ಭೋಪಾಲ್‌[ಡಿ.13]: ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರಸ್‌ ಅಭ್ಯರ್ಥಿಗಳು ಸಾವಿರಕ್ಕೂ ಕಡಿಮೆ ಅಂತರದಿಂದ ಗೆಲುವು ದಾಖಲಿಸಿದ್ದು, ಚುನಾವಣೆಯ ದಿಕ್ಕನ್ನೇ ಬದಲಿಸಿದೆ. ದೇಶದ ಇತ್ತೀಚಿನ ಚುನಾವಣಾ ಇತಿಹಾಸದಲ್ಲೇ ಮಧ್ಯ ಪ್ರದೇಶ ಚುನಾವಣೆ ಅತ್ಯಂತ ಸಮೀಪದ ಅಂತರದ ಗೆಲುವು ದಾಖಲಾದ ವಿಧಾನಸಭೆ ಚುನಾವಣೆ ಎನಿಸಿಕೊಂಡಿದೆ.

ಕಾಂಗ್ರೆಸ್‌ ಮುಕ್ತ ಭಾರತ ಸದ್ಯಕ್ಕೆ ಅಸಾಧ್ಯ, ಲೋಕಸಭೆ ಚುನಾವಣೆ ಸುಲಭವಿಲ್ಲ!

ಅಂಕೆ ಸಂಖ್ಯೆಗಳ ಪ್ರಕಾರ, ಬಿಜೆಪಿಗೆ ಒಟ್ಟಾರೆ 1,56,42,980 ಲಕ್ಷ ಮತಗಳು ಲಭ್ಯವಾಗಿದ್ದರೆ, ಕಾಂಗ್ರೆಸ್‌ 1,55,95,153 ಮತಗಳನ್ನು ಪಡೆದುಕೊಂಡಿದೆ. ಈ ಎರಡು ಪಕ್ಷಗಳ ಮಧ್ಯೆ ಕೇವಲ 47,817 ಮತಗಳ ಅಂತರವಿದೆ. 13 ವಿಧಾನಸಭಾ ಕ್ಷೇತ್ರಗಳಲ್ಲಿ 2000ಕ್ಕಿಂತಲೂ ಕಡಿಮೆ ಮತಗಳಿಂದ ವಿಜೇತರ ನಿರ್ಧಾರವಾಗಿದೆ. ಇದರ ಪೈಕಿ 8ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. 9 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ 1,000ಕ್ಕೂ ಕಡಿಮೆ ಅಂತರದ ಮತಗಳಿಂದ ನಿರ್ಧಾರವಾಗಿದೆ. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ತೀರಾ ಕಡಿಮೆ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಈಗ ಯಾವ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರ? ಇಲ್ಲಿದೆ ವಿವರ

ಉದಾಹರಣೆಗೆ ದಕ್ಷಿಣ ಗ್ವಾಲಿಯರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಪಾಠಕ್‌ ಕೇವಲ 121 ಮತಗಳ ಅಂತರದಿಂದ ಹಾಲಿ ಶಾಸಕರಾಗಿದ್ದ ನಾರಾಯಣ ಸಿಂಗ್‌ ಕುಶ್ವಾಹ ಅವರನ್ನು ಸೋಲಿಸಿದ್ದಾರೆ. ಸುವಾರ್ಸಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 350 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಉತ್ತರ ಜಬಲ್ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಿಜೆಪಿಯನ್ನು 578 ಮತಗಳಿಂದ ಸೋಲಿಸಿದೆ. ರಾಜ್‌ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿಕ್ರಮ್‌ ಸಿಂಗ್‌ 732 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.