ನವದೆಹಲಿ(ಜು.18): ರಾಷ್ಟ್ರೀಯ ವಿಚಾರಗಳ ಮೇಲೆ ಇಡೀ ದೇಶ ಹೇಗೆ ಒಂದಾಗುತ್ತದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಪಾಕ್ ಕಪಿಮುಷ್ಠಿಯಲ್ಲಿರುವ ಭಾರತದ ವೀರಪುತ್ರ ಕುಲಭೂಷಣ್ ಜಾಧವ್ ಅವರನ್ನು ಮರಳಿ ತಾಯ್ನಾಡಿಗೆ ಕರೆತರಲು ಇಡೀ ದೇಶ ಒಂದಾಗಿ ಶ್ರಮಿಸುತ್ತಿದೆ.

ಅದರಂತೆ ಕುಲಭೂಷಣ್ ಜಾಧವ್ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಪ್ರಖ್ಯಾತ ವಕೀಲ ಹರೀಶ್ ಸಾಳ್ವೆ, ಕೇವಲ 1 ರೂ. ವೇತನ ಪಡೆದಿದ್ದಾರೆ.

ಹೌದು, ಜಾಧವ್ ಪರ ಅತ್ಯಂತ ಗಟ್ಟಿ ಧ್ವನಿಯಲ್ಲಿ ಐಸಿಜೆ ಮುಂದೆ ವಾದ ಮಂಡಿಸಿದ್ದ ಸಾಳ್ವೆ, ತಮ್ಮ ವೇತನವನ್ನಾಗಿ ಕೇಂದ್ರ ಸರ್ಕಾರದಿಂದ ಕೇವಲ 1 ರೂ. ಪಡೆದಿದ್ದಾರೆ.  ಅಂದಹಾಗೆ ಇತರ ಪ್ರಕರಣಗಳಲ್ಲಿ ಸಾಳ್ವೆ ಒಂದು ದಿನಕ್ಕೆ 30 ಲಕ್ಷ ರೂ. ಪಡೆಯುತ್ತಾರೆ.

ಅದರಂತೆ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಪರ ವಾದ ಮಂಡಿಸಲು ಲಂಡನ್ ಮೂಲದ ಪ್ರಖ್ಯಾತ ವಕೀಲ ಖವ್ವಾರ್ ಖುರೇಷಿ ಬರೋಬ್ಬರಿ 20 ಕೋಟಿ ರೂ. ಪಡೆದಿದ್ದಾರೆ.

ಜಾಧವ್ ಅವರನ್ನು ಶತಾಯಗತಾಯ ನೇಣುಗಂಬಕ್ಕೇರಿಸಲು ಬಯಸಿದ್ದ ಪಾಕಿಸ್ತಾನ, ಇದಕ್ಕಾಗಿ ತನ್ನ ವಕೀಲರಿಗೆ ಹಣದ ಹೊಳೆಯನ್ನೇ ಹರಿಸಿತ್ತು. ವಕೀಲ ಖುರೇಷಿ ಅವರಿಗೆ ಬರೋಬ್ಬರಿ 20 ಕೋಟಿ ರೂ.ಗಳನ್ನು ಸಂದಾಯ ಮಾಡಿತ್ತು.

ಇಷ್ಟಾದಾರೂ ಐಸಿಜೆ ಸೂಕ್ತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಭಾರತದ ಪರ ತೀರ್ಪು ಪ್ರಕಟಿಸಿದ್ದು, ಜಾಧವ್ ಪರ ಅತ್ಯಂತ ಗಟ್ಟಿಯಾಗಿ ವಾದ ಮಂಡಿಸಿದ್ದ ಸಾಳ್ವೆ ಅವರ ಕರ್ತವ್ಯಪ್ರಜ್ಞೆ ಮತ್ತು ದೇಶಪ್ರೇಮಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.