ನವದೆಹಲಿ(ಅ12): ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಭಾರತ ಭೇಟಿ ಮುಕ್ತಾಯ ಕಂಡಿದ್ದು, ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸೈ ಎಂದಿದ್ದಾರೆ.

ಈ ಮಧ್ಯೆ ಮೋದಿ-ಕ್ಸಿ ಚರ್ಚೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಉಭಯ ನಾಯಕರ ನಡುವಿನ ಚರ್ಚೆಯ ಸಂದರ್ಭದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಭಾರತ ಆಂತರಿಕ ವಿಚಾರವಾಗಿದ್ದು, ಇದನ್ನು ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಸ್ತಾಪಿಸುವ ಅಗತ್ಯ ಭಾರತಕ್ಕಿಲ್ಲ ಎಂದು ಗೋಖಲೆ ಹೇಳಿದ್ದಾರೆ.

ಆದರೆ ಭಯೋತ್ಪಾದನೆಯ ಸವಾಲನ್ನು ಎದುರಿಸಲು ಒಂದಾಗಬೇಕೆಂಬ ಪ್ರಸ್ತಾವನೆಗೆ ಮೋದಿ ಮತ್ತು ಕ್ಸಿ  ಸಮ್ಮತಿಸಿದ್ದಾರೆ ಎಂದು ಗೋಖಲೆ ಮಾಹಿತಿ ನೀಡಿದರು.

 ಸಂಕೀರ್ಣ ಜಗತ್ತಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಸವಾಲುಗಳನ್ನು ಎದುರಿಸುವುದು ಮುಖ್ಯ ಎಂದು ಎರಡೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ.