ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಾಮೀನು ಮಂಜೂರಾಗಿದೆ.

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಶಾಸಕರಾದ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಟ್ರಯಲ್ ಕೋರ್ಟ್‌ಗೆ ಸ್ಪಷ್ಟ ಸೂಚನೆ ನೀಡಿದೆ.

Add Asianetnews Kannada as a Preferred SourcegooglePreferred

ಈ ಹಿಂದೆ ಜಾಮೀನು ರದ್ದಾಗಿದ್ದ ಹಿನ್ನೆಲೆ

ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಈ ಮೊದಲು ನೀಡಲಾಗಿದ್ದ ಜಾಮೀನನ್ನು, ಸಾಕ್ಷಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಆದರೆ ಇದೀಗ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಎಲ್ಲಾ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿರುವುದು ಹಾಗೂ ಸಾಕ್ಷ್ಯಾಧಾರ ಹಂತ ಮುಕ್ತಾಯವಾಗಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಜಾಮೀನು ನೀಡಲು ಸಮ್ಮತಿಸಿದೆ.

ವಿನಯ್ ಕುಲಕರ್ಣಿ ಪರ ವಾದ

ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಶರಣಗೌಡ ಪಾಟೀಲ್ ಅವರ ತಂಡ ನ್ಯಾಯಾಲಯದಲ್ಲಿ ವಾದ ಮಂಡಿಸಿತು. ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ತನಿಖೆ ಹಾಗೂ ಸಾಕ್ಷ್ಯ ಹಂತದಲ್ಲಿ ಇನ್ನು ಯಾವುದೇ ಅಡಚಣೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು.

ಷರತ್ತುಗಳ ನಿರ್ಧಾರ ಟ್ರಯಲ್ ಕೋರ್ಟ್‌ಗೆ, ಜಾಮೀನಿಗೆ ಸಂಬಂಧಿಸಿದ ಷರತ್ತುಗಳು, ಧಾರವಾಡ ಜಿಲ್ಲೆಗೆ ಪ್ರವೇಶ ನೀಡಬೇಕೇ ಅಥವಾ ಬೇಡವೇ ಎಂಬ ವಿಷಯ, ಇತರ ನಿಯಂತ್ರಣ ಕ್ರಮಗಳು. ಇವೆಲ್ಲವನ್ನೂ ಟ್ರಯಲ್ ಕೋರ್ಟ್ ತೀರ್ಮಾನಿಸಲಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ಮಹತ್ವ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣವು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಪ್ರಭಾವಶಾಲಿ ರಾಜಕೀಯ ವ್ಯಕ್ತಿಯೊಬ್ಬ ಆರೋಪಿಯಾಗಿರುವ ಕಾರಣದಿಂದಾಗಿ ನ್ಯಾಯಾಲಯದ ಪ್ರತಿ ಹಂತವೂ ಮಹತ್ವ ಪಡೆದುಕೊಂಡಿದೆ. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಜಾಮೀನು ಆದೇಶದೊಂದಿಗೆ, ಪ್ರಕರಣದ ವಿಚಾರಣೆ ತ್ವರಿತವಾಗಿ ಅಂತಿಮ ಹಂತ ತಲುಪುವ ನಿರೀಕ್ಷೆ ವ್ಯಕ್ತವಾಗಿದೆ.

ಜೂನ್ 15, 2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆಯಾಗಿತ್ತು.ಸಪ್ತಾಪುರದಲ್ಲಿರುವ ತಮ್ಮ ಜಿಮ್‌ನಲ್ಲೇ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನಂತರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು. ಈ ಪ್ರಕರಣದಲ್ಲಿ ಒಟ್ಟು 21ಕ್ಕೂ ಹೆಚ್ಚು ಮಂದಿ ಆರೋಪಿಗಳಿದ್ದಾರೆ. ರಾಜಕೀಯ ವೈಷಮ್ಯದಿಂದ ವಿನಯ್ ಕುಲಕರ್ಣಿ ಅವರು ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬುದು ಆರೋಪ. 2021ರಲ್ಲಿ ಜಾಮೀನು ಪಡೆದಿದ್ದ ವಿನಯ್ ಕುಲಕರ್ಣಿ, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂಬ ಆರೋಪದಡಿ ಜಾಮೀನು ಸುಪ್ರೀಂ ಕೋರ್ಟ್‌ನಲ್ಲಿ 2025ರ ಜೂನ್‌ನಲ್ಲಿ ರದ್ದುಗೊಂಡು ಮತ್ತೆ ಜೈಲು ಸೇರಿದ್ದರು.