ನವದೆಹಲಿ[ಡಿ.18]: ಕಾಂಗ್ರೆಸ್‌ ಪಕ್ಷ ಇತ್ತೀಚೆಗೆ ಜಯಭೇರಿ ಮೊಳಗಿಸಿದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಸೋಮವಾರ ಅಧಿಕೃತವಾಗಿ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಕ್ರಮವಾಗಿ ಅಶೋಕ್‌ ಗೆಹ್ಲೋಟ್‌, ಕಮಲ್‌ನಾಥ್‌ ಹಾಗೂ ಭೂಪೇಶ್‌ ಬಘೇಲ್‌ ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ ರಾಜಸ್ಥಾನ ಉಪಮುಖ್ಯಮಂತ್ರಿಯಾಗಿ ಸಚಿನ್‌ ಪೈಲಟ್‌ ಅಧಿಕಾರ ಸ್ವೀಕರಿಸಿದರು.

ಬಿಜೆಪಿ ಹಣೆಬರಹ ಬದಲಿಸಿ ಕಾಂಗ್ರೆಸ್ ಗೆಲ್ಲಿಸಿದ ಆ 6 ಕ್ಷೇತ್ರಗಳು!

ಈ ನಡುವೆ, ಈ ಸಮಾರಂಭಗಳು ಎನ್‌ಡಿಎ ವಿರೋಧಿ ಕೂಟದ ಶಕ್ತಿಪ್ರದರ್ಶನದ ವೇದಿಕೆಯಾಗಿಯೂ ಮಾರ್ಪಟ್ಟಿತು. ಮಾಜಿ ಪ್ರಧಾನಿಗಳಾದ ಎಚ್‌.ಡಿ. ದೇವೇಗೌಡ ಮನಮೋಹನ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ, ರಾಷ್ಟ್ರವಾದಿ ಕಾಂಗ್ರೆಸ್‌ ಮುಖ್ಯಸ್ಥ ಶರದ್‌ ಪವಾರ್‌, ತೆಲುಗುದೇಶಂ ನೇತಾರ ಚಂದ್ರಬಾಬು ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಆರ್‌ಜೆಡಿಯ ತೇಜಸ್ವಿ ಯಾದವ್‌, ಲೋಕತಾಂತ್ರಿಕ ಜನತಾದಳದ ಶರದ್‌ ಯಾದವ್‌ ಮೊದಲಾದವರು ಆಗಮಿಸಿ ಸಮಾರಂಭಕ್ಕೆ ಕಳೆಕಟ್ಟಿದರು.

ಪಂಚರಾಜ್ಯ ಚುನಾವಣೆ: ರಾಹುಲ್ ಗಾಂಧಿ ಮಾಡಿದ ಗಿಮಿಕ್ಕೇನು?

ರಾಜಸ್ಥಾನಕ್ಕೆ ಸಿಎಂ, ಡಿಸಿಎಂ:

ರಾಜಸ್ಥಾನದ 12ನೇ ಮುಖ್ಯಮಂತ್ರಿಯಾಗಿ ಅಶೋಕ್‌ ಗೆಹ್ಲೋಟ್‌ ಅವರು ಬೆಳಗ್ಗೆ 11ಕ್ಕೆ ಪ್ರಮಾಣವಚನ ಸ್ವೀಕರಿಸಿದರೆ, ಸಿಎಂ ಸ್ಥಾನ ಪಡೆಯಲು ವಿಫಲರಾದ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಉಮೇದ್‌ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಪ್ರಮಾಣವಚನ ಬೋಧಿಸಿದರು.

ಈ ವೇಳೆ, ಪೈಲಟ್‌ ಅವರ ಮಾವ ಫಾರೂಖ್‌ ಅಬ್ದುಲ್ಲಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದುದು ವಿಶೇಷವಾಗಿತ್ತು. ಅಲ್ಲದೆ, ನಿರ್ಗಮಿತ ಸಿಎಂ ವಸುಂಧರಾ ರಾಜೇ ಅವರು ಎಲ್ಲ ಪ್ರತಿಪಕ್ಷ ನಾಯಕರೊಡನೆ ನಗುನಗುತ್ತ ಮಾತನಾಡಿದ್ದು ವಿಶೇಷವಾಗಿತ್ತು. ತಮ್ಮ ಅಳಿಯ ಜ್ಯೋತಿರಾದಿತ್ಯ ಸಿಂಧಿಯಾಗೆ ಮುತ್ತು ನೀಡಿ ರಾಜೇ ಅವರು ಮಮಕಾರ ಪ್ರದರ್ಶಿಸಿದರು.

ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೇ ಈ ಪರಿ ಅಭಿನಂದಿಸಿದ್ದು ಯಾರನ್ನು?

ಕಮಲ್‌ ಅಧಿಕಾರ:

ಜ್ಯೋತಿರಾದಿತ್ಯ ಸಿಂಧಿಯಾ ಜತೆ ಸಾಕಷ್ಟುಹಗ್ಗಜಗ್ಗಾಟದ ಬಳಿಕ ಸಿಎಂ ಸ್ಥಾನಕ್ಕೆ ಆಯ್ಕೆಯಾದ ಕಮಲ್‌ನಾಥ್‌ ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಮಧ್ಯಾಹ್ನ 2.30 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರು ಪ್ರಮಾಣವಚನ ಬೋಧಿಸಿದರು.

ಈ ವೇಳೆ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಮಲ್‌ನಾಥ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರ ಕೈ ಹಿಡಿದು ಮೇಲೆತ್ತಿ ‘ಒಗ್ಗಟ್ಟು’ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಕಮಲ್‌ ಅವರು ರೈತರ ಸಾಲ ಮನ್ನಾಗೆ ಸಹಿ ಹಾಕಿ ತಮ್ಮ ಮೊದಲ ಭರವಸೆಯನ್ನು ಪೂರೈಸಿದರು.

'ಕೈ' ನಾಯಕರ ಗೆಲುವನ್ನು ಸಂಭ್ರಮಿಸಿದ ಬಿಜೆಪಿ ಲೀಡರ್ ಶಿವರಾಜ್ ಸಿಂಗ್ ಚೌಹಾಣ್!

ಬಘೇಲ್‌ಗೆ ಮೊದಲ ಅವಕಾಶ:

ಛತ್ತೀಸ್‌ಗಢದ 3ನೇ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗದ ನಾಯಕ ಭೂಪೇಶ್‌ ಬಘೇಲ್‌ ಅವರು ಸೋಮವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು. ಛತ್ತೀಸ್‌ಗಢದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್‌ ಅವರು ಬಘೇಲ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ವೇಳೆ ರಾಹುಲ್‌ ಗಾಂಧಿ ಸೇರಿದಂತೆ ಭಾರಿ ಸಂಖ್ಯೆಯ ಬಿಜೆಪಿಯೇತರ ನಾಯಕರು ಹಾಜರಿದ್ದರು. ಮಳೆಯ ಕಾರಣ ಸಮಾರಂಭ ವಿಳಂಬವಾಯಿತು.