ನಾವು ತಾಯಿಯನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇವೆ. ತಾಯಿಯೆಂದು ನಂಬಿದ್ದ ಕುಟುಂಬವೇ ನಮಗೆ ವಿಷ ನೀಡುವ ಕೆಲಸ ಮಾಡಿತು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ರಾಮನಗರ: ನಾವು ತಾಯಿಯನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇವೆ. ತಾಯಿಯೆಂದು ನಂಬಿದ್ದ ಕುಟುಂಬವೇ ನಮಗೆ ವಿಷ ನೀಡುವ ಕೆಲಸ ಮಾಡಿತು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ತಾಲೂಕಿನ ಬಿಡದಿಯಲ್ಲಿನ ನಲ್ಲಿಗುಡ್ಡ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿನೇ ವಿಷ ಹಾಕಿದರೆ ಮಕ್ಕಳು ಆ ಕುಟುಂಬದಲ್ಲಿ ಉಳಿಯಲು ಸಾಧ್ಯವೇ. ಆದ್ದರಿಂದಲೇ ನಾವೆಲ್ಲರೂ ಜೆಡಿಎಸ್ ತೊರೆವ ನಿರ್ಧಾರ ಮಾಡಿದೆವು ಹೇಳಿದರು.

ಮನಸ್ತಾಪ: ನನ್ನ ಮತ್ತು ಕುಮಾರ ಸ್ವಾಮಿ ಅವರ ನಡುವೆಕೆಲ ವಿಚಾರವಾಗಿ ಮನಸ್ತಾಪಗಳಿದ್ದವು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನನ್ನ ಸಹೋದರ ಎಚ್. ಎನ್. ಅಶೋಕ್ ಅವರನ್ನು ಸೋಲಿಸಲು ಪ್ರಯತ್ನಿಸಿದರು. ಇದು ನಮ್ಮ ಮತ್ತು ಅವರ ನಡುವೆ ಬಿರುಕು ಹೆಚ್ಚಲು ಕಾರಣವಾಯಿತು.

ಕುಮಾರಸ್ವಾಮಿ ಒಡೆತನದ ದೃಶ್ಯ ಮಾಧ್ಯಮ ದಲ್ಲಿ ನನ್ನ ತೇಜೋವಧೆಗೆ ಪ್ರಯತ್ನಿಸಿದರು. ಜೆಡಿಎಸ್’ನ ನಿಷ್ಠಾವಂತ ಕಾರ್ಯಕರ್ತನ ರಕ್ಷಣೆಗೆ ಪೊಲೀಸ್ ಠಾಣೆಗೆ ತೆರಳಿದ್ದ ಸಂದರ್ಭದಲ್ಲಿ ನನ್ನನ್ನು ’ರೌಡಿ ಎಂಎಲ್‌ಎ’ ಎಂದು ಬಣ್ಣಿಸಿದರು. ಜಿಪಂ ಚುನಾವಣೆಯಲ್ಲಿ ಅಶೋಕ್ ಅವರನ್ನು ಸೋಲಿಸಲು ಕುಮಾರ ಸ್ವಾಮಿ ಹುನ್ನಾರ ನಡೆಸಿದ್ದನ್ನು ಜೆಡಿಎಸ್ ಮುಖಂಡರಾದ ವಕೀಲ ಸುಬ್ಬಶಾಸ್ತ್ರಿಗಳೇ ನನ್ನಲ್ಲಿ ಹೇಳಿದ್ದರು. ನಮ್ಮ ಮೇಲೆ ವಿಶ್ವಾಸವೇ ಇಲ್ಲದಿದ್ದರೆ ಅಲ್ಲಿ ಉಳಿಯಲು ಹೇಗೆ ಸಾಧ್ಯ. ಜೆಡಿಎಸ್‌ನಲ್ಲಿ ಉಳಿದರೆ ಮನಸ್ತಾಪಗಳು ಹೆಚ್ಚಾಗುತ್ತವೆ. ನನ್ನಿಂದ ಅವರಿಗೆ ಅಷ್ಟೊಂದು ಬೇಸರವಾ ಗಿದ್ದರೆ ಪಕ್ಷದಲ್ಲಿ ಉಳಿಯುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದೆವು. ಅದರಂತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು.

ಜೆಡಿಎಸ್ ವರಿಷ್ಠರ ಪಂಚಾಂಗ ಶಾಸಕ ಜಮೀರ್‌ಅವರ ಬಳಿ ಇರಬೇಕು. ನಮಗ್ಯಾರಿಗೂ ಅದನ್ನು ನೀಡದೆ ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ. ಆ ಪಂಚಾಂಗದಲ್ಲಿ ಏನಿದೆ ಎಂಬ ಕುತೂಹಲ ನಮಗೂ ಇದೆ ಎಂದು ಬಾಲಕೃಷ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತತ್ವ ಸಿದ್ಧಾಂತಗಳೆಲ್ಲವೂ ಬುರುಡೆ: ರಾಜಕಾರಣದಲ್ಲಿ ತತ್ವ ಸಿದ್ಧಾಂತ ಎಂಬುದೆಲ್ಲ ಬುರುಡೆ. ಜಾತಿವಾದಿ ಮತ್ತು ಜಾತ್ಯತೀತವಾದಿಗಳು ಎನ್ನುವುದೂ ಸುಳ್ಳು. ಎಲ್ಲರೂ ಅವಕಾಶಕ್ಕೆ ತಕ್ಕಂತೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ತತ್ವ ಸಿದ್ಧಾಂತ ಎಂಬುದು ರಾಜಕಾರಣಿಗಳು ಜನರನ್ನು ಒಪ್ಪಿಸಲು ಬಿಡುವ ಬುರುಡೆ. ನನಗೆ ಅದರೆಲ್ಲೆಲ್ಲ ನಂಬಿಕೆ ಇಲ್ಲ. ಜನರ ಸೇವೆ ಮಾಡುವುದು ಮುಖ್ಯ. ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಾನು ಆಕಾಂಕ್ಷಿ. ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೊ ಅವರ ಪರ ದುಡಿಯಲು ಬದ್ಧ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರ ಶಾಸಕ ಸಿ.ಪಿ. ಯೋಗೇಶ್ವರ್ ಸ್ನೇಹಿತರು. ನಮ್ಮ ಮತ್ತು ಅವರ ಅಭಿಪ್ರಾಯಗಳು ಭಿನ್ನವಾಗಿವೆ. ಯಾವ ಪಕ್ಷಕ್ಕೆಸೇರಬೇಕು ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಯೋಗೇಶ್ವರ್ ಸೀನಿಯರ್ ರಾಜಕಾರಣಿ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಬಿಡುವುದ ಪಕ್ಷದ ವರಿಷ್ಠರಿಗೆ ಸಂಬಂಧಿಸಿದ ವಿಚಾರ ಎಂದು ತಿಳಿಸಿದರು.