ಮುಂಬೈ(ಜು.04):  ಸರ್ಕಾರಿ ಅಧಿಕಾರಿ ಮೇಲೆ ಬ್ಯಾಟ್’ನಿಂದ ಹಲ್ಲೆ ಮಾಡಿದ್ದ ಬಿಜೆಪಿ ಶಾಸಕನ ವರ್ತನೆಗೆ ಪ್ರತಿಪಕ್ಷ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು ಎಲ್ಲಿರಗೂ ಗೊತ್ತಿರುವ ಸಂಗತಿ.

"

ಸ್ವ ಪಕ್ಷದ ಶಾಸಕನ ದುರ್ವತರ್ನೆ ಕಂಡು ರೇಗಿದ್ದ ಪ್ರಧಾನಿ ಮೋದಿ ಅವರ ಮಾತುಗಳನ್ನೂ ಕಾಂಗ್ರೆಸ್ ನಾಟಕ ಎಂದು ಜರೆದಿತ್ತು. ಆದರೆ ಇದೀಗ ತನ್ನದೇ ಶಾಸಕನೋರ್ವನ ಗೂಂಡಾವರ್ತನೆ ಕಂಡೂ ಸುಮ್ಮನಿರುವ ಅನಿವಾರ್ಯತೆಗೆ ಸಿಲುಕಿದೆ.

ಹೌದು, ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ್ ರಾಣೆ ಪುತ್ರ, ಕಾಂಗ್ರೆಸ್ ಶಾಸಕ ನಿತೇಶ್ ರಾಣೆ, ಸರ್ಕಾರಿ ಇಂಜಿನಿಯರ್ ಮೇಲೆ ಕೆಸರು ಚೆಲ್ಲಿ ವಿವಾದ ಸೃಷ್ಟಿಸಿದ್ದಾರೆ.

ಮಹಾರಾಷ್ಟ್ರ-ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆಗೆ ನಿತೇಶ್ ನಾರಾಯಣ್ ರಾಣೆ ತೆರಳಿದ್ದರು. ಈ ವೇಳೆ ರಸ್ತೆ ಗುಂಡಿಗಳನ್ನು ಕಂಡು ಸಿಟ್ಟಾದ ರಾಣೆ ಅಧಿಕಾರಿ ಮೇಲೆ ಕೆಸರು ಚೆಲ್ಲಿದ್ದಾರೆ.

ಇಷ್ಟೇ ಅಲ್ಲದೇ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಇಂಜಿನಿಯರ್ ಅವರನ್ನು ಥಳಿಸಿ ಪಕ್ಕದ ಬ್ರಿಡ್ಜ್’ಗೆ  ಆತನನ್ನು ಕಟ್ಟಿ ಹಾಕಿದ್ದಾರೆ.

ನಿತೇಶ್ ಮತ್ತು ಬೆಂಬಲಿಗರ ದುರ್ವರ್ತನೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿದ್ದು, ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೆಚ್ಚಾಗಿದೆ.

ಈ ಮಧ್ಯೆ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ, ತಾವೇ ಖುದ್ದಾಗಿ ಪೊಲೀಸರಿಗೆ ಸೆರೆಯಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.