ಜೈಪುರ: ಕಳೆದ ಡಿ.11 ರಂದು ಪ್ರಕಟವಾದ ಪಂಚರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶಗಳು ಅಚ್ಚರಿದಾಯಕವಾಗಿತ್ತು. ಬಿಜೆಪಿ ಭದ್ರಕೋಟೆಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ, ಹಾಗೂ ಸಚಿನ್ ಪೈಲೆಟ್ ಉಪ-ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬದ್ಧವೈರಿಗಳಂತಿವೆ. ಅದರಲ್ಲೂ ಮಧ್ಯಪ್ರದೇಶದಲ್ಲಿ ಸಿಕ್ಕ ಸೋಲು ಬಿಜೆಪಿ ನಾಯಕರಿಗೆ ಬಹಳಷ್ಟು ಹಿನ್ನಡೆಯನ್ನುಂಟು ಮಾಡಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕರ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಸಿಎಂ ಕಾಂಗ್ರೆಸ್ ನಾಯಕರ ಸಂಭ್ರಮದಲ್ಲಿ ಪಾಲ್ಗೊಳ್ಳುವುದರೊಂದಿಗೆ, ಸಂಭ್ರಮಿಸಿರುವ ಅಪರೂಪದ ಘಟನೆ ನಡೆದಿತ್ತು.

ಇದನ್ನೂ ಓದಿ:  'ಕೈ' ನಾಯಕರ ಗೆಲುವನ್ನು ಸಂಭ್ರಮಿಸಿದ ಬಿಜೆಪಿ ಲೀಡರ್ ಶಿವರಾಜ್ ಸಿಂಗ್ ಚೌಹಾಣ್!

ಅಷ್ಟೇ ಅಲ್ಲ, ರಾಜಸ್ಥಾನದಲ್ಲೂ ಬಿಜೆಪಿಗೆ ಶಾಕ್ ನೀಡಿ  ಕಾಂಗ್ರೆಸ್  ಅಧಿಕಾರಕ್ಕೆ ಬಂದಿದೆ. ಜೈಪುರದ ಅಲ್ಬರ್ಟ್ ಹಾಲ್ ನಲ್ಲಿ ನಡೆದ  ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ, ಸಮಾರಂಭಕ್ಕೆ ಆಗಮಿಸಿದ್ದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾರನ್ನು ತಬ್ಬಿಕೊಂಡು ಅಭಿನಂದಿಸಿದ್ದಾರೆ. ರಾಜಮನೆತನಕ್ಕೆ ಸೇರಿದ ಅವರಿಬ್ಬರು ಸಂಬಂಧಿಗಳಾಗಿದ್ದು, ವಸುಂಧರಾ ರಾಜೇ ಜ್ಯೋತಿರಾದಿತ್ಯ ಸಿಂಧಿಯಾರ ಅತ್ತೆಯಾಗಿದ್ದಾರೆ.

ಸೋಲನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳದೇ, ಕಾರ್ಯಕ್ರಮದಲ್ಲಿ ಭಾಗವಹಿಸುವ ಮತ್ತು ಅಭಿನಂದಿಸುವ ಬಿಜೆಪಿ ನಾಯಕರ ನಡೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. 

ಇದನ್ನೂ ಓದಿ: ಪತ್ನಿ, ಅರಮನೆ, ಶ್ರೀಮಂತಿಕೆ: ಜ್ಯೋತಿರಾದಿತ್ಯ ಸಿಂಧಿಯಾ ಲೈಫ್ ಸ್ಟೈಲ್!

ಕಳೆದ ನವೆಂಬರ್ ಹಾಗೂ ಡಿಸೆಂಬರ್ ಆರಂಭದಲ್ಲಿ ತೆಲಂಗಾಣ, ಮೀಜೋರಾಂ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭೆಗಳಿಗೆ ವಿವಿಧ ಹಂತಗಳಲ್ಲಿ  ಚುನಾವಣೆ  ನಡೆದಿತ್ತು.