ಹೇಗ್(ಜು.17): ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್, ಭಾರತಕ್ಕೆ ಮರಳುವ ಆಸೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಣ್ಣೀರೆರಚಿದೆ.

ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ, ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್’ಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಅಮಾನತುಗೊಳಿಸಿದೆ.

ಆದರೆ ಕುಲಭೂಷಣ್ ಅವರನ್ನು ಬಿಡುಗಡೆ ಮಾಡಬೇಕೆಂಬ ಭಾರತದ ವಾದಕ್ಕೆ ಐಸಿಜೆ ಮನ್ನಣೆ ನೀಡಿಲ್ಲ. ನೆದರ್’ಲ್ಯಾಂಡ್’ನ ಹೇಗ್’ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆ ಭಾರತದ ಪಾಲಿಗೆ ಸಿಹಿ-ಕಹಿ ಅನುಭವ ದೊರೆತಂತಾಗಿದೆ.

ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡಬೇಕು ಎಂದು ಐಸಿಜೆ  ತೀರ್ಪು ನೀಡಿದೆ. ಅಲ್ಲದೇ ಪ್ರಕರಣದ ಸಂಪೂರ್ಣ ಮರುವಿಚಾರಣೆ ನಡೆಸಬೇಕೆಂದು ಐಸಿಜೆ ಪಾಕಿಸ್ತಾನಕ್ಕೆ ಸೂಚಿಸಿದೆ.

ಐಸಿಜೆ ತೀರ್ಪು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದ್ದು, ಭಾರತ ತನ್ನ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ನಂಬಿಸಲು ಹೋದ ಪಾಕಿಸ್ತಾನಕ್ಕೆ ಸೋಲಾಗಿದೆ.

ಒಟ್ಟು 42 ಪುಟಗಳ ತೀರ್ಪಿನಲ್ಲಿ ಕುಲಭೂಷಣ್  ಬಿಡುಗಡೆ ಹೊರತುಪಡಿಸಿ ಉಳಿದೆಲ್ಲ ಅಂಶಗಳು ಭಾರತದ ಪರವಾಗಿ ಬಂದಿವೆ. ಪ್ರಮುಖವಾಗಿ ಪಾಕಿಸ್ತಾನ ವಿಯೆನ್ನಾ ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂಬ ಐಸಿಜೆ ತೀರ್ಪು ಭಾರತದ ಪಾಲಿಗೆ ಬಹುದೊಡ್ಡ ಗೆಲುವಾಗಿದೆ.

ಇದೇ ವೇಳೆ ಭಾರತದ ವಿರುದ್ಧ ಪಾಕಿಸ್ತಾನ ಮಾಡಿದ್ದ ಎರಡೂ ಪ್ರಮುಖ ಆರೋಪಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ತಳ್ಳಿ ಹಾಕಿದೆ. ಇನ್ನು ಕುಲಭೂಷಣ್ ಜಾಧವ್ ಕುರಿತಾದ ತೀರ್ಪನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರು 15-1 ಆಧಾರದಲ್ಲಿ ನೀಡಿದೆ.