ನವದೆಹಲಿ[ಡಿ.12]: ಕಾಂಗ್ರೆಸ್‌ಮುಕ್ತ ಭಾರತ ನಿರ್ಮಿಸುವುದಾಗಿ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ದೊಡ್ಡ ಆಘಾತ ನೀಡಿದೆ. ಕಾಂಗ್ರೆಸ್‌ಮುಕ್ತ ಭಾರತ ಸದ್ಯಕ್ಕೆ ಸಾಧ್ಯವಿಲ್ಲ ಮತ್ತು 2019ರ ಲೋಕಸಭೆ ಚುನಾವಣೆಯನ್ನು ಗೆಲ್ಲುವುದು ಬಿಜೆಪಿಗೆ ಸುಲಭವಿಲ್ಲ ಎಂಬ ಸಂದೇಶವನ್ನು ಏಕಕಾಲಕ್ಕೆ ಈ ಫಲಿತಾಂಶ ನೀಡಿದೆ.

ಪ್ರಜಾತಂತ್ರದ ವಿಜಯ, ಭಾರತೀಯರ ಗೆಲುವು: ಕಾಂಗ್ರೆಸ್

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೆಚ್ಚುಕಮ್ಮಿ ನೆಲಕಚ್ಚಿಸಿದ್ದ ಬಿಜೆಪಿ, ನಂತರ ನಡೆದ ಬಹುತೇಕ ಯಾವುದೇ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ತಲೆಯೆತ್ತಲು ಬಿಟ್ಟಿರಲಿಲ್ಲ. ಪಂಜಾಬ್‌ ಮತ್ತು ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಾಗಿತ್ತು. ಇನ್ನುಳಿದ ಎಲ್ಲ ರಾಜ್ಯಗಳಲ್ಲೂ ಬಿಜೆಪಿಯ ಗೆಲುವಿನ ಓಟ ಮುಂದುವರೆದಿತ್ತು. ಆದರೆ, ಇದೇ ಮೊದಲ ಬಾರಿಗೆ, ಅದೂ ಲೋಕಸಭೆ ಚುನಾವಣೆಗೂ ಮುಂಚೆ, ಮೂರು ಪ್ರಮುಖ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್‌ ಪುಟಿದೆದ್ದು ನಿಂತಿದೆ. ಹಿಂದಿ ರಾಜ್ಯಗಳು, ಅದರಲ್ಲೂ ಮುಖ್ಯವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜೊತೆ ಗಡಿ ಹಂಚಿಕೊಳ್ಳುವ ಉತ್ತರ ಪ್ರದೇಶವು ಅತಿಹೆಚ್ಚು ಲೋಕಸಭಾ ಸ್ಥಾನಗಳೊಂದಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಾಗಿ ಮೋದಿ-ಅಮಿತ್‌ ಶಾ ಜೋಡಿ ತನ್ನ ರಾಜಕೀಯ ತಂತ್ರಗಾರಿಕೆಗೆ ಸಾಣೆ ಹಿಡಿಯುವ ಅನಿವಾರ್ಯತೆಯನ್ನು ಈಗಿನ ಫಲಿತಾಂಶ ಸೃಷ್ಟಿಸಿದೆ.

ಛತ್ತೀಸ್‌ಗಢದಲ್ಲಿ 15 ವರ್ಷಗಳ ಬಳಿಕ ಮುದುಡಿದ ಕಮಲ: ಸೋಲಿಗೆ 6 ಕಾರಣಗಳು

ಬಿಜೆಪಿಗೆ ಇನ್ನೂ ಆತಂಕದ ವಿಚಾರವೆಂದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣ ಸಮ-ಸಮ ಇದೆ (ಇಬ್ಬರದೂ ಶೇ.41). ರಾಜಸ್ಥಾನದಲ್ಲಿ ಕಾಂಗ್ರೆಸ್‌ನದೇ ಹೆಚ್ಚಿದೆ. ಛತ್ತೀಸ್‌ಗಢದಲ್ಲಿ ಬಿಜೆಪಿಗಿಂತ ಶೇ.10ರಷ್ಟುಹೆಚ್ಚು ಮತಗಳನ್ನು ಕಾಂಗ್ರೆಸ್‌ ಪಡೆದಿದೆ. ತೆಲಂಗಾಣದಲ್ಲಿ ಬಿಜೆಪಿಯ ಸೀಟು ಗಳಿಕೆ ಹಾಗೂ ಮತಗಳಿಕೆ ಕಡಿಮೆಯಾಗಿದೆ. ಮಿಜೋರಂನಲ್ಲಿ ಖಾತೆ ತೆರೆದಿರುವುದು ಬಿಜೆಪಿಗಾದ ಸಣ್ಣ ಲಾಭ.

'ಕೈ ಮುಕ್ತ ಭಾರತಕ್ಕೆ ಕೈ ಹಾಕಿ ತಾವೇ ಮುಕ್ತರಾಗುತ್ತಿದ್ದಾರೆ'

ಇನ್ನು, ನೋಟು ನಿಷೇಧ ಹಾಗೂ ಜಿಎಸ್‌ಟಿಯಿಂದಾದ ಸಮಸ್ಯೆಗಳ ಬಗ್ಗೆ ಜನರು ತಲೆಕೆಡಿಸಿಕೊಂಡಿಲ್ಲ ಎಂಬ ಮೋದಿ ಹಾಗೂ ಅಮಿತ್‌ ಶಾ ಅವರ ಮಾತುಗಳನ್ನೂ ಈಗಿನ ಫಲಿತಾಂಶ ಸುಳ್ಳುಮಾಡಿದೆ. ಏಕೆಂದರೆ ಈ ಎರಡು ವಿಷಯಗಳನ್ನು ಕೂಡ ಪ್ರಮುಖವಾಗಿ ಪ್ರಸ್ತಾಪಿಸಿಯೇ ಕಾಂಗ್ರೆಸ್‌ ಪಕ್ಷ ಪಂಚರಾಜ್ಯ ಚುನಾವಣೆಯಲ್ಲಿ ಪ್ರಚಾರ ನಡೆಸಿತ್ತು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಮತ್ತು ರಾಹುಲ್‌ ಗಾಂಧಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ಬಿಜೆಪಿಗಿದು ನೀಡಿದೆ.