ನವದೆಹಲಿ[ಜೂ.23]: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಒಂದೂವರೆ ದಶಕದಿಂದ ಮಾಡಲು ಸಾಧ್ಯವಾಗದ ಘೋಷಣೆಯೊಂದನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶನಿವಾರದಂದು ಮಾಡಿದ್ದಾರೆ. ಹೌದು ತಾನು ಇನ್ಮುಂದೆ ಅಮೇಥಿಯಲ್ಲೇ ವಾಸಿಸುತ್ತೇನೆ. ಇದಕ್ಕಾಗಿ ಗೌರಿಗಂಜ್‌ನಲ್ಲಿ ಜಮೀನು ಖರೀದಿಸಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೇ ಅಮೇಥಿಯ ಮನೆ ತನ್ನ ಅಧಿಕೃತ ನಿವಾಸವಾಗಲಿದ್ದು, ಯಾವುದೇ ಸಮಯದಲ್ಲಾದರೂ ಕ್ಷೇತ್ರದ ಜನರು ಭೇಟಿಯಾಗಲು ಬರಬಹುದು ಎಂದಿದ್ದಾರೆ.

ಸ್ಮೃತಿ ಇರಾನಿ ತನ್ನ ಸಂಸದೀಯ ಕ್ಷೇತ್ರದಲ್ಲಿ ಮನೆ ಮಾಡಿಕೊಳ್ಳುವುದರಿಂದ, ಮುಂದಿನ ದಿನಗಳಲ್ಲಿ ಅವರು ತಮ್ಮ ಕ್ಷೇತ್ರ ಹಾಗೂ ಅಲ್ಲಿನ ಜನರೊಂದಿಗೆ ಉತ್ತಮ ಸಂಬಂಧವಿಟ್ಟುಕೊಳ್ಳುತ್ತಾರೆಂಬುವುದು ಸ್ಪಷ್ಟವಾಗಿದೆ. ತಮ್ಮ ನಿವಾಸದ ಕುರಿತಾಗಿ ಘೋಷಣೆ ಮಾಡುವ ಸಂದರ್ಭದಲ್ಲಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಘೋಷಣೆಗಳನ್ನೂ ಮಾಡಿದ್ದಾರೆ.

ರಾಹುಲ್ ಗಾಂಧಿ 2004 ರಿಂದ 2019ರ ಲೋಕಸಭಾ ಚುನಾವಣೆಯವರೆಗೆ ಅಮೇಥಿಯನ್ನು ಪ್ರತಿನಿಧಿಸಿದ್ದರು. 1999ರಲ್ಲಿ ಅವರ ತಾಯಿ ಸೋನಿಯಾ ಗಾಂಧಿ ಈ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿದ್ದರು. ಅಮೇಥಿ ಕ್ಷೇತ್ರದಲ್ಲಿ ನಿರಂತರ ಗೆದ್ದು ಬಂದಿದ್ದ ಗಾಂಧೀ ಕುಟುಂಬ ಈವರೆಗೂ ಅಲ್ಲಿ ಮನೆ ಮಾಡಿಕೊಂಡಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡುವ ವೇಳೆ ಅಲ್ಲಿನ ಅತಿಥಿ ಗೃಹದಲ್ಲಿ ಉಳಿದುಕೊಳ್ಳುವ ಸಂಪ್ರದಾಯ ಅನುಸರಿಸುತ್ತಿದ್ದರು.

ಶನಿವಾರದಂದು ತನ್ನ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿದ ಸ್ಮೃತಿ ಇರಾನಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಾ 'ಪ್ರಖ್ಯಾತ ಜನರು ಇಲ್ಲಿನ ಸಂಸದರಾಗಿ ಆಯ್ಕೆಯಾದ ಬಳಿಕ 5 ವರ್ಷಗಳವರೆಗೆ ನಾಪತ್ತೆಯಾಗುತ್ತಿದ್ದರು ಹಾಗೂ ಅಮೇಥಿಯ ಜನ ತಮ್ಮ ನಾಯಕನಿಗಾಗಿ ದೆಹಲಿಯವರೆಗೆ ಹುಡುಕಾಡುತ್ತಿದ್ದರು, ಹೀಗಿದ್ದರೂ ಅವರು ಮಾತ್ರ ಸಿಗುತ್ತಿರಲಿಲ್ಲ. ಆಧರೆ ಈ ಬಾರಿ ಅಮೇಥಿಯ ಜನರು ಈ ಪ್ರಸಿದ್ಧ ಜನರಿಗೆ ವಿದಾಯ ಹೇಳಿದ್ದಾರೆ ಹಾಗೂ ಅಭಿವೃದ್ಧಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಓರ್ವ ಸಾಮಾನ್ಯ ಕುಟುಂಬ ಸದಸ್ಯೆಗೆ ಅವಕಾಶ ನೀಡಿದ್ದಾರೆ. ನಾನು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ' ಎಂದಿದ್ದಾರೆ.