ಜೈಪುರ[ಡಿ.11]: ರಾಜಸ್ಥಾನ ವಿಧಾನಸಭಾ ಚುನಾವಣಾ ಫಲಿತಾಂಶದ ಆರಂಭಿಕ ಅಂಕಿ ಅಂಶಗಳನ್ನು ಗಮನಿಸಿದರೆ ಕಾಂಗ್ರೆಸ್ ಬಹುಮತದತ್ತ ಸಮೀಪಿಸುತ್ತಿರುವುದು ಸ್ಪಷ್ಟವಾಗಿದೆ. ವಸುಂಧರಾ ರಾಜೆ ಸರ್ಕಾರ ಈ ಬಾರಿ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಹಾಗೂ ಕಾಂಗ್ರೆಸ್ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ. ಹೀಗಿದ್ದರೂ ಈವರೆಗೆ ಯಾರಿಗೆ ಗೆಲುವು ಸಿಗಲಿದೆ ಎಂಬುವುದು ಖಚಿತವಾಗಿಲ್ಲ. ಆದರೀಗ ಫಲಿತಾಂಶ ಸಂಪೂರ್ಣವಾಗಿ ಹೊರ ಬಿಳುವುದಕ್ಕೂ ಮುನ್ನ ಕಾಂಗ್ರೆಸ್ ನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದಿದ್ದಾರೆ. ಅಲ್ಲದೇ ಪಕ್ಷೇತರರಿಗೆ ಬೆಂಬಲ ನೀಡುವಂತೆ ಆಮಂತ್ರಿಸಿದ್ದಾರೆ.

ಸದ್ಯ ಬಂದಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಯ ಫಲಿತಾಂಶದ ಅನ್ವಯ ಕಾಂಗ್ರೆಸ್ 92, ಬಿಜೆಪಿ 82 ಹಾಗೂ ಬಿಎಸ್ ಪಿ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಓವೈಸಿಗೆ ಕಾಂಗ್ರೆಸ್ ಬೆಂಬಲ!: ರಿಸಲ್ಟ್‌ಗೂ ಮುನ್ನ ಹೈ ಡ್ರಾಮಾ

ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಗಮನಿಸಿ ಪ್ರತಿಕ್ರಿಯಿಸಿರುವ ಗೆಹ್ಲೋಟ್ 'ಬಿಜೆಪಿ ಯಾವುದೇ ಅಜೆಂಡಾ ಇಟ್ಟುಕೊಳ್ಳದೆ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಬಳಸಿದ ಭಾಷೆಯೂ ಕೆಟ್ಟದಾಗಿತ್ತು. ಇಂದು ನಮ್ಮ ದೇಶದಲ್ಲಿ ಭಯ ಮೂಡಿಸುವ ವಾತಾವರಣವಿದೆ. ಆರ್ ಬಿಐ ಗವರ್ನರ್ ರಾಜೀನಾಮೆ ನೀಡಿರುವುದು ಖೇದಕರ, ಬೇರೆ ವಿಧಿ ಇಲ್ಲದೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯ್ತು. ಇದು ಅಸಾಮಾನ್ಯ ಬೆಳವಣಿಗೆ. ರಾಹುಲ್ ಗಾಂಧಿ ರೈತರ ಸಮಸ್ಯೆ, ನಿರುದ್ಯೋಗ, ಹಣದುಬ್ಬರ ಈ ಎಲ್ಲಾ ಸಮಸ್ಯೆಗಳನ್ನು ಪ್ರಶ್ನಿಸಿದರು ಆದರೆ ಉತ್ತರವಿಲ್ಲ. ಇವರ ಅಧಿಕಾರದಿಂದ ದೆಶದಲ್ಲಿ ದುಃಖದ ವಾತಾವರಣ ನೆಲೆಸಿದೆ' ಎಂದಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಗೆಹ್ಲೋಟ್ 'ದೇಶಕ್ಕೆ ಒಳ್ಳೆ ದಿನಗಳೂ ಬಂದಿಲ್ಲ. 2 ಕೋಟಿ ಜನರಿಗೆ ಕೆಲಸವೂ ಸಿಕ್ಕಿಲ್ಲ. ನೀಡಿದ ಮಾತಿನಂತೆ ವಿದೆಶದಲ್ಲಿದ್ದ ಕಪ್ಪುಹಣ ಕೂಡಾ ಮರಳಿ ಬಂದಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೇರಲಿದೆ. ಕಾಂಗ್ರೆಸ್ ಮುಕ್ತ ಭಾರತ ರಚಿಸುತ್ತೇವೆ ಎಂದು ಹೇಳುವವರು ತಾವೇ ಮುಕ್ತರಾಗುತ್ತಿದ್ದಾರೆ. ಮೋದಿ ಸರ್ಕಾರದಿಂದ ಖುಷಿಯಾದವರು ಯಾರೂ ಇಲ್ಲ' ಎಂದಿದ್ದಾರೆ.