ಎಂದೂ ಸ್ಟಾರ್‌ಗಿರಿ ಕಳೆದುಕೊಳ್ಳದ ಎವರ್‌ಸ್ಟಾರ್
ಡೋಂಟ್‌ಕೇರ್ ಪರ್ಸನಾಲಿಟಿ, ಪ್ರೀತಿಯಲ್ಲಿ ತುಂಬ ಕ್ಲಾರಿಟಿ | ಎಲ್ಲರಿಗೂ ಅಚ್ಚುಮೆಚ್ಚು, ಯಾರಿಗೂ ಇರಲಿಲ್ಲ ಹೊಟ್ಟೆಕಿಚ್ಚು | ಕಪಟತನ ಕೂಡಲೇ ಕಂಡುಹಿಡಿಯುತ್ತಿದ್ದ ಜಾಣ | ಸ್ಪೀಡ್ ಅಂದರೆ ಪ್ರಾಣ ಎಲ್ಲೂ ನಿಲ್ಲದ ಬಾಣ | ರಸಿಕತೆಯಲ್ಲಿ ನಂಬರ್‌ವನ್, ಹಾಸ್ಯಪ್ರಜ್ಞೆಯ ಕಿಂಗ್‌ಪಿನ್ | ಎಲ್ಲೆಲ್ಲಿಯೂ ಸಲ್ಲುವ ಸ್ನೇಹಪರತೆ ಕಷ್ಟ ಕಂಡಾಗ ಉಕ್ಕುತ್ತಿತ್ತು ಅನುಕಂಪದ ಒರತೆ | ಜೀವನಪ್ರೀತಿಯ ಅಪೂರ್ವ ಕಲಾವಿ
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಒಂದು ಮರದಕೆಳಗೆ ಕುಳಿತಿದ್ದರು. ಅದೇ ಹೊತ್ತಿಗೆ ಒಬ್ಬರು ಕಾರು ಓಡಿಸುತ್ತಾ ಬಂದು ಅಂಬರೀಷ್ ಕುಳಿತಿದ್ದ ಜಾಗದ ಹತ್ತಿರ ಕಾರು ನಿಲ್ಲಿಸಿ, ನಮಸ್ಕಾರ ಮಾಡಿದರು. ಅಂಬರೀಷ್ ಅವರನ್ನು ನೋಡುತ್ತಲೇ, ಏನಯ್ಯಾ.. ಇನ್ನೂ ಡ್ರೈವರ್ ಕೆಲಸಾ ಮಾಡ್ತಿದ್ದೀಯೇನಯ್ಯ..ರಿಟೈರ್ ಆಗ್‌ಬಿಟ್ಟು ಮನೇಲಿ ಆರಾಮಾಗಿರೋದು ನೋಡಲೋ ಎಂದು ರೇಗಿಸಿದರು. ಅದನ್ನು ಕೇಳುತ್ತಲೇ ಆ ಡ್ರೈವರ್ ಕೂಡ ಅದೇ ಧಾಟಿಯಲ್ಲಿ ‘ಹೋಗಲೋ, ನೀನೇನೋ ದುಡ್ಡು ಮಾಡ್ಕಂಡು ಸೆಟ್ಲ್ ಆಗಿದ್ದೀಯಾ. ನಮ್ಮಂಥೋರು ಹೊಟ್ಟೆ ಪಾಡಿಗೆ ದುಡೀಲೇಬೇಕಲ್ಲೋ, ಯಾವೋನು ಊಟ ಕೊಡ್ತಾನೆ ನಮಗೆ’ ಅಂತ ಉತ್ತರಿಸಿದರು. ಆಯ್ತಾಯ್ತು.. ಹೋಗು.. ಹೋಗು... ಅಂತ ಅಂಬರೀಷ್ ಜೋರಾಗಿ ನಕ್ಕರು.
ಆಗ ಅಂಬರೀಷ್ ಸೂಪರ್‌ಸ್ಟಾರ್. ಅವರ ಜೊತೆ ಮಾತಾಡುವುದಕ್ಕೆ ನಿರ್ಮಾಪಕರೇ ಅಂಜುತ್ತಿದ್ದರು. ಅಂಥ ಹೊತ್ತಲ್ಲಿ ಒಬ್ಬ ಡ್ರೈವರ್ ತನ್ನ ಹಳೆಯ ನೆಂಟಸ್ತನದಿಂದಾಗಿ ಅಂಬರೀಷ್ ಅವರನ್ನು ಏಕವಚನದಲ್ಲಿ ಮಾತಾಡುವ ಸಲಿಗೆ ತೋರಿಸಬಹುದಾಗಿತ್ತು. ಹಾಗೆ ಮಾಡುವುದರಿಂದ ತನ್ನ ಘನತೆಗೆ ಕುಂದು ಅಂತ ಅಂಬರೀಷ್ ಯಾವತ್ತೂ ಭಾವಿಸಿದವರೇ ಅಲ್ಲ.
ಸ್ಟಾರ್‌ಗಿರಿಯನ್ನು ಧಿಕ್ಕರಿಸಿ ಬದುಕಿದವರು ಅಂಬರೀಷ್. ಯಾವತ್ತೂ ಅವರು ಹೋಟೆಲುಗಳಲ್ಲಿ ಪ್ರತ್ಯೇಕ ಕೋಣೆಯಲ್ಲಿ ಗುಟ್ಟಾಗಿ ಕುಳಿತು ಊಟ ಮಾಡಿದವರೇ ಅಲ್ಲ. ಎಲ್ಲರ ನಡುವೆಯೇ ಇರುತ್ತಿದ್ದರು. ಎಲ್ಲರನ್ನೂ ಪ್ರೀತಿಸುತ್ತಿದ್ದರು. ಎಲ್ಲರೂ ತನಗೆ ಬೇಕು ಎಂಬಂತೆ ಇದ್ದವರು.
ಕನ್ನಡ ಚಿತ್ರರಂಗದ ಪಾಲಿಗೆ ಅಂಬರೀಷ್ ಹಿರಿಯಣ್ಣ, ಗೆಳೆಯ ಆಗಿದ್ದವರು. ವಿವಾದಗಳು ಎದುರಾದಾಗೆಲ್ಲ ಎಲ್ಲರೂ ಅಂಬರೀಷ್ ಏನಂತಾರೋ ಹಾಗೆ ಮಾಡ್ತೀವಿ ಅಂತ ಅಂದುಬಿಡುತ್ತಿದ್ದರು. ಅದಕ್ಕೆ ತಕ್ಕಂತೆ ಅಂಬರೀಷ್ ಯಾರಿಗೂ ನೋವಾಗುವಂತೆ ವಿವಾದ ಪರಿಹರಿಸುತ್ತಿರಲಿಲ್ಲ. ಎಲ್ಲರನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಇಬ್ಬರಿಗೂ ನ್ಯಾಯ ಸಲ್ಲುವಂತೆ ಮಾಡುತ್ತಿದ್ದರು. ಜಗಳ ಆಡುತ್ತಾ ಬಂದರೆ ನಗಿಸಿ, ಗೆಳೆಯರನ್ನಾಗಿ ಕಳಿಸುತ್ತಿದ್ದರು.
ಅಂಬರೀಷ್ ಮುಚ್ಚುಮರೆ ಮಾಡದೇ ಬದುಕಿದ ಮುಕ್ತಮಾನವ. ಅವರ ಖಯಾಲಿಗಳು ಎಲ್ಲರಿಗೂ ಗೊತ್ತಿದ್ದವು. ಅವರು ಕದ್ದು ಸಿಗರೇಟು ಸೇದುತ್ತಿರಲಿಲ್ಲ, ಕದ್ದು ಗುಂಡು ಹಾಕುತ್ತಿರಲಿಲ್ಲ. ಕದ್ದುಮುಚ್ಚಿ ಗೆಳತಿಯರ ಜೊತೆ ಓಡಾಡುತ್ತಿರಲಿಲ್ಲ. ರೇಸು, ಕ್ರಿಕೆಟ್ಟು, ಇಸ್ಪೀಟು ಆಟಗಳು ಕೂಡ ಎಲ್ಲರಿಗೂ ಗೊತ್ತಿದ್ದವು. ಆದರೆ ಯಾವುದಕ್ಕೂ ಅವರು ದಾಸರಾಗಲೂ ಇಲ್ಲ. ಕನ್ನಡದ ಬಹುತೇಕ ನಟರು ಸಾರ್ವಜನಿಕವಾಗಿ ಸಿಗರೇಟು ಸೇದಲು ಹಿಂಜರಿಯುತ್ತಿದ್ದರು. ಅಭಿಮಾನಿಗಳು ನೋಡುತ್ತಾರೆ ಎಂದು ಭಯಪಡುತ್ತಿದ್ದರು. ಅಂಬರೀಷ್ ಅಂಥ ಯಾವುದೇ ಹಿಂಜರಿಕೆ ತೋರಿದವರೇ ಅಲ್ಲ.
ಅಂಬರೀಷ್ ಕೊನೆಕೊನೆಯ ತನಕವೂ ತಾವೇ ಕಾರು ಓಡಿಸುತ್ತಿದ್ದರು. ಡ್ರೈವರ್ ಇದ್ದರೂ ಆತನನ್ನು ಹಿಂದೆ ಕೂತಿರಲು ಹೇಳುತ್ತಿದ್ದರು. ಅವರ ಕಾರಿಗೆ ಕಪ್ಪು ಗಾಜು ಇರಲಿಲ್ಲ. ಅವರು ಕಾರಿನ ಕಿಟಕಿ ತೆರೆದಿಟ್ಟು, ಒಂದು ಕೈಯಲಿ ಸಿಗರೇಟು ಹಿಡಕೊಂಡು, ಆ ಕೈಯನ್ನು ಹೊರಗೆ ಹಾಕಿ, ಒಂದೇ ಕೈಯಲ್ಲಿ ಕಾರು ಓಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದಾರಿಯಲ್ಲಿ ಯಾರಾದರೂ ಸಿಕ್ಕರೆ ಅಂಬರೀಷ್ ಕೈಯೆತ್ತಿ ಅವರಿಗೆ ಪ್ರತಿ ನಮಸ್ಕಾರ ಮಾಡುತ್ತಿದ್ದರು. ಕೆಲವೊಮ್ಮೆ ನಕ್ಕು ಸುಮ್ಮನಾಗುತ್ತಿದ್ದರು. ಅಭಿಮಾನಿಗಳಿಂದ ಪಾರಾಗುವ ಪ್ರಯತ್ನವನ್ನಂತೂ ಅವರು ಮಾಡುತ್ತಲೇ ಇರಲಿಲ್ಲ.
ಅಂಬರೀಷ್ ಕಾಲಿಟ್ಟೊಡನೆ ಇಡೀ ಪರಿಸರಕ್ಕೊಂದು ಹೊಸ ಹುರುಪು ಬರುತ್ತಿತ್ತು. ಯಾರ ಜೊತೆಗೂ ಅವರು ಜಗಳ ಆಡುತ್ತಿರಲಿಲ್ಲ.ಎಲ್ಲರನ್ನೂ ತಮ್ಮದೇ ಶೈಲಿಯಲ್ಲಿ ಬೈಯುತ್ತಿದ್ದರು. ಅಂಬರೀಷ್ ಬೈಯದೇ ಹೋದರೆ ತಾವೇನೋ ತಪ್ಪು ಮಾಡಿದ್ದೇವೆ ಎಂಬ ಪಾಪಪ್ರಜ್ಞೆಯಲ್ಲೇ ತೊಳಲಾಡುತ್ತಿರುವಂತೆ ಕೂತಿರುತ್ತಿದ್ದರು. ಅಂಬರೀಷ್ ಬೈದರೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು.
ಸಿನಿಮಾ ನಿರ್ಮಾಪಕರ ಪಾಲಿಗೂ ಅಂಬರೀಷ್ ಗೆಳೆಯನಂತಿದ್ದರು. ಅವರು ಸಂಭಾವನೆಗಾಗಿ ಒತ್ತಾಯಿಸಿದ್ದು, ದುಡ್ಡು ಕೊಡು ಎಂದು ಪೀಡಿಸಿದ್ದೆಲ್ಲ ಇಲ್ಲವೇ ಇಲ್ಲ. ಸಿನಿಮಾ ರಂಗದಲ್ಲೂ ಅವರು ಯಾವತ್ತೂ ನಂಬರ್ ವನ್, ನಂಬರ್ ಟೂ ರೇಸಿಗೆ ಬಲಿಯಾದವರಲ್ಲ. ತಮ್ಮ ಸಿನಿಮಾಗಳನ್ನು ತಾವೇ ನೋಡಿದವರೂ ಅಲ್ಲ. ನಿಮ್ಮ ಕನಸಿನ ಪಾತ್ರ ಯಾವುದು ಅಂತ ಪತ್ರಕರ್ತೆ ಕೇಳಿದಾಗ ಅಂಬರೀಷ್ ಉತ್ತರ ಕೊಟ್ಟದ್ದು ಹೀಗೆ; ಅದನ್ನೆಲ್ಲ ಇಲ್ಯಾಕ್ ಕೇಳ್ತೀಯ. ಕನಸಲ್ಲೇ ಬಂದ್ ಕೇಳು, ಕನಸಲ್ಲೇ ಉತ್ತರ ಕೊಡ್ತೀನಿ.
ಸಿನಿಮಾ ಪತ್ರಕರ್ತರ ಬಗ್ಗೆ ಅಂಬರೀಷ್ ಅವರಿಗೆ ವಿಶೇಷ ಪ್ರೀತಿ ಇತ್ತು. ಅವರ ಜೊತೆ ಕೂತಾಗೆಲ್ಲ ತಮ್ಮ ಹಳೆಯ ಕತೆಗಳನ್ನು ಹೇಳುತ್ತಿದ್ದರು. ಪತ್ರಕರ್ತರ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದರು. ಪತ್ರಿಕಾಗೋಷ್ಠಿಯಲ್ಲೂ ತೀರಾ ಬೋರು ಹೊಡೆಸುವ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿರಲಿಲ್ಲ. ತಮ್ಮದೇ ಧಾಟಿಯಲ್ಲಿ ತರಲೆಯಾಗಿ ಉತ್ತರ ಕೊಟ್ಟು ನಗಿಸುತ್ತಿದ್ದರು.
ಸಿನಿಮಾ ಪತ್ರಕರ್ತರ ಬಗ್ಗೆ ಅಂಬರೀಷ್ ಅವರಿಗೆ ವಿಶೇಷ ಪ್ರೀತಿ ಇತ್ತು. ಅವರ ಜೊತೆ ಕೂತಾಗೆಲ್ಲ ತಮ್ಮ ಹಳೆಯ ಕತೆಗಳನ್ನು ಹೇಳುತ್ತಿದ್ದರು. ಪತ್ರಕರ್ತರ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದರು. ಪತ್ರಿಕಾಗೋಷ್ಠಿಯಲ್ಲೂ ತೀರಾ ಬೋರು ಹೊಡೆಸುವ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿರಲಿಲ್ಲ. ತಮ್ಮದೇ ಧಾಟಿಯಲ್ಲಿ ತರಲೆಯಾಗಿ ಉತ್ತರ ಕೊಟ್ಟು ನಗಿಸುತ್ತಿದ್ದರು.
ಒಮ್ಮೆ ಪತ್ರಕರ್ತರೊಬ್ಬರ ಕಾರು ಜೆಸಿ ರಸ್ತೆಯಲ್ಲಿ ಪೆಟ್ರೋಲ್ ಇಲ್ಲದೇ ನಿಂತಿತ್ತು. ಬೆಳಗಿನ ಹೊತ್ತಾಗಿದ್ದರಿಂದ ವಾಹನಗಳ ದಟ್ಟ ಸಂದಣಿ ಇತ್ತು. ಎಲ್ಲರೂ ನಿಂತ ಕಾರನ್ನು ಶಪಿಸಿ ಮಂದೆ ಹೋಗುತ್ತಿದ್ದರು. ಪತ್ರಕರ್ತರು ಮುಂದೇನು ಮಾಡುವುದು ಎಂದು ಗೊತ್ತಾಗದೇ ನಿಂತಿದ್ದರು. ಅಷ್ಟು ಹೊತ್ತಿಗೆ ಅವರ ಮುಂದೆ ಒಂದು ಕಾರು ಬಂದು ನಿಂತಿತು. ಅಂಬರೀಷ್ ಕಾರು ಡ್ರೈವ್ ಮಾಡುತ್ತಿದ್ದರು. ಪತ್ರಕರ್ತರನ್ನು ನೋಡುತ್ತಿದ್ದಂತೆ ಏನು ಸಮಸ್ಯೆ ಎಂದು ವಿಚಾರಿಸಿದ ಅಂಬರೀಷ್, ಪೆಟ್ರೋಲ್ ಇಲ್ಲ ಅಂದಾಗ ಅಂಬರೀಷ್ ‘ಊರಿನ ಸುದ್ದಿಯೆಲ್ಲ ಬರೀತೀರಿ, ಕಾರಲ್ಲಿ ಪೆಟ್ರೋಲ್ ಇದೆಯೋ ಇಲ್ವೋ ನೋಡ್ಕೋಬೇಕು ಅಂತ ಗೊತ್ತಾಗಲ್ವಾ?’ ಎಂದು ಕಾಲೆಳೆದು ಹೊರಟು ಹೋದರು. ಐದೇ ನಿಮಿಷಕ್ಕೆ ಐದು ಲೀಟರ್ ಪೆಟ್ರೋಲ್ ಸಮೇತ ಹಾಜರಾಗಿ, ಆ ಪತ್ರಕರ್ತರ ಕೈಗೆ ಕೊಟ್ಟು, ಅಲ್ಲಿಂದ ತೆರಳಿದ್ದರು.
ತಾನು ನಟ, ರೆಬೆಲ್ ಸ್ಟಾರ್, ಜನಪ್ರಿಯ ತಾರೆ ಅನ್ನುವುದನ್ನೆಲ್ಲ ಅಂಬರೀಷ್ ಬಟ್ಟೆಯಲ್ಲಿ ಕಟ್ಟಿ ಅಟ್ಟಕ್ಕೆ ಎಸೆದು, ಎಲ್ಲರೊಳಗೆ ಒಂದಾಗಬಲ್ಲ ಹೃದಯವಂತರಾಗಿದ್ದರು. ಅದೇ ಅವರನ್ನು ಅಜಾತಶತ್ರುವನ್ನಾಗಿ ಮಾಡಿತ್ತು. ಹೀಗಾಗಿಯೇ ಅವರು ಸಿನಿಮಾ ಮಾಡದೇ ಇದ್ದರೂ, ಸಿನಿಮಾ ಗೆಲ್ಲದೇ ಇದ್ದರೂ ಸ್ಟಾರ್ ಆಗಿಯೇ ಉಳಿದರು. ಯಾಕೆಂದರೆ ಅವರಿಗೆ ಸ್ಟಾರ್‌ಗಿರಿಯನ್ನು ಸಿನಿಮಾಗಳುಕೊಡಲಿಲ್ಲ, ಅವರ ವ್ಯಕ್ತಿತ್ವವೇ ಕೊಟ್ಟಿತ್ತು.