ಅಂಬರೀಶ್ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ನಟಿಸಿದ್ದ ಪ್ರೀತಿಯ ಕಿಚ್ಚ, ಅಂಬಿ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಚಿರನಿದ್ರೆಗೆ ಜಾರಿದ್ದ ನೆಚ್ಚಿನ ಅಂಬಿ ಮಾಮನನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಂಡ್ಯದ ಗಂಡು ವಿಧಿವಶರಾದ ಸಮಯದಿಂದ ಟ್ವಿಟರ್ ನಲ್ಲಿ ಮೌನ ತಾಳಿದ್ದ ಕಿಚ್ಚ, ಕೊನೆಗೂ ತಮ್ಮ ಭಾವನೆಗಳನ್ನು ಪತ್ರವೊಂದರ ಮೂಲಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಬಾಲ್ಯದಲ್ಲಿ ಅಂಬರೀಶ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋ ಒಂದನ್ನು ಶೇರ್ ಮಾಡಿ ನಿಜಕ್ಕೂ ಅಂಬಿ ಅಗಲುವಿಕೆ ನೋವು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.

ತಮ್ಮ ಗೂಗಲ್ ಅಕೌಂಟ್ ನಲ್ಲಿ ಅಂಬಿ ಮಾಮನಿಗಾಗಿ ಪ್ರೀತಿಯ ದೀಪೂ ಪತ್ರವೊಂದನ್ನೂ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಲೆಟರ್ ನಲ್ಲಿ ತಮ್ಮ ಹಾಗೂ ಅಂಬಿ ನಡುವಿನ ಬಾಂಧವ್ಯವನ್ನು ಹೊರ ಹಾಕಿದ್ದು, ಓದುಗರನ್ನು ಭಾವುಕರನ್ನಾಗಿಸುತ್ತದೆ.

ಕೆಲವೊಮ್ಮೆ ಕೆಟ್ಟ ಕನಸುಗಳು ಬಿದ್ದಾಗ, ನಿಮಗೆ ನೀವೇ 'ಏಳಮಾ.. ದಯವಿಟ್ಟು ಮೇಲೇಳು.. ಅದರಿಂದ ದುಃಸ್ವಪ್ನ ಕೊನೆಗೊಳ್ಳಲಿ' ಎಂದು ಪ್ರಾರ್ಥಿಸುವುದುಂಟು ಈ ದಿನವೂ ಹಾಗೆಯೇ..

ಅದು ಕೆಟ್ಟ ಕನಸು ಕಂಡು "ನಾನು ಏಳುತ್ತೇನೆ, ಈ ಮೂಲಕ ನಾನು ಕಂಡ ಕೆಟ್ಟ ಕನಸು ಇಲ್ಲೇ ಕೊನೆಯಾಗಲಿ" ಎಂದು ನಿನಗೇ ನೀನು ಹೇಳಿಕೊಳ್ಳುವ, ದಿನದಂತಿತ್ತು . 

ಸಿನಿಲೋಕಕ್ಕೆ ಇಂದು ಮತ್ತೊಂದು ಬರಸಿಡಿಲು ಬಂದೆರಗಿದೆ, ಆದರೆ ಈ ಬಾರಿಯಾದ ನಷ್ಟ ಬಹಳ ದೊಡ್ಡದು. ನಾವಿಂದು ಮತ್ತೊಬ್ಬ ದಿಗ್ಗಜನನ್ನು ಕಳೆದುಕೊಂಡೆವು. ನಾವಿಂದು ನಮ್ಮ ನಾಯಕ, ತಂದೆ, ಮಾರ್ಗದರ್ಶಕ, ಆಶೀರ್ವಾದ ನೀಡುತ್ತಿದ್ದ ಕೈಗಳು, ನಮ್ಮ ಪರವಾದ ಧ್ವನಿ, ಒಂದು ಅಪೂರ್ವ ಶಕ್ತಿ, ಬಲ, ನೋವಿಗೆ ಹೆಗಲಾಗುತ್ತಿದ್ದ ಜೀವ, ಓರ್ವ ಅತ್ಯುತ್ತಮ ಗೆಳೆಯ ಒಟ್ಟಾಗಿ ಓರ್ವ ಅದ್ಭುತ ವ್ಯಕ್ತಿತ್ವವುಳ್ಳ ದಿಗ್ಗಜನನ್ನು ಕಳೆದುಕೊಂಡು ಅನಾಥರಾಗಿದ್ದೇವೆ. 

ಅದು ಹೃದಯ ವಿದ್ರಾವಕ ಸುದ್ದಿ ಆದರೆ ದಂತಕಥೆಯೊಂದು ಚಿರನಿದ್ರೆಗೆ ಜಾರಿರುವುದನ್ನು ನೋಡುವುದು ಹೃದಯ ಛಿದ್ರಗೊಳಿಸುವಂತಿದೆ. ನಾವೆಲ್ಲರೂ ಅವರನ್ನು ಓರ್ವ ಕ್ರಿಯಾಶೀಲ ವ್ಯಕ್ತಿಯನ್ನಾಗಿ ನೊಡಿದ್ದೇವೆ. ಹೋದಲೆಲ್ಲಾ ಅವರ ವರ್ಚಸ್ಸಿಗೆ ಗೌರವ ಸಿಗುತ್ತಿತ್ತು. ಅವರನ್ನು ಹೋಲುವ ವ್ಯಕ್ತಿ ಬೇರೊಬ್ಬರಿಲ್ಲ. ಅವರು ತಮ್ಮ ಜೀವನವನ್ನು ಯಾವುದೇ ಪರಿಧಿಯೊಳಗೆ ಜೀವಿಸಲಿಲ್ಲ. ಅಲ್ಲಿ ಯಾವುದೇ ಇತಿ ಮಿತಿಗಳಿರಲಿಲ್ಲ ಹೀಗಾಗೇ ಅವರೊಬ್ಬ ರಾಜನಂತೆ ಬದುಕಿದರು. ಅವರು ದೇವರ ವರ ಯಾಕೆಂದರೆ ಅವರನ್ನು ಇಷ್ಟ ಪಡದ ವ್ಯಕ್ತಿಯೇ ಇರಲಿಲ್ಲ, ಈವರೆಗೂ ಅವರನ್ನು ಕಡೆಗಣಿಸುವ, ತಿರಸ್ಕರಿಸುವ ವ್ಯಕ್ತಿಯನ್ನು ಕಂಡಿಲ್ಲ. ಹೋದಲೆಲ್ಲಾ ಗೆಳೆತನ ಸಂಪಾದಿಸುತ್ತಿದ್ದ ಅಪರೂಪದ ವ್ಯಕ್ತಿ. ಆದರೆ ಹೋದಲೆಲ್ಲಾ ಗೆಳೆಯರನ್ನು ಸಂಪಾದಿಸಿ, ಒಬ್ಬನೇ ಒಬ್ಬ ಶತ್ರುಗಳಿಲ್ಲದೆ ಬದುಕಲು ಹೇಗೆ ಸಾಧ್ಯ ಎಂಬುವುದು ನನ್ನನ್ನು ಇಂದಿಗೂ ಕಾಡುತ್ತಿರುವ ನಿಗೂಢ ಪ್ರಶ್ನೆ.

ಕೆಲ ಕ್ಷಣಗಳನ್ನು ಮತ್ತೊಮ್ಮೆ ಅನುಭವಿಸಲು ಜೀವಿಸಲು ಸಾಧ್ಯವಿರಬೇಕಿತ್ತು. ಗಡಿಯಾರವನ್ನು ತಿರುಗಿಸಿದಂತೆ ಮತ್ತೆ ಕಳೆದು ಹೋದ ಸಮಯವನ್ನು ಜೀವಿಸಲು ಸಾಧ್ಯವಾಗಬೇಕಿತ್ತು... aದು ಸಾಧ್ಯವಾಗಿದ್ದರೆ  ಅವರ ಕಾಲಿಗೆ ನಮಸ್ಕರಿಸಿ ಮಾಡಿದ್ದ ನನ್ನ ಸಿನಿ ಬದುಕಿನ ಮೊದಲ ದಿನಕ್ಕೆ ಹೋಗುತ್ತಿದ್ದೆ. ಶಿವಮೊಗ್ಗದಲ್ಲಿ ಅಂದು ಕೇಳಿಸಿಕೊಂಡಿದ್ದ ಡೋರ್ ಬೆಲ್ ಮತ್ತೊಮ್ಮೆ ಕೇಳಿಸಿಕೊಂಡು, ಬಾಗಿಲು ತೆಗೆದಾಗ ಮತ್ತೊಮ್ಮೆ ಕುರ್ತಾ ಧರಿಸಿ, ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡಿದ್ದ ಆ ಎತ್ತರದ ವ್ಯಕ್ತಿಯನ್ನು ನೋಡುತ್ತಿದ್ದೆ, ಆಗ ಹಿಂದಿನಿಂದ ಬಂದ ನನ್ನ ತಂದೆ 'ಒಳಗೆ ಬಾರಯ್ಯ ಅಂಬಿ' ಎನ್ನುವ ಧ್ವನಿ ಕೇಳಲು ಸಿಗುತ್ತಿತ್ತು.

ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಮಾಮಾ
-ದೀಪು

ಇದನ್ನೂ ಓದಿ: [ವಿಡಿಯೋ] ಅಂಬಿ ವಿದಾಯ: ದುಖ: ತಾಳಲಾರದೇ ಅತ್ತು ಬಿಟ್ಟ ಕಿಚ್ಚ

ಎಲ್ಲಾ ಸಂದರ್ಭಗಳಲ್ಲೂ ಟ್ವಿಟರ್‌ನಲ್ಲಿ ಆ್ಯಕ್ಟಿವ್ ಆಗುತ್ತಿದ್ದ ಕಿಚ್ಚನ ಮೌನ ಈ ಬಾರಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಕಿಚ್ಚ ಯಾಕಾಗಿ ಟ್ವೀಟ್ ಮಾಡಿಲ್ಲ ಎಂಬ ಗೊಂದಲದಲ್ಲಿದ್ದರು. ಹೀಗಿರುವಾಗ ಅವರು ಅಂಬಿ ಅಂತಿಮ ದರ್ಶನ ಪಡೆದು ಬಿಕ್ಕಿ ಬಿಕ್ಕಿ ಅತ್ತಾಗ ಎಲ್ಲರ ಕಣ್ಣಂಚಿನಲ್ಲೂ ನೀರು ತರಿಸಿತ್ತು. ಇದಾದ ಬಳಿಕ ಈಗ ತಮ್ಮ ಟ್ವಿಟರ್‌ನಲ್ಲಿ ಅಂಬರೀಶ್ ಜೊತೆಗಿರುವ ಫೋಟೋ ಶೇರ್ ಮಾಡಿ, ಬರೆದಿರುವ ಪತ್ರ ಅಭಿಮಾನಿಗಳನ್ನು ಮತ್ತಷ್ಟು ಭಾವುಕರನ್ನಾಗಿಸಿದೆ.