ಬೆಂಗಳೂರು (ಡಿ. 14): ಭಾರತೀಯ ರಾಜಕಾರಣದ ಅಭಿಷೇಕ್ ಬಚ್ಚನ್ ಎಂದು ಕರೆಸಿಕೊಳ್ಳುತ್ತಿದ್ದ ರಾಹುಲ್ ಗಾಂಧಿ ಕೊನೆಗೂ ಒಂದು ಸೂಪರ್ ಹಿಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 

ಹಾಗಂತ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿರುವುದು ರಾತ್ರೋರಾತ್ರಿ ರಾಹುಲ್‌ರನ್ನು ಅಮಿತಾಭ್ ಬಚ್ಚನ್ ರೀತಿಯ ಸೂಪರ್‌ಸ್ಟಾರ್ ಮಾಡಿಬಿಡುವುದಿಲ್ಲ. ಆದರೆ, ಕೊನೆಯ ಪಕ್ಷ ಅವರೀಗ 2019 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ನೇತೃತ್ವ ವಹಿಸಬಲ್ಲರು ಎಂಬ ನಿರೀಕ್ಷೆಯಂತೂ ಮೂಡಿದೆ.

ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೊಂದು ಅಭೂತ ಪೂರ್ವ ಅವಸಾನವನ್ನು ಕಾಣುವ ರೀತಿಯಲ್ಲಿ ನೆಲಕಚ್ಚಿದ್ದಕ್ಕೆ ಹಾಗೂ ಈಗ ಮತ್ತೆ ಗೆಲುವು ಸಾಧಿಸಿದ್ದಕ್ಕೆ ರಾಹುಲ್ ಸಾಕ್ಷಿಯಾಗಿದ್ದಾರೆ. ಅದರೊಂದಿಗೆ, ಇಷ್ಟು ವರ್ಷಗಳ ಕಾಲ ಭಾರತೀಯ ರಾಜಕಾರಣದ ಶಾಶ್ವತ ವಿದ್ಯಾರ್ಥಿ ಎಂಬಂತೆ ಭಾಸವಾಗುತ್ತಿದ್ದ ಅವರು ಕೊನೆಗೂ ಒಂದು ಪರೀಕ್ಷೆಯನ್ನು ಪಾಸು ಮಾಡಿದಂತಾಗಿದೆ.

ಈ ಪ್ರಕ್ರಿಯೆಯಲ್ಲಿ ಅವರೊಂದು ಉದಾಹರಣೆಯಾಗಿ ನಿಲ್ಲಬೇಕೆಂದು ಬಯಸುತ್ತಿದ್ದಾರೆ. ನರೇಂದ್ರ ಮೋದಿ ಅಚ್ಛೇ ದಿನ್ ನೀಡಬೇಕು ಅಂದುಕೊಂಡಿದ್ದರೆ, ರಾಹುಲ್ ಗಾಂಧಿ ಭಾರತೀಯ ರಾಜಕಾರಣದ ಅಚ್ಛೇ ಬಚ್ಚೆ ಆಗಿ ತೋರಿಸಬೇಕೆಂದು ಹೊರಟಿರುವಂತೆ ಕಾಣಿಸುತ್ತಿದೆ.

ಅವರಿಗೆ ಒಳ್ಳೆಯ ನಡತೆಯ ಪದಕ ತನ್ನದಾಗಿಸಿಕೊಳ್ಳುವ ಆಸೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರ ರಾಹುಲ್ ನಡೆಸಿದ ಮೊದಲ ಪತ್ರಿಕಾಗೋಷ್ಠಿ 56 ಇಂಚಿನ ಎದೆಯ ಥಿಯರಿಗೆ ತದ್ವಿರುದ್ಧವಾಗಿತ್ತು. ಅಲ್ಲಿ ವೈಫಲ್ಯಗಳಿಂದ ಕಲಿಯುವ ಬಗ್ಗೆ ರಾಹುಲ್ ಮಾತನಾಡಿದರು. ನಿರ್ಗಮಿತ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದರು. ಬಿಜೆಪಿಗೆ ಕಾಂಗ್ರೆಸ್‌ಮುಕ್ತ ಭಾರತ ಬೇಕಿದ್ದರೆ ನನಗೆ ಬಿಜೆಪಿಮುಕ್ತ ಭಾರತ ಬೇಕಿಲ್ಲ ಅಂದರು. ಸಮರಸದ ಬಾಳ್ವೆಯ ಬಗ್ಗೆ, ಎಲ್ಲರನ್ನೂ ಒಳಗೊಳ್ಳುವ ಭಾರತದ ಬಗ್ಗೆ ಮಾತನಾಡಿದರು.

ಇದರರ್ಥ ಇಷ್ಟೆ; ಒಳ್ಳೆಯ ಹುಡುಗರು ಯಾವಾಗಲೂ ಕೊನೆಯ ಸ್ಥಾನಕ್ಕೆ ತೃಪ್ತಿಪಡಬೇಕಾಗುತ್ತದೆ ಎಂಬುದು ಸುಳ್ಳು ಎಂಬುದನ್ನು ಈ ದೇಶದ ರಾಜಕೀಯದಲ್ಲಿ ಸಾಬೀತುಪಡಿಸಬೇಕೆಂಬುದು ರಾಹುಲ್ ಬಯಕೆ. ಸದ್ಯಕ್ಕೆ ಅದನ್ನವರು ಪೂರ್ತಿಯಾಗಿ ಸಾಧಿಸಿ ತೋರಿಸಿಲ್ಲ. ದೆಹಲಿ ದೂರವಿದೆ. ಪ್ರಾಮಾಣಿಕತೆ ಹಾಗೂ ಮೃದುತ್ವದ ಗುಣಗಳೇ ಚರಿಷ್ಮಾ ಅಲ್ಲ.

ಪ್ರಧಾನಿ ಮೋದಿ 2014 ರಲ್ಲಿ ಅಭಿವೃದ್ಧಿಯ ಜಪ ಮಾಡಿದ್ದರು. ಆದರೆ ನಂತರ ಬಿಜೆಪಿಯವರು ರಾಮ ಮಂದಿರ, ಮೂರ್ತಿಯ ಸ್ಥಾಪನೆ, ಹೆಸರು ಬದಲಾವಣೆಯ ಹಿಂದೆ ಬಿದ್ದರು ಎಂದು ಬಿಜೆಪಿಯದೇ ಕೆಲ ನಾಯಕರು ಹೇಳುತ್ತಾರೆ.  ಬಿಜೆಪಿಯ ಗೋ ರಾಜಕಾರಣದ ಎದುರು ರಾಹುಲ್ ರಫೇಲ್ ಕಹಳೆ ಮೊಳಗಿಸಿ ಗೂಳಿಯ ಕೋಡು ಹಿಡಿದು ಕಾಳಗಕ್ಕಿಳಿದರು. ಇದು ಕೆಲಸ ಮಾಡಿತು.

ಇಷ್ಟೊಂದು ವಿನಮ್ರರಾದರೆ ಹೇಗೆ!

ಈಗ ವಿನಮ್ರತೆಯಲ್ಲಿ ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ಮೀರಿಸಲು ಹೊರಟಿವೆ. ರಾಜಕಾರಣಿಗಳು ಇಷ್ಟೊಂದು ವಿನಮ್ರರಾಗುವುದು ನಮ್ಮ ದೇಶಕ್ಕೆ ಹೊಸತು. ಪಂಚರಾಜ್ಯಗಳ ಫಲಿತಾಂಶವನ್ನು ವಿನಮ್ರವಾಗಿ ಒಪ್ಪಿಕೊಳ್ಳುವುದಾಗಿ ಮೋದಿ ಹೇಳಿದರು. ಅವರೇ 2014 ರಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಎಂದು ಗರ್ಜಿಸಿದ್ದರು. ರಾಹುಲ್ ಗಾಂಧಿ ಕೂಡ 2014 ರಿಂದ ತಾನು ಕಲಿತ ಅತಿಮುಖ್ಯ ಪಾಠ ವಿನಮ್ರತೆ ಎಂದರು.

ಅಮ್ಮನ ಮಡಿಲಿನಿಂದ ಈಚೆಗೆ

2014 ರಿಂದೀಚೆಗೆ ರಾಹುಲ್ ಹೇಗೆ ಪ್ರತಿ ಚುನಾವಣೆಯ ಸೋಲಿನ ನಂತರವೂ ತಾಯಿಯ ಜೊತೆ ಮುಗುಳ್ನಗೆಯೊಂದಿಗೆ ಹೊರಬಂದು ಮಾಧ್ಯಮಗಳ ಮುಂದೆ ನಿಲ್ಲುತ್ತಿದ್ದರು ಮತ್ತು ಸೋಲಿನ ಪರಾಮರ್ಶನ ಸಭೆಯಲ್ಲೂ ಹೇಗೆ ಅತ್ತಿತ್ತ ನೋಡುತ್ತಾ ಇರುತ್ತಿದ್ದರು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕು. ಸುಂದರ ಮುಖಭಾವದ, ಆದರೆ ಇದೆಲ್ಲ ತನಗೇಕೆ ಬೇಕಿತ್ತು ಎಂಬಂತೆ ತೋರುತ್ತಿದ್ದ, ಒಟ್ಟಾರೆ ಅಸ್ಥಿರತೆಯನ್ನು ಪ್ರದರ್ಶಿಸುತ್ತಿದ್ದ ಆ ಇಮೇಜೇ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಅವರು ನೀಡಿದ ನಗೆಪಾಟಲಿನ ಹೇಳಿಕೆಗಳ ಬಗ್ಗೆ ಅಸಂಖ್ಯ ಜೋಕುಗಳು ಹರಿದಾಡಿವೆ. ಆದರೆ ಇತ್ತೀಚೆಗೆ ಅವರು ಪೂರ್ಣಕಾಲಿಕ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ನಿಜವಾದ ಬದಲಾವಣೆ. ಮೊನ್ನೆಯ ಚುನಾವಣೆ ರಾಹುಲ್ ಗಾಂಧಿ ಬದಲಾದರೆ ಕಾಂಗ್ರೆಸ್‌ಗೆ ಲಾಭವಿದೆ ಎಂಬುದಕ್ಕೆ ನಿದರ್ಶನ.

ಶಿವಭಕ್ತ, ಜನಿವಾರಧಾರಿ ಬ್ರಾಹ್ಮಣ

ಹೊಸ ರೂಪದ, ಮೊದಲಿಗಿಂತ ಹೆಚ್ಚು ಶಿಸ್ತಿನ ರಾಹುಲ್ ಗಾಂಧಿಯನ್ನು ನೋಡಿ ಪ್ರಗತಿಪರರು ಖುಷಿಯಾಗಿದ್ದಾರೆ. ಆದರೆ, ಈ ಹೊಸ ರಾಹುಲ್ ಗಾಂಧಿ ಜನಿವಾರಧಾರಿ ಶಿವಭಕ್ತ ಕೂಡ ಆಗಿದ್ದಾರೆ ಎಂಬುದನ್ನು ಅವರು ಕಡೆಗಣಿಸುವಂತಿಲ್ಲ. ಅದರಲ್ಲೇನೂ ತಪ್ಪಿಲ್ಲ. ಆದರೆ, ಇದು ರಾಜಕೀಯ ಅವಕಾಶವಾದಿತನವೋ ಅಥವಾ ಆಂತರ್ಯದಿಂದಲೇ ಹುಟ್ಟಿಕೊಂಡ ನಂಬಿಕೆಯೋ ಎಂಬುದು ಸ್ಪಷ್ಟವಿಲ್ಲ. ಬಿಜೆಪಿಯಿಂದ ಭ್ರಮನಿರಸನ ಗೊಂಡ ಮತದಾರರೆಲ್ಲ ಹೊಸ ರಾಹುಲ್ ಗಾಂಧಿ ಹೀಗೇ ಉಳಿಯುತ್ತಾರೆಂದು ನಂಬುತ್ತಾರೆಂದು ಹೇಳಲಾಗದು.

ಇದು ಸಂಪೂರ್ಣ ರೂಪಾಂತರವಾ?

ಈಗಿನದು ಕಾಂಗ್ರೆಸ್‌ನ ಗೆಲುವೇನೋ ಹೌದು, ಆದರೆ ರಾಹುಲ್ ಅನ್ನು ರೀಲಾಂಚ್ ಮಾಡಲು ಕಾಂಗ್ರೆಸ್‌ಗೆ ಅಗತ್ಯವಿದ್ದ ಸಂಪೂರ್ಣ ರೂಪಾಂತರ ಹೌದಾ? ೩ ರಾಜ್ಯದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಮಣಿಸಿದ್ದು ನಿಜ. ಆದರೆ, ಮಧ್ಯಪ್ರದೇಶದಲ್ಲಿ ಇನ್ನೂ ಒಳ್ಳೆಯ ಪ್ರದರ್ಶನ ನೀಡಬೇಕಿತ್ತು ಮತ್ತು ಈಶಾನ್ಯದ ಕೊನೆಯ ರಾಜ್ಯವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ ಎಂಬ ಟೀಕೆ ಕೂಡ ಇದೆಯಲ್ಲ.

ಸ್ಪಷ್ಟ ಸೈದ್ಧಾಂತಿಕ ನಿಲುವು ಏನು?

ರಾಹುಲ್ ಗಾಂಧಿ ಅಂದರೆ ಹೀಗೆ ಎಂಬ ಇಮೇಜು ಭಾರತೀಯರ ಮನಸ್ಸಿನಲ್ಲಿ ಅಚ್ಚೊತ್ತಿರುವುದರಿಂದ ಅವರು ಸಂಪೂರ್ಣ ರೂಪಾಂತರ ಗೊಳ್ಳಲು ಒಂದಿಡೀ ಚುನಾವಣಾ ಚಕ್ರವೇ ಬೇಕಾಗುತ್ತದೆ. ಕಾಂಗ್ರೆಸ್ ಕೂಡ ಈ ಚುನಾವಣೆಯಲ್ಲಿ ದನಗಳ ಬಗ್ಗೆ ಮಾತಾಡಿತ್ತು. ಲಿಂಚಿಂಗ್ ಬಗ್ಗೆ ಮೌನ ವಹಿಸಿತ್ತು. ಹಿಂದುತ್ವದ ಚಕಾರ ಎತ್ತಲಿಲ್ಲ. ಚುನಾವಣೆ ಬಂದಾಗ ಮೋದಿ, ಶಾ, ಆದಿತ್ಯನಾಥ್ ತ್ರಿಮೂರ್ತಿಗಳು ಯಾವುದರ ಪರ ನಿಲ್ಲುತ್ತಾರೆಂಬುದು ಮತದಾರರಿಗೆ ಸ್ಪಷ್ಟವಾಗಿ ತಿಳಿಯುತ್ತದೆ.

ಆದರೆ, ರಾಹುಲ್ ಯಾವುದರ ಪರ ನಿಲ್ಲುತ್ತಾರೆ? ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯವರು ಅದನ್ನು ಮೋದಿ ಹಾಗೂ ರಾಹುಲ್ ನಡುವಿನ ಯುದ್ಧವಾಗಿ ಬಿಂಬಿಸುತ್ತಾರೆ. ಮೋದಿ ತೂಕದ ಮುಂದೆ ರಾಹುಲ್ ಕಮ್ಮಿ ಎಂಬುದು ಅವರ ಯೋಚನೆ. ಹೀಗಾಗಿ ರಾಹುಲ್ ತಾನು ಮೋದಿ ಅಲ್ಲ ಎಂದು ಸಾಬೀತುಪಡಿ ಸಿದರಷ್ಟೇ ಸಾಲದು, ಅದಕ್ಕಿಂತ ಹೆಚ್ಚಿನದು ತನ್ನಲ್ಲಿದೆ ಎಂದೂ ತೋರಿಸಬೇಕಾಗುತ್ತದೆ.

-ಸಂದೀಪ್ ರಾಯ್, ಹಿರಿಯ ಪತ್ರಕರ್ತ

- ದಿ ಪ್ರಿಂಟ್ ಲೇಖನ