ಇಂದೋರ್‌[ಜೂ.27]: ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರ ಮೇಲೆ ಬಿಜೆಪಿಯ ಹಿರಿಯ ನಾಯಕ ವಿಜಯ್‌ ವರ್ಗೀಯಾ ಅವರ ಪುತ್ರ, ಇಂದೋರ್‌ 3 ಕ್ಷೇತ್ರದ ಶಾಸಕರೂ ಆಗಿರುವ ಆಕಾಶ್‌ ವರ್ಗೀಯಾ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪಕ್ಕಾ ಕ್ರಿಕೆಟ್‌ ಶಾಟ್‌ ಹೊಡೆಯುವ ರೀತಿಯಲ್ಲೇ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಶಾಸಕರೊಬ್ಬರು ನಡೆಸಿದ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಆದರೆ ಹೊರತಾಗಿಯೂ, ಇದು ಆರಂಭ ಅಷ್ಟೇ. ಭ್ರಷ್ಟಾಚಾರ ಮತ್ತು ಗೂಂಡಾಗಿರಿ ನಿಲ್ಲಿಸಲು ಮೊದಲು ಮನವಿ ಮಾಡುತ್ತೇವೆ. ಕೇಳದ್ದೇ ಇದಲ್ಲಿ ಹಲ್ಲೆ ಮಾಡುತ್ತೇವೆ. ಇದುವೇ ಸರಿಯಾದ ಹಾದಿ ಎಂದು ತಮ್ಮ ಗೂಂಡಾಗಿರಿಯನ್ನು ಆಕಾಶ್‌ ಸಮರ್ಥಿಸಿಕೊಂಡಿದ್ದಾರೆ.

ಬಳಿಕ ಘಟನೆ ಕುರಿತು ದೇಶವ್ಯಾಪಿ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಆಕಾಶ್‌ ವರ್ಗೀಯಾ ಮತ್ತು ಇತರೆ 10 ಜನರ ಮೇಲೆ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದಾರೆ. ಬಳಿಕ ಬಂಧಿತರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನಿರಾಕರಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದೆ.

ಏನಾಯ್ತು?:

ಇಲ್ಲಿನ ಗಂಜಿ ಪ್ರದೇಶದಲ್ಲಿ ಶಿಥಿಲ ಕಟ್ಟಡಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಉರುಳಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಆಕಾಶ್‌, ಧ್ವಂಸ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಆದರೆ ಇದಕ್ಕೆ ಅಧಿಕಾರಿಗಳು ಒಪ್ಪದೇ ಇದ್ದಾಗ, ಅಲ್ಲೇ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ಅಧಿಕಾರಿಯೊಬ್ಬರ ಮೇಲೆ ಪಕ್ಕಾ ಕ್ರಿಕೆಟ್‌ ಶಾಟ್‌ ಮಾದರಿಯಲ್ಲೇ ಹಲ್ಲೆ ನಡೆಸಿದ್ದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಭಾರೀ ವೈರಲ್‌ ಆಗಿದೆ.

ಈ ನಡುವೆ ತಮ್ಮ ದಾಳಿಯ ಕುರಿತು ಸಮರ್ಥನೆ ನೀಡಿರುವ ಶಾಸಕ ಆಕಾಶ್‌, ಅಧಿಕಾರಿಗಳು ಮತ್ತು ಕಾಂಗ್ರೆಸ್‌ ನಾಯಕರ ನಡುವಿನ ಅಪವಿತ್ರ ಮೈತ್ರಿಯೇ ಕಟ್ಟಡಗಳ ಧ್ವಂಸಕ್ಕೆ ಕಾರಣ. ಶಿಥಿಲವಾಗಿರದ ಕಟ್ಟಡಗಳನ್ನೂ ಕಾಂಗ್ರೆಸ್‌ ನಾಯಕರ ಸೂಚನೆ ಅನ್ವಯ ಅಧಿಕಾರಿಗಳು ಧ್ವಂಸಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ನಡುವೆ ಹಲ್ಲೆ ಖಂಡಿಸಿ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.