಿದಂತೆ 12 ಹಿರಿಯ ತೆರಿಗೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ವಜಾ ಮಾಡಿದೆ. ನಂತರ ಭ್ರಷ್ಟಾಚಾರ ಆರೋಪ ಹೊತ್ತ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಇಲಾಖೆಯ 15 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿದೆ. ವಜಾಗೊಂಡವರಲ್ಲಿ ಪ್ರಧಾನ ಆಯುಕ್ತರಿಂದ ಹಿಡಿದು ಸಹಾಯಕ ಆಯುಕ್ತರವರೆಗೆ ವಿವಿಧ ಸ್ತರದ ಅಧಿಕಾರಿಗಳು ಇದ್ದಾರೆ.

ಡಿಸ್ಮಿಸ್‌ ಆದವರು ಏನು ತಪ್ಪು ಮಾಡಿದ್ದರು?

ಎಫ್‌ಆರ್‌ 56(ಜೆ) ನಿಯಮದ ಅಡಿಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಇಲಾಖೆಯ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ವಜಾ ಮಾಡಿದೆ. ಇವರಲ್ಲಿ ಕೆಲವರ ಮೇಲೆ ಸಿಬಿಐನಲ್ಲಿ ಭ್ರಷ್ಟಾಚಾರ ಆರೋಪದ ದೂರು ದಾಖಲಾಗಿದೆ. ಮತ್ತೆ ಕೆಲವರ ಮೇಲೆ ವಂಚನೆ, ಸುಲಿಗೆ ಮತ್ತು ಅಕ್ರಮ ಆಸ್ತಿಯ ಆರೋಪಗಳಿವೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಹೀಗೆ ವಜಾಗೊಂಡ ಅಧಿಕಾರಿಗಳಲ್ಲಿ ಪ್ರಿನ್ಸಿಪಲ್‌ ಕಮಿಷನರ್‌ ಅನೂಪ್‌ ಶ್ರೀವಾಸ್ತವ ಕೂಡ ಇದ್ದಾರೆ. ಇವರು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಇಲಾಖೆಯ ಪ್ರಿನ್ಸಿಪಲ್‌ ಎಡಿಜಿಯಾಗಿ ಕಾರ‍್ಯನಿರ್ವಹಿಸುತ್ತಿದ್ದರು. ಇವರ ವಿರುದ್ಧ ಸಿಬಿಐ 1996ರಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಿತ್ತು. 2012ರಲ್ಲಿ ಲಂಚ ತೆಗೆದುಕೊಂಡ ಆರೋಪದ ಮೇಲೆ ಸಿಬಿಐ ಮತ್ತೆ ಕೇಸು ದಾಖಲಿಸಿತ್ತು. ಅದರೊಂದಿಗೆ ಕಿರುಕುಳ ನೀಡಿದ ಮತ್ತು ಸುಲಿಗೆ ಮಾಡಿದ ಆರೋಪವೂ ಇವರ ಮೇಲಿದೆ.

ಬಜೆಟ್‌ ಮುದ್ರಣ ಆರಂಭ: ವಿತ್ತ ಸಚಿವಾಲಯದಲ್ಲಿ ಹಲ್ವಾ ಸಮಾರಂಭ

ಇನ್ನು ಕೊಲ್ಕತ್ತಾದ ಆದಾಯ ತೆರಿಗೆ ಇಲಾಖೆಯ ಕಮಿಷನರ್‌ ಸಂಸಾರ್‌ ಚಂದ್‌ ಅವರ ಮೇಲೆ ಲಂಚ ಸ್ವೀಕರಿಸಿದ ಆರೋಪ, ಚೈನ್ನೈನ ಆದಾಯ ತೆರಿಗೆ ಕಮಿಷನರ್‌ ಹರ್ಷ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಇತ್ತು. ಇನ್ನು ದೆಹಲಿಯ ಜಿಎಸ್‌ಟಿ ಝೋನ್‌ ಉಪ ಕಮಿಷನರ್‌ ಅಮರೇಶ್‌ ಜೈನ್‌ ಅವರ ಮೇಲೆ 1.55 ಕೋಟಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ದೂರು ದಾಖಲಾಗಿತ್ತು. ಉಳಿದವರ ಮೇಲೂ ಇಂಥದ್ದೇ ಆರೋಪದ ಬಗ್ಗೆ ದೂರು ದಾಖಲಾಗಿದ್ದವು.

ಉನ್ನತ ಅಧಿಕಾರಿಗಳನ್ನು ಹೀಗೆ ಕಿತ್ತು ಹಾಕಬಹುದೇ?

ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ದೂರು ಬಂದರೆ ಅದನ್ನು ಆಯಾ ಇಲಾಖೆಯ ವಿಚಕ್ಷಣ ವಿಭಾಗದವರು ಆಂತರಿಕ ತನಿಖೆ ನಡೆಸುತ್ತಾರೆ. ಇನ್ನು ಸಾರ್ವಜನಿಕರು ಕೂಡ ಅಧಿಕಾರಿಗಳ ಭ್ರಷ್ಟಾಚಾರ ಅಥವಾ ಲಂಚಗುಳಿತನದ ವಿರುದ್ಧ ಕೋರ್ಟ್‌ಗೆ ಹೋಗಬಹುದು.

ಇಲಾಖೆಯ ಆಂತರಿಕ ತನಿಖೆಯಲ್ಲಿ ಭ್ರಷ್ಟಾಚಾರ ಸಾಬೀತಾದರೆ ಆಗ ಇಲಾಖೆಯೇ ಕೋರ್ಟ್‌ಗೆ ಹೋಗಬಹುದು. ಇಂತಹ ಕ್ರಮಗಳಿಗೆಲ್ಲ ಸುದೀರ್ಘ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ಭ್ರಷ್ಟಾಚಾರದ ತನಿಖೆ ಮುಗಿಯುವುದರೊಳಗೆ ಅಧಿಕಾರಿಗಳು ನಿವೃತ್ತಿಯಾಗಿರುತ್ತಾರೆ.

ಹೀಗೆ ಅಧಿಕಾರಿಗಳು ನುಣುಚಿಕೊಳ್ಳುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಬಹಳ ಕಡಿಮೆ ಬಳಸಲಾದ ಕಾಯ್ದೆಯ ಅಸ್ತ್ರವೊಂದನ್ನು ಪ್ರಯೋಗಿಸತೊಡಗಿದೆ. ಅದೇ ಎಫ್‌ಆರ್‌ 56(ಜೆ) ನಿಯಮಾವಳಿ. ಇದರಡಿ ಫಟಾಫಟ್‌ ಆಂತರಿಕ ತನಿಖೆ ನಡೆಸಿ ಭ್ರಷ್ಟರನ್ನು ವಜಾಗೊಳಿಸಲಾಗುತ್ತಿದೆ.

ಕೆಲಸ ಮಾಡಿ, ಇಲ್ಲಾ ಮನೆಗೆ ಹೋಗಿ

ಕೇಂದ್ರ ಸರ್ಕಾರ, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ 27 ಅಧಿಕಾರಿಗಳನ್ನು ಮನೆಗೆ ಕಳುಹಿಸಿದ ಬೆನ್ನಲ್ಲೇ ಬ್ಯಾಂಕಿಂಗ್‌ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಭ್ರಷ್ಟಾಚಾರ ತೊಡೆದುಹಾಕುವ ನಿಟ್ಟಿನಲ್ಲಿ ನೌಕರರ ಸೇವಾ ದಾಖಲೆಗಳನ್ನು ಪರಿಶೀಲನೆಗೊಳಪಡಿಸಲು ಸೂಚನೆ ನೀಡಿದೆ.

ಅಲ್ಲದೆ, ಕರ್ತವ್ಯನಿಷ್ಠೆ ಮೆರೆಯದ ಅಧಿಕಾರಿಗಳನ್ನು ಗುರುತಿಸುವಂತೆಯೂ ಸೂಚಿಸಲಾಗಿದೆ. ಇದರ ಜೊತೆಯಲ್ಲೇ, 2019ರ ಜು.15ರಿಂದ ಪ್ರತಿ ತಿಂಗಳು 15 ದಿನಗಳಿಗೊಮ್ಮೆ ಎಲ್ಲ ಸಚಿವಾಲಯಗಳು ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವರದಿಯನ್ನು ತನಗೆ ನೀಡಬೇಕು ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ತಿಳಿಸಿದೆ. ಹೀಗಾಗಿ ಭ್ರಷ್ಟರು ಹಾಗೂ ಆಲಸಿ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.

ಸಂಸದೆ ಶೋಭಾಗೆ ಹೊಸ ಜವಾಬ್ದಾರಿ!

ಖಾಸಗಿ ವಲಯದ ಭ್ರಷ್ಟರಿಗೂ ಮೋದಿ ಬ್ರಹ್ಮಾಸ್ತ್ರಗಳು

1.ಜಿಎಸ್‌ಟಿ ಲಾಭ ವರ್ಗಾಯಿಸದಿದ್ದರೆ ದಂಡ

ವ್ಯಾಪಾರಿಗಳು ಜಿಎಸ್‌ಟಿ ತೆರಿಗೆಯ ಲಾಭÜವನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಿಂದ ಸ್ಥಾಪಿಸಲ್ಪಟ್ಟಪ್ರಾಧಿಕಾರದ ಅವಧಿಯನ್ನು ಎರಡು ವರ್ಷ ವಿಸ್ತರಿಸಲಾಗಿದೆ. ಜಿಎಸ್‌ಟಿಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇದ್ದರೆ ಮಾರಾಟಾಗಾರರಿಗೆ 25 ಸಾವಿರ ರು. ದಂಡ ವಿಧಿಸಲಾಗುತ್ತದೆ. ಅದನ್ನು ಇನ್ನಷ್ಟುಹೆಚ್ಚಿಸಲು ಇದೀಗ ನಿರ್ಧರಿಸಲಾಗಿದೆ.

2. 10 ಲಕ್ಷಕ್ಕಿಂತ ಹೆಚ್ಚು ವಿತ್‌ಡ್ರಾ ಮಾಡಿದರೆ ತೆರಿಗೆ?

ಕಪ್ಪು ಹಣ ವಹಿವಾಟಿಗೆ ಕಡಿವಾಣ ಹಾಕಲು ಮತ್ತು ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹ ನೀಡುವ ಸಲುವಾಗಿ ವರ್ಷವೊಂದಕ್ಕೆ 10 ಲಕ್ಷ ರು. ನಗದನ್ನು ಬ್ಯಾಂಕ್‌ ಖಾತೆಯಿಂದ ಹಿಂಪಡೆಯುವ ನಾಗರಿಕರ ಮೇಲೆ ತೆರಿಗೆ ವಿಧಿಸುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಸಾಮಾನ್ಯವಾಗಿ ತೆರಿಗೆ ವಂಚಿಸುವವರು ಅಥವಾ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ಯತ್ನಿಸುವವರಷ್ಟೇ ಇಷ್ಟುದೊಡ್ಡ ಮೊತ್ತದ ನಗದು ಹಣ ಬಳಕೆ ಮಾಡುತ್ತಾರೆ. ಇನ್ನುಳಿದವರು ಚೆಕ್‌ ಅಥವಾ ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸುತ್ತಾರೆ.

3. ಬಿಟ್‌ ಕಾಯಿನ್‌ ಬಳಸಿದರೆ 10 ವರ್ಷ ಜೈಲು

ಬಿಟ್‌ ಕಾಯಿನ್‌ ಹಾಗೂ ಇತರ ಕ್ರಿಪ್ಟೋಕರೆನ್ಸಿಗಳ ಸಂಗ್ರಹ, ಮಾರಾಟ ವ್ಯವಹಾರ ಭಾರತದಲ್ಲಿ ನಿಷೇಧಗೊಂಡಿದೆ. ಇಂತಹ ಡಿಜಿಟಲ್‌ ಕರೆನ್ಸಿ ವ್ಯವಹಾರಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಉದ್ದೇಶದಿಂದ ಬಿಟ್‌ ಕಾಯಿನ್‌ ಮತ್ತಿತರ ಕ್ರಿಪ್ಟೋಕರೆನ್ಸಿ ಬಳಕೆ, ಸಂಗ್ರಹ, ಮಾರಾಟ ಮತ್ತು ವ್ಯವಹಾರ ನಡೆಸಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಸಾಮಾನ್ಯವಾಗಿ ಕಪ್ಪು ಹಣ ಕೂಡಿಡುವವರು ಅಥವಾ ಅಕ್ರಮವಾಗಿ ಹಣ ಶೇಖರಿಸುವವರು ಕ್ರಿಪ್ಟೋಕರೆನ್ಸಿ ಬಳಸುವುದುಂಟು.

4. ಟ್ಯಾಕ್ಸ್‌ ಕಟ್ಟದಿದ್ದರೆ ಬರೀ ದಂಡವಲ್ಲ, ಜೈಲು!

ತೆರಿಗೆ ವಿನಾಯ್ತಿ ಮಿತಿಗಿಂತ ಹೆಚ್ಚು ಆದಾಯ ಗಳಿಸುವ ಪ್ರತಿಯೊಬ್ಬ ನಾಗರಿಕರೂ ತೆರಿಗೆ ಕಟ್ಟಬೇಕು. ಆದರೆ ಸರ್ಕಾರದ ಕಣ್ಣಿಗೆ ಮಣ್ಣೆರಚಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವ ಲಕ್ಷಾಂತರು ಕಾಳಧನಿಕರು ಹಾಗೂ ಶ್ರೀಮಂತರು ದೇಶದಲ್ಲಿದ್ದಾರೆ.

ಸದ್ಯ ತೆರಿಗೆ ವಂಚಿಸಿ ಸಿಕ್ಕಿಬಿದ್ದರೆ ತೆರಿಗೆ ಹಾಗೂ ದಂಡ ಕಟ್ಟಿಸಿಕೊಂಡು ಬಿಟ್ಟುಬಿಡುವುದೇ ಹೆಚ್ಚು. ಕೇಂದ್ರ ಸರ್ಕಾರದ ರಹಸ್ಯ ಟೀಮ್‌ ಒಂದು ಶ್ರೀಮಂತ ಕಾಳಧನಿಕರ ಹಾಗೂ ಬೇನಾಮಿ ಆಸ್ತಿದಾರರ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಅವರು ತೆರಿಗೆ ಇಲಾಖೆಗೆ ನೀಡುವ ದಾಖಲೆಗಳು ನಕಲಿಯಾಗಿದ್ದರೆ ಜೈಲಿಗೆ ಕಳುಹಿಸುವ ಸಿದ್ಧತೆ ನಡೆಯುತ್ತಿದೆ.

ಕಳೆದ ಅವಧಿಯಲ್ಲಿ ಪ್ರಯೋಗಿಸಿದ್ದ 2 ಅಸ್ತ್ರಗಳು

ನೋಟು ಅಮಾನ್ಯೀಕರಣ

2014ರಲ್ಲಿ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗಲೂ ಭ್ರಷ್ಟಾಚಾರ ಹಾಗೂ ಕಪ್ಪುಹಣಕ್ಕೆ ಕಡಿವಾಣ ಹಾಕುವ ಹಲವು ಉಪಕ್ರಮಗಳನ್ನು ಕೈಗೊಂಡಿದ್ದರು. ಅದರಲ್ಲಿ ಮೊದಲನೆಯದು ನೋಟು ಅಮಾನ್ಯೀಕರಣ. 2016ರ ನವೆಂಬರ್‌ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಈ ಮೂಲಕ ರಾತ್ರೋರಾತ್ರಿ ಭ್ರಷ್ಟರ ವಿರುದ್ಧ ಸಮರ ಸಾರಿದ್ದರು.

ಜಿಎಸ್‌ಟಿ ಜಾರಿ

ಸ್ವಾತಂತ್ರ್ಯೋತ್ತರ ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆ ಎನ್ನಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಿದ್ದರು. ಸರ್ಕಾರಕ್ಕೆ ತೆರಿಗೆ ವಂಚಿಸುವ ವ್ಯಾಪಾರಿಗಳಿಗೆ ಕಡಿವಾಣ ಹಾಕುವುದು ಹಾಗೂ ವಾಣಿಜ್ಯ ತೆರಿಗೆಗಳು ಸೋರಿಕೆಯಾಗುವುದನ್ನು ತಡೆಯುವುದು ಇದರ ಉದ್ದೇಶ. ವ್ಯಾಪಾರಿಗಳೊಂದಿಗೆ ತೆರಿಗೆ ಇಲಾಖೆಯ ಭ್ರಷ್ಟಅಧಿಕಾರಿಗಳು ಕೈಜೋಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟಉಂಟುಮಾಡುವುದಕ್ಕೂ ಇದು ಕಡಿವಾಣ ಹಾಕಿತು.

Follow Us:
Download App:
  • android
  • ios