ನವದೆಹಲಿ(ಜು.17): ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ.

ಕುಲಭೂಷಣ್’ಗೆ ಪಾಕ್ ಸೇನಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಐಸಿಜೆ ಅಮಾನತುಗೊಳಿಸಿದೆ. ಪಾಕ್ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದಿರುವ ಐಸಿಜೆ, ಜಾಧವ್ ಪ್ರಕರಣವನ್ನು ಮರು ಪರಿಶೀಲನೆಗೆ ಒಳಪಡಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.

ಇನ್ನು ಜಾಧವ್ ಪ್ರಕರಣದ ಐಸಿಜೆ ತೀರ್ಪನ್ನು ಭಾರತ ಸ್ವಾಗತಿಸಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಿದೆ.

ಅದರಂತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಪರ ವಾದ ಮಂಡಿಸಿದ್ದ ವಕೀಲ ಹರೀಶ್ ಸಾಳ್ವೆ, ಐಸಿಜೆ ತೀರ್ಪನ್ನು ಸ್ವಾಗತಿಸಿದ್ದಾರೆ. ಇದು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸ್ಪಷ್ಟ ನಿಲುವಿಗೆ ಸಿಕ್ಕ ಜಯ ಎಂದು ಸಾಳ್ವೆ ಬಣ್ಣಿಸಿದ್ದಾರೆ.

ಜಾಧವ್ ಅವರನ್ನು ಭಾರತದ ಗೂಢಚಾರ ಎಂದು ಬಿಂಬಿಸುವಲ್ಲಿ ಪಾಕ್ ಸಾಧ್ಯವಾದದ್ದೆಲ್ಲವನ್ನೂ ಮಾಡಿತ್ತು. ಆದರೆ ಐಸಿಜೆ ಪ್ರಕರಣದ ಆಳಕ್ಕಿಳಿದು ಸರಿಯಾದ ತೀರ್ಪು ನೀಡಿದೆ ಎಂದು ಸಾಳ್ವೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಜಾಧವ್ ಪ್ರಕರಣದಲ್ಲಿ ಹರೀಶ್ ಸಾಳ್ವೆ ನಿರ್ವಹಿಸಿದ ಪಾತ್ರದ ಕುರಿತು ಭಾರೀ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದು, ಸಾಳ್ವೆ ಅತ್ಯಂತ ಗಟ್ಟಿಯಾಗಿ ಐಸಿಜೆ ಮುಂದೆ ಭಾರತದ ನಿಲುವನ್ನು ಮನದಟ್ಟು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.