ನವದೆಹಲಿ[ಜೂ.23]: ಇತ್ತೀಚೆಗಷ್ಟೇ ಮಹಿಳಾ ಸಂಸದೆಯರ ಸಚೇತಕರಾಗಿ ಆಯ್ಕೆಯಾಗಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ದಕ್ಷಿಣ ಭಾರತದ ಸಂಸದೆಯರ ಮಾರ್ಗದರ್ಶಕಿ ಜವಾಬ್ದಾರಿ ವಹಿಸಲಾಗಿದೆ.

ಸಂಸತ್ತಿನ ನೀತಿ-ನಿಯಮಗಳು, ಪ್ರಕ್ರಿಯೆಗಳು ಸೇರಿದಂತೆ ಕಲಾಪಗಳ ಕುರಿತು ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಮಹಿಳೆಯರಿಗೆ ಮಾರ್ಗದರ್ಶಕಿಯಾಗಿ ಶೋಭಾ ಅವರು ಸಲಹೆ- ಸೂಚನೆಗಳನ್ನು ನೀಡಲಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಕನ್ನಡತಿ ಶೋಭಾ ಕರಂದ್ಲಾಜೆ, ಗುಜರಾತ್‌ನ ವಡೋದರ ಕ್ಷೇತ್ರದ ಸಂಸದೆ ರಂಜನ್‌ಬೆನ್‌ ಭಟ್‌, ಪಶ್ಚಿಮ ಬಂಗಾಳದ ಹೂಗ್ಲಿ ಸಂಸದೆ ಲಾಕೆಟ್‌ ಚಟರ್ಜಿ ಹಾಗೂ ತ್ರಿಪುರಾದ ಪಶ್ಚಿಮ ಸಂಸದೆ ಪ್ರತಿಮಾ ಭೌಮಿಕ್‌ ಅವರನ್ನು ಮಹಿಳಾ ಸಚೇತಕರನ್ನಾಗಿ ನೇಮಿಸಲಾಗಿತ್ತು. ಪಶ್ಚಿಮ ರಾಜ್ಯಗಳ ಸಂಸದೆಯರಿಗೆ ಭಟ್‌, ಪೂರ್ವ ರಾಜ್ಯಗಳಿಗೆ ಚಟರ್ಜಿ ಹಾಗೂ ಅಸ್ಸಾಂ, ಮಣಿಪುರ, ತ್ರಿಪುರ ಹಾಗೂ ಅರುಣಾಚಲ ಪ್ರದೇಶದ ಮಹಿಳಾ ಸಂಸದರಿಗೆ ಭೌಮಿಕ್‌ ಅವರು ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ ಎಂದು ವರದಿ ಹೇಳಿದೆ.