ಇಂಧೋರ್‌ [ಜು.1]: ಶಿಥಿಲಗೊಂಡಿದ್ದ ಕಟ್ಟಡ ತೆರವು ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳ ಮೇಲೆ ಸಿಕ್ಸರ್‌ ಶೈಲಿಯಲ್ಲಿ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಆಕಾಶ್‌ ವಿಜಯ ವರ್ಗೀಯಾ ಜಾಮೀನಿನ ಮೇಲೆ ಭಾನುವಾರ ಬಿಡುಗಡೆಯಾಗಿದ್ದಾರೆ. 

ಆಕಾಶ್‌ ಬಿಡುಗಡೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಹಾಗೂ ಸಂಬಂಧಿಕರು ಆಕಾಶ್‌ ಅವರಿಗೆ ಹೂವಿನ ಹಾರ ಹಾಕಿ, ಸಿಹಿ ತಿನಿಸಿ ಭವ್ಯ ಸ್ವಾಗತ ಕೋರಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಾಸಕ ಆಕಾಶ್‌, ‘ಪೊಲೀಸರ ಸಮ್ಮುಖದಲ್ಲೇ ಮಹಿಳೆಯೊಬ್ಬರನ್ನು ಅಮಾನವೀಯವಾಗಿ ಎಳೆದು ಹಾಕುತ್ತಿದ್ದರು. 

ಇದೇ ಕಾರಣಕ್ಕಾಗಿ ನಾನು ಹಲ್ಲೆ ಮಾಡಬೇಕಾಯಿತು. ಹಾಗಾಗಿ, ಈ ಬಗ್ಗೆ ನನಗೆ ನಾಚಿಕೆ ಅಥವಾ ಅಪರಾಧ ಭಾವನೆ ಇಲ್ಲ’ ಎಂದಿದ್ದಾರೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಬ್ಯಾಟ್‌ ಹಿಡಿಯುವ ಅಗತ್ಯ ಎದುರಾಗದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.