ನವದೆಹಲಿ(ಸೆ.19): ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷ ಜನರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಮಮತಾ, ಎನ್‌ಆರ್‌ಸಿ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎನ್‌ಆರ್‌ಸಿ ಪ್ರಕ್ರಿಯೆಯನ್ನು ಪುನರ್‌ ಪರಿಶೀಲನೆ ಮಾಡುವಂತೆ ಶಾ ಅವರಿಗೆ ಮನವಿ ಮಾಡಿದರು.

ಇದೇ ವೇಳೆ ಪಶ್ವಿಮ ಬಂಗಾಳದಲ್ಲಿ ಕೇಂದ್ರದ ಅನಗತ್ಯ ಹಸ್ತಕ್ಷೇಪದ ಕುರಿತು ಪ್ರಸ್ತಾಪಿಸಿದ ಮಮತಾ, ಈ ಅನಗತ್ಯ ರಾಜಕೀಯ ಹಸ್ತಕ್ಷೇಪಗಳು ಕೇಂದ್ರ-ರಾಜ್ಯ ಸರ್ಕಾರಗಳನ್ನು ಮತ್ತಷ್ಟು ದೂರ ತಳ್ಳುತ್ತಿವೆ ಎಂದು ಶಾ ಅವರಿಗೆ ಮನವರಿಕೆ ಮಾಡಿದರು.

ನಿನ್ನೆ(ಸೆ.18) ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ, ರಾಜ್ಯದ ಹೆಸರು ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.