Asianet Suvarna News Asianet Suvarna News

ಜಾತಿ, ಆರ್ಥಿಕ ಗಣತಿ ತಡೆಯಲು ಯಾವ ಶಕ್ತಿಗಳಿಗೂ ಸಾಧ್ಯವಿಲ್ಲ: ರಾಹುಲ್‌ ಗಾಂಧಿ

ನನ್ನ ಆಸಕ್ತಿ ನ್ಯಾಯ ನೀಡುವುದರಲ್ಲಿದೆಯೇ ಹೊರತೂ ಜಾತಿ ಗಣತಿಯಲ್ಲಲ್ಲ. ಅನ್ಯಾಯಕ್ಕೆ ಒಳಗಾಗಿರುವ ದೇಶದ ಜನಸಂಖ್ಯೆಯ ಶೇ.90ರಷ್ಟು ಜನರಿಗೆ ನ್ಯಾಯ ಒದಗಿಸುವುದೇ ನನ್ನ ಜೀವನದ ಗುರಿ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತಲೇ ಮೊದಲಿಗೆ ಜಾತಿ ಗಣತಿಗೆ ಆದೇಶಿಸಲಾಗುವುದು ಎಂದು ಭರವಸೆ ನೀಡಿದ ರಾಹುಲ್‌ ಗಾಂಧಿ
 

No Power can Stop Caste and Economic Census in India Says Rahul Gandhi grg
Author
First Published Apr 25, 2024, 6:34 AM IST | Last Updated Apr 25, 2024, 6:37 AM IST

ನವದೆಹಲಿ(ಏ.25):  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಸಂಪತ್ತನ್ನು ಕಸಿದು ಅದನ್ನು ಮುಸ್ಲಿಮರಿಗೆ ನೀಡಲಿದೆ ಎಂದು ಸತತ ಮೂರು ದಿನಗಳ ಕಾಲ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಬುಧವಾರ ತಿರುಗೇಟು ನೀಡಿದ್ದಾರೆ. ಜಾತಿ ಗಣತಿಯನ್ನು ತಡೆಯುವುದು ಯಾವುದೇ ಶಕ್ತಿಗಳಿಗೂ ಸಾಧ್ಯವಿಲ್ಲ. ತಮ್ಮನ್ನು ತಾವು ದೇಶಭಕ್ತರು ಎಂದು ಕರೆದುಕೊಳ್ಳುವವರಿಗೆ ಜಾತಿ ಗಣತಿಯ ಎಕ್ಸ್‌ರೇನಿಂದಾಗಿ ಆತಂಕ ಉಂಟಾಗಿದೆ ಎಂದು ಹೇಳಿದ್ದಾರೆ.

ಬುಧವಾರ ಇಲ್ಲಿ ಆಯೋಜನೆಗೊಂಡಿದ್ದ ‘ಸಾಮಾಜಿಕ ನ್ಯಾಯ ಸಮ್ಮೇಳನ’ದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ನನ್ನ ಆಸಕ್ತಿ ನ್ಯಾಯ ನೀಡುವುದರಲ್ಲಿದೆಯೇ ಹೊರತೂ ಜಾತಿ ಗಣತಿಯಲ್ಲಲ್ಲ. ಅನ್ಯಾಯಕ್ಕೆ ಒಳಗಾಗಿರುವ ದೇಶದ ಜನಸಂಖ್ಯೆಯ ಶೇ.90ರಷ್ಟು ಜನರಿಗೆ ನ್ಯಾಯ ಒದಗಿಸುವುದೇ ನನ್ನ ಜೀವನದ ಗುರಿ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತಲೇ ಮೊದಲಿಗೆ ಜಾತಿ ಗಣತಿಗೆ ಆದೇಶಿಸಲಾಗುವುದು’ ಎಂದು ಭರವಸೆ ನೀಡಿದರು.

News Hour: ನಿಲ್ಲದ ಮಂಗಳಸೂತ್ರ ಮಹಾಯುದ್ಧ, ಹಾಗೆ ಹೇಳಿಯೇ ಇಲ್ಲ ಎಂದ ರಾಹುಲ್‌ ಗಾಂಧಿ!

ನಮ್ಮ ಪ್ರಣಾಳಿಕೆಯಲ್ಲಿ ಎಕ್ಸ್‌ರೇ ಮತ್ತು ಮೋದಿ ಸರ್ಕಾರ ಸೃಷ್ಟಿಸಿರುವ ಆದಾಯ ಅಸಮಾನತೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೋದಿ, ಆಯ್ದ ಉದ್ಯಮಿಗಳಿಗೆ 16 ಲಕ್ಷ ಕೋಟಿ ರು. ವರ್ಗಾಯಿಸಿದ್ದಾರೆ. ಈ ಪೈಕಿ ಸ್ವಲ್ಪ ಪ್ರಮಾಣದ ಹಣವನ್ನು ಶೇ.90ರಷ್ಟು ಜನಸಂಖ್ಯೆಗೆ ಮರಳಿಸುವ ಉದ್ದೇಶವನ್ನು ನಮ್ಮ ಪ್ರಣಾಳಿಕೆ ಹೊಂದಿದೆ. ನಾವು ಈ ಕುರಿತು ಲೆಕ್ಕಾಚಾರ ನಡೆಸಿದ್ದೇವೆ. ನಾವು ಯಾವುದನ್ನು ನ್ಯಾಯ ಎಂದು ಭಾವಿಸಿದೆವೋ ಮತ್ತು ಯಾವ ಸಹಾಯವನ್ನು ಜನರಿಗೆ ನೀಡಬೇಕು ಎಂದು ಬಯಸಿದೆವೋ ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ’ ಎಂದು ರಾಹುಲ್‌ ಹೇಳಿದರು.

ಗಣತಿಯಿಂದ ಸ್ಪಷ್ಟ ಚಿತ್ರಣ:

ಜಾತಿ ಗಣತಿ ಎಂದರೆ ಕೇವಲ ಜಾತಿ ಗಣತಿ ಅಲ್ಲ. ಅದರ ಜೊತೆಗೆ ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನೂ ನಡೆಸಲಾಗುತ್ತದೆ. ಈ ಸಮೀಕ್ಷೆ, ದೇಶದಲ್ಲಿ ದಲಿತರು, ಆದಿವಾಸಿಗಳು ಮತ್ತು ಸಾಮಾನ್ಯ ವರ್ಗದಲ್ಲಿ ಎಷ್ಟು ಬಡವರಿದ್ದಾರೆ? ಮತ್ತು ವಿವಿಧ ವಲಯಗಳಲ್ಲಿ ಅವರ ಭಾಗೀದಾರಿಕೆ ಎಷ್ಟಿದೆ ಎಂಬುದರ ಕುರಿತು ಸ್ಪಷ್ಟ ಚಿತ್ರಣವನ್ನು ನೀಡಲಿದೆ ಎಂದು ರಾಹುಲ್‌ ಹೇಳಿದರು.

‘ನರೇಂದ್ರ ಮೋದಿ 16 ಲಕ್ಷ ಕೋಟಿ ರುಗಳನ್ನು 25 ಕಂಪನಿಗಳಿಗೆ ನೀಡಿದ್ದಾರೆ. ರೈತರಿಗೆ 25 ಬಾರಿ ಮನ್ನಾ ಮಾಡಬಹುದಾದ ಹಣವನ್ನು ಮೋದಿ ಈ ಉದ್ಯಮಿಗಳಿಗೆ ನೀಡಿದ್ದಾರೆ.’ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.
ಶ್ರೀಮಂತರ ವಿರುದ್ಧ ಕ್ರಮ ಎಂದಿಲ್ಲ:

ಇದೇ ವೇಳೆ ಸಂಪತ್ತಿನ ಹಂಚಿಕೆ ಕುರಿತ ತಮ್ಮ ಹೇಳಿಕೆ ದೇಶದಲ್ಲಿ ಭಾರೀ ಸಂಚಲನಕ್ಕೆ ಕಾರಣವಾದ ಅದನ್ನು ಸ್ವಲ್ಪ ತಣ್ಣಗಾಗಿಸುವ ಯತ್ನವನ್ನೂ ಮಾಡಿರುವ ರಾಹುಲ್‌ ಗಾಂಧಿ, ‘ಅಧಿಕ ಸಂಪತ್ತು ಹೊಂದಿರುವವರ ವಿರುದ್ಧ ಕ್ರಮ ಕೈಗೊಂಡೇ ಬಿಡುತ್ತೇವೆ ಎಂದೇನು ನಾನು ಹೇಳಿಲ್ಲ. ನಾನು ಹೇಳಿದ್ದು, ಸಂಪತ್ತಿನ ಅಸಮಾನತೆ ಎಷ್ಟು ಇದೆ ನೋಡೋಣ ಎಂದಷ್ಟೇ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಬೇಕಾದ್ದಿಲ್ಲ. ನಿಮಗೆ ಗಾಯವಾಗಿದೆ ಎಂದಾದಲ್ಲಿ, ನಾನು ಎಕ್ಸರೇ ಮಾಡೋಣ ಎಂದಷ್ಟೇ ಹೇಳಿದ್ದೇನೆ, ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಬೇಕಿಲ್ಲ. ಆದರೆ ನಾನು ಎಕ್ಸ್‌ರೇ ಎಂಬ ಪದ ಬಳಸಿದಾಕ್ಷಣ ಮತ್ತು ಎಷ್ಟು ಅನ್ಯಾಯ ಆಗಿದೆ ನೋಡೋಣ ಎಂದಾಕ್ಷಣ ನರೇಂದ್ರ ಮೋದಿ ದೇಶವನ್ನು ವಿಭಜನೆ ಮಾಡುವ, ದೇಶವನ್ನು ಒಡೆಯುವ ಯತ್ನ ಮಾಡಲಾಗುತ್ತಿದೆ ಎಂದು ನಮ್ಮ ಮೇಲೆ ಆರೋಪ ಮಾಡಿದರು’ ಎಂದು ಮೋದಿಗೆ ರಾಹುಲ್‌ ಗಾಂಧಿ ತಿರುಗೇಟು ನೀಡಿದರು.

ಎಕ್ಸ್‌ರೇ ಕೇವಲ ಭಾಗೀದಾರಿಕೆ ಮತ್ತು ನ್ಯಾಯದ ಬಗ್ಗೆ ತಿಳಿಸಲಿದೆ ಮತ್ತು ಎಲ್ಲಾ ದೇಶಭಕ್ತರು ಇದನ್ನೂ ಒಪ್ಪಲಿದ್ದಾರೆ. ದೇಶ ಭಕ್ತರು ಏನು ಬಯಸುತ್ತಾರೆ? ದೇಶಭಕ್ತರು ದೇಶದಲ್ಲಿ ನ್ಯಾಯ ಬಯಸುತ್ತಾರೆ; ದೇಶಭಕ್ತರು ದೇಶ ಮುನ್ನಡೆಯುವುದನ್ನು ಬಯಸುತ್ತಾರೆ ಮತ್ತು ದೇಶ ಸೂಪರ್‌ಪವರ್‌ ಆಗುವುದನ್ನು ಬಯಸುತ್ತಾರೆ. ಹೀಗೆ ನೀವು ದೇಶ ಸೂಪರ್‌ ಪವರ್‌ ಆಗಬೇಕು ಮತ್ತು ಚೀನಾಕ್ಕಿಂತ ಮುಂದೆ ಸಾಗಬೇಕು ಎಂದಾದಲ್ಲಿ ದೇಶದ ಶೇ.90ರಷ್ಟು ಜನರ ಶಕ್ತಿ ಬಳಸಬೇಕು. ಆದರೆ ತಮ್ಮನ್ನು ತಾವು ದೇಶಭಕ್ತರು ಎಂದು ಕರೆದುಕೊಳ್ಳುವವರು ಎಕ್ಸ್‌ರೇ ಬಗ್ಗೆ ಹೆದರಿದ್ದಾರೆ’ ಎಂದು ರಾಹುಲ್‌ ಟೀಕಿಸಿದರು.

ಒಬಿಸಿ ಮೋದಿ ಬಗ್ಗೆ ಟೀಕೆ:

ಕಳೆದ 10 ವರ್ಷಗಳಿಂದ ಮೋದಿ ತಮ್ಮನ್ನು ತಾವು ಒಬಿಸಿ ಎನ್ನುತ್ತಿದ್ದಾರೆ. ಆದರೆ ನಾನು ಜಾತಿ ಗಣತಿ ಬಗ್ಗೆ ಮಾತನಾಡುತ್ತಲೇ, ಅವರು ಜಾತಿ ಎಂಬುದೇ ಇಲ್ಲ ಎನ್ನುತ್ತಿದ್ದಾರೆ. ಜಾತಿ ಇಲ್ಲವೆಂದಾದಲ್ಲಿ ನೀವು ಒಬಿಸಿ ಆಗುವುದು ಹೇಗೆ? ಹಾಗಿದ್ದಲ್ಲಿ ನೀವು ನನಗೆ ಯಾವುದೇ ಜಾತಿ ಇಲ್ಲ ಎನ್ನಬೇಕಿತ್ತು. ಮತ್ತೊಮ್ಮೆ ಶ್ರೀಮಂತರು ಮತ್ತು ಬಡವರು ಎಂಬುದೇ ಎರಡು ಜಾತಿ ಎನ್ನುತ್ತಾರೆ. ನೀವು ಹಾಗೆ ಹೇಳುವುದಾದರೆ ನಾನು ಹೇಳಬಯಸುತ್ತೇನೆ ನೀವು ಬಡವರ ಪಟ್ಟಿ ತಯಾರಿಸಿ. ಅಲ್ಲಿ ಕೇವಲ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರೇ ಸಿಗುತ್ತಾರೆ’ ಎಂದು ರಾಹುಲ್‌ ಮೋದಿಗೆ ಸವಾಲು ಹಾಕಿದರು.

ಜೀವನದ ಗುರಿ:

ಅನ್ಯಾಯಕ್ಕೆ ತುತ್ತಾದ ದೇಶದ ಶೇ.90ರಷ್ಟು ಜನರಿಗೆ ನ್ಯಾಯ ದೊರಕಿಸುವುದೇ ನನ್ನ ಜೀವನದ ಗುರಿ. ಜೀವನದ ಗುರಿ ಮತ್ತು ರಾಜಕೀಯ ಎರಡಕ್ಕೂ ವ್ಯತ್ಯಾಸವಿದೆ. ನೀವು ರಾಜಕೀಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಆದರೆ ಜೀವನದ ಗುರಿಯಲ್ಲಲ್ಲ. ಬಿಜೆಪಿ ಸದಾ ಪಾಕಿಸ್ತಾನ, ಚೀನಾ ಮತ್ತು ಬಾಲಿವುಡ್‌ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ದಲಿತರು, ಒಬಿಸಿ ಮತ್ತು ಆದಿವಾಸಿಗಳ ವಿಷಯದಿಂದ ಜನರ ದಿಕ್ಕನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತದೆ ಎಂದು ರಾಹುಲ್‌ ಟೀಕಿಸಿದರು.

ಆದರೆ ಅವರ (ಬಿಜೆಪಿ) ಸಮಸ್ಯೆ ಏನೆಂದರೆ ಅವರು ಎಷ್ಟು ಬೇಕಾದರೂ ವಿಷಯಾಂತರ ಮಾಡಬಹುದು. ಆದರೆ ಅದು ಸೀಮಿತ ಅವಧಿಗೆ ಮಾತ್ರ. ಆದರೆ ಇದೀಗ, ಏನಾಗುತ್ತಿದೆ ಎಂದು ಒಬಿಸಿಗಳು ಕೇಳುವ ಸಮಯ ಬಂದಿದೆ. ರಾಮಮಂದಿರ ಕಟ್ಟಲಾಯಿತು, ಆದರೆ ಅಲ್ಲಿ ನಮ್ಮ ವ್ಯಕ್ತಿಗಳು (ದಲಿತರು ಮತ್ತು ಆದಿವಾಸಿಗಳು) ಕಾಣಲಿಲ್ಲ; ಸಂಸತ್ತಿನ ಉದ್ಘಾಟನೆ ಆಯಿತು, ಆದರೆ ಅಲ್ಲಿ ನಮ್ಮವರು ಕಾಣಲಿಲ್ಲ. ರಾಷ್ಟ್ರಪತಿಗಳು ದೇಶದ ಪ್ರಥಮ ಪ್ರಜೆ. ಆದರೆ ಅವರನ್ನೇ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಇಡಲಾಯಿತು ಎಂದು ರಾಹುಲ್‌ ದೂರಿದರು.

'ನಿಮ್ಮ ಮನೆ ಹೆಂಗಸ್ರನ್ನ ರಾಹುಲ್‌ ಗಾಂಧಿ ಜತೆ ಮಲಗಿಸಿ ನಪುಂಸಕ ಹೌದೋ ಅಲ್ವೋ ಗೊತ್ತಾಗುತ್ತೆ..' ಕಾಂಗ್ರೆಸ್‌ ನಾಯಕನ ವಿವಾದಿತ ಮಾತು

ನಾನು ಗಂಭೀರ ರಾಜಕಾರಣಿ:

ಇದೇ ವೇಳೆ ನಾನು ಗಂಭೀರ ರಾಜಕಾರಣಿ ಅಲ್ಲ ಎಂದು ಕೆಲ ಮಾಧ್ಯಮಗಳು ದೂರುತ್ತಿವೆ. ಆದರೆ ನಾನು ಎಂನರೇಗಾ, ಭೂಸ್ವಾಧೀನ ಕಾಯ್ದೆ, ಭಟ್ಟಾ ಪರ್ಸೌಲ್‌ ಅಭಿಯಾನ, ನಿಯಮಗಿರಿ ಬೆಟ್ಟ ವಿಷಯದಲ್ಲಿ ಸಕ್ರಿಯನಾಗಿ ತೊಡಗಿಸಿಕೊಂಡಿದ್ದೆ. ಆದರೆ ಮಾಧ್ಯಮಗಳಿಗೆ ಇವೆಲ್ಲಾ ಗಂಭೀರ ವಿಷಯಗಳೇ ಅಲ್ಲ. ಅಮಿತಾಭ್‌ ಬಚ್ಚನ್‌, ಐಶ್ವರ್ಯಾ ರೈ ಮತ್ತು ವಿರಾಟ್‌ ಕೊಹ್ಲಿ ಬಗ್ಗೆ ಮಾತನಾಡುವುದಷ್ಠೇ ಗಂಭೀರ ವಿಷಯ ಎಂದು ರಾಹುಲ್‌ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ನ್ಯಾಯಾಂಗದಲ್ಲಿ ಪ್ರಾತಿನಿಧ್ಯ ಇಲ್ಲ:

ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 650 ನ್ಯಾಯಾಧೀಶರಿದ್ದಾರೆ. ಆದರೆ ಈ ಪೈಕಿ 100 ಜನರು ಮಾತ್ರವೇ ದೇಶದ ಜನಸಂಖ್ಯೆಯಲ್ಲಿ ಶೇ.90ರಷ್ಟಿರುವ ಸಮುದಾಯಕ್ಕೆ ಸೇರಿದವರು. ದೇಶದ ಟಾಪ್‌ 200 ಕಂಪನಿಗಳಲ್ಲಿ ಯಾವುದಕ್ಕೂ ದಲಿತ, ಆದಿವಾಸಿ ಅಥವಾ ಒಬಿಸಿ ನಾಯಕತ್ವ ಇಲ್ಲ. ದೇಶದ ಮಾಧ್ಯಮ ವಲಯ ನೋಡಿದರೆ ಅಲ್ಲೂ ಒಂದೇ ಒಂದೇ ಸಂಸ್ಥೆಯಲ್ಲಿ ಒಬಿಸಿ, ದಲಿತ ಅಥವಾ ಒಬಿಸಿ ಆ್ಯಂಕರ್‌ಗಳಿಲ್ಲ ಎಂದು ರಾಹುಲ್‌ ಹೇಳಿದರು.

Latest Videos
Follow Us:
Download App:
  • android
  • ios