ನವದೆಹಲಿ(ಜು.17): ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ.

ಕುಲಭೂಷಣ್’ಗೆ ಪಾಕ್ ಸೇನಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಐಸಿಜೆ ಅಮಾನತುಗೊಳಿಸಿದೆ. ಪಾಕ್ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದಿರುವ ಐಸಿಜೆ, ಜಾಧವ್ ಪ್ರಕರಣವನ್ನು ಮರು ಪರಿಶೀಲನೆಗೆ ಒಳಪಡಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.

ಇನ್ನು ಜಾಧವ್ ಪ್ರಕರಣದ ಐಸಿಜೆ ತೀರ್ಪನ್ನು ಭಾರತ ಸ್ವಾಗತಿಸಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಐಸಿಜೆ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಜಾಧವ್ ಅವರಿಗೆ ಶೀಘ್ರದಲ್ಲೇ ಸಂಪೂರ್ಣ ನ್ಯಾಯ ದೊರೆಯಲಿದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

ಇನ್ನು ಐಸಿಜೆ ತೀರ್ಪಿನ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದು, ಜಾಧವ್ ಅವರನ್ನು ಭೇಟಿ ಮಾಡಲು ಭಾರತೀಯ ರಾಯಭಾರಿಗೆ ಅವಕಾಶ ನೀಡಿರುವುದು ಭಾರತಕ್ಕೆ ಸಿಕ್ಕ ಬಹುದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ.

ಅದರಂತೆ ಐಸಿಜೆ ತೀರ್ಪನ್ನು ಸ್ವಾಗತಿಸಿರುವ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯುವ ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್, ಐಸಿಜೆ ತೀರ್ಪು ಭಾರತದ ನಿಲುವಿಗೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೂಡ ಐಸಿಜೆ ತೀರ್ಪನ್ನು ಸ್ವಾಗತಿಸಿದ್ದು, ಭಾರತದ ಧೀರ ಪುತ್ರ ಶೀಘ್ರ ತಾಯ್ನಾಡಿಗೆ ಮರಳುವಂತಾಗಲಿ ಎಂದು ಹಾರೈಸಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಐಸಿಜೆ ತೀರ್ಪಿಗೆ ತೀವ್ರ ಸಂತಸ ವ್ಯಕ್ತಪಡಿಸಿದ್ದು, ಜಾಧವ್‌ಗೆ ಸಂಪೂರ್ಣ ನ್ಯಾಯ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಜಾಧವ್ ಕುಟುಂಬ ಮತ್ತು ಸ್ನೇಹಿತರು ಕೂಡ ಐಸಿಜಿ ತೀರ್ಪನ್ನು ಸ್ವಾಗತಿಸಿದ್ದು, ಮುಂಬೈನಲ್ಲಿ ಆಗಸದಲ್ಲಿ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಸಂಭ್ರಮಿಸಿದ್ದಾರೆ.