ನವದೆಹಲಿ[ಮೇ.03]: ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರಗಾಮಿಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಭಾರತದ ಪ್ರಯತ್ನಕ್ಕೆ 10 ವರ್ಷಗಳಿಂದ ಕಲ್ಲುಬಂಡೆಯಂತೆ ಅಡ್ಡಿಯಾಗಿದ್ದ ಚೀನಾ ಈಗ ಮೆತ್ತಗಾಗಿದ್ದು ಹೇಗೆ?

ಕೊನೆಗೂ ಭಾರತಕ್ಕೆ ಜಯ; ಮಸೂದ್ ಅಜರ್ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆ

ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ವಿಶ್ವಸಂಸ್ಥೆ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇಂತಹ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ. ಚೀನಾದ ಬದಲಾದ ನಡೆ ಹಿಂದೆ ಭಾರತದ ರಾಜತಾಂತ್ರಿಕ ಒತ್ತಡ, ಚತುರತೆ ಹಾಗೂ ಅಮೆರಿಕದಂತಹ ದೇಶಗಳ ದಾಳ ಕೂಡ ಕೆಲಸ ಮಾಡಿದೆ ಎಂದು ಮೂಲಗಳು ತಿಳಿಸಿವೆ.

1. ಅಜರ್‌ನನ್ನು ಉಗ್ರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಭಾರತಕ್ಕೆ ಮೊದಲ ಜಯ ಸಿಕ್ಕಿದ್ದು ಫೆ.21ರಂದು. ಕಾಶ್ಮೀರದಲ್ಲಿ ನಡೆದ ಉಗ್ರ ಕೃತ್ಯವೊಂದನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೊದಲ ಬಾರಿಗೆ ಹೇಳಿಕೆ ಬಿಡುಗಡೆ ಮಾಡಿತ್ತು. ಆ ಹೇಳಿಕೆಯಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಹೆಸರು ಪ್ರಸ್ತಾಪಿಸಿದ್ದು ಭಾರತಕ್ಕೆ ಅನುಕೂಲವೇ ಆಯಿತು. ಆ ಸಂಘಟನೆಯ ನಾಯಕನಿಗೇ ನಿಷೇಧ ಹೇರಬೇಕು ಎಂದು ತಾನು ವಾದಿಸುತ್ತಿರುವುದಾಗಿ ಅರ್ಥ ಮಾಡಿಸಲು ಭಾರತಕ್ಕೆ ಅವಕಾಶವಾಯಿತು.

ತನ್ನ ಸಾಕಿದ್ದ ಪಾಕಿಸ್ತಾನದಿಂದಲೇ ಉಗ್ರ ಮಸೂದ್ ಅಜರ್‌ಗೆ ಇದೆಂಥಾ ಶಾಕ್!

2. ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಅಮೆರಿಕ, ಬ್ರಿಟನ್‌ ಹಾಗೂ ಫ್ರಾನ್ಸ್‌ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವ ಮಂಡಿಸಿದವು. 2017ರಲ್ಲೂ ಈ ದೇಶಗಳು ಇಂತಹುದೇ ಪ್ರಯತ್ನ ಮಾಡಿ ವಿಫಲವಾಗಿದ್ದವಾದರೂ, ಈ ಸಲ ಭಾರತಕ್ಕೆ ಹೆಚ್ಚಿನ ರಾಷ್ಟ್ರಗಳ ಬೆಂಬಲ ದೊರೆತಿದ್ದು ವರದಾನವಾಯಿತು.

3. ಅಜರ್‌ಗೆ ನಿಷೇಧ ಹೇರುವ ಪ್ರಸ್ತಾವಕ್ಕೆ ಚೀನಾ 6 ತಿಂಗಳು ತಡೆ ನೀಡಿದರೂ ಭಾರತ ಮಾತ್ರ ಆ ದೇಶವನ್ನು ಟೀಕಿಸಲಿಲ್ಲ. ಬದಲಿಗೆ ಮಾತುಕತೆ ಮುಂದುವರಿಸಿತು. ಈ ಹಂತದಲ್ಲಿ 6 ತಿಂಗಳು ಕಾಯಲು ಆಗುವುದಿಲ್ಲ ಎಂದ ಅಮೆರಿಕ, ಮತದಾನಕ್ಕೆ ಕಾರಣವಾಗುವ ಚರ್ಚೆಯಡಿ ಅಜರ್‌ ವಿರುದ್ಧ ನಿರ್ಣಯ ಮಂಡಿಸುವುದಾಗಿ ತಿಳಿಸಿತು. ಇದರಿಂದ ಚೀನಾ ಇಕ್ಕಟ್ಟಿಗೆ ಸಿಲುಕಿತು. ವಿಶ್ವಸಂಸ್ಥೆಯ ಚರ್ಚೆಯ ವೇಳೆ ಬಹಿರಂಗವಾಗಿ ಉಗ್ರನನ್ನು ಸಮರ್ಥಿಸಿಕೊಳ್ಳಬೇಕಾದ ವಿಚಿತ್ರ ಪರಿಸ್ಥಿತಿಗೆ ದೂಡಲ್ಪಟ್ಟಿತು. ಹೀಗಾಗಿ ಲಾಭ- ನಷ್ಟಅಳೆದು ತೂಗಿ ಅಜರ್‌ ವಿಷಯದಲ್ಲಿ ತನ್ನ ಹಟ ಬಿಟ್ಟಿತು ಎಂದು ಹೇಳಲಾಗಿದೆ.

ತನ್ನ ಸಾಕಿದ್ದ ಪಾಕಿಸ್ತಾನದಿಂದಲೇ ಉಗ್ರ ಮಸೂದ್ ಅಜರ್‌ಗೆ ಇದೆಂಥಾ ಶಾಕ್!