ಡ್ರ್ಯಾಗನ್ ಮೌನ: ಪಾಪಿ ಪಾಕ್‌ಗೆ ಪರೋಕ್ಷ ಬೆಂಬಲದ ಅನುಮಾನ!
ಉಗ್ರ ದಾಳಿಯ ಬಗ್ಗೆ ತುಟಿ ಪಿಟಿಕ್ ಎನ್ನದ ಚೀನಾ| ವಿಶ್ವದ ಹಲವು ರಾಷ್ಟ್ರಗಳಿಂದ ಭಾರತಕ್ಕೆ ಬೆಂಬಲ! ದಾಳಿ ಖಂಡಿಸದ ಚೀನಾದಿಂದ ದಾಳಿಗೆ ಬೆಂಬಲ?| ದ್ರೋಹಿ ಪಾಕಿಸ್ತಾನಕ್ಕೆ ಬೆಂಬಲ ನೀಡಿತಾ ನರಿಬುದ್ಧಿಯ ಚೀನಾ?| ಜೈಶ್-ಎ-ಮೊಹ್ಮದ್ ಉಗ್ರ ಅಜರ್‌ಗೆ ಚೀನಾ ಪರೋಕ್ಷ ಬೆಂಬಲ| ಅಜರ್ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಲು ಚೀನಾ ನಕಾರ|
ನವದೆಹಲಿ(ಫೆ.15): CRPF ವಾಹನದ ಮೇಲಿನ ಪಾಕ್ ಬೆಂಬಲಿತ ಉಗ್ರರ ಆತ್ಮಾಹುತಿ ದಾಳಿಯನ್ನು ಇಡೀ ವಿಶ್ವ ಖಂಡಿಸುತ್ತಿದೆ. ಅಮೆರಿಕ, ಫ್ರಾನ್ಸ್, ಜರ್ಮನಿ, ನೇಪಾಳ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳು ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿವೆ.
ಆದರೆ ನೆರೆಯ ಚೀನಾ ಮಾತ್ರ ಭಾರತದ ಮೇಲಿನ ಉಗ್ರ ದಾಳಿಯನ್ನು ಕಾಟಾಚಾರಕ್ಕೆ ಎಂಬಂತೆ ಖಂಡಿಸಿದೆ. ದಾಳಿಯ ಕುರಿತು ಸಣ್ಣ ಧ್ವನಿಯಲ್ಲಿ ಅಧಿಕೃತ ಹೇಳಿಕೆ ನೀಡಿರುವ ಚೀನಾ ನಡೆ ಅನುಮಾನ ಮೂಡಿಸುತ್ತಿದೆ.
ಪಾಕಿಸ್ತಾನದೊಂದಿಗೆ ಗಾಢ ವ್ಯಾಪಾರ ಸಂಬಂಧ ಹೊಂದಿರುವ ಚೀನಾ, ಪಾಕ್ ಬೆಂಬಲಿತ ಉಗ್ರರ ದಾಳಿಯನ್ನು ಖಂಡಿಸದೇ ಆ ರಾಷ್ಟ್ರದ ಪರವಾಗಿ ನಿಂತಿರುವ ಅನುಮಾನ ಇದೀಗ ಕಾಡತೊಡಗಿದೆ.
ಅಷ್ಟೇ ಅಲ್ಲದ ದಾಳಿಯ ಹೊಣೆ ಹೊತ್ತಿರುವ ಪಾಕ್ ಬೆಂಬಲಿತ ಜೈಶ್-ಎ-ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ಗೆ ಚೀನಾ ಬೆಂಬಲ ನೀಡುತ್ತಿರುವುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಭಾರತದ ಸತತ ಮನವಿಗಳ ಬಳಿಕವೂ ಮಸೂದ್ ಗೆ ಉಗ್ರ ಪಟ್ಟ ನೀಡಲು ಚೀನಾ ಹಿಂದೇಟು ಹಾಕುತ್ತಿದೆ.
ಇದೀಗ ಉಗ್ರರ ಭೀಕರ ದಾಳಿಯನ್ನೂ ಖಂಡಿಸದ ಚೀನಾ, ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆಯಾ?, ಒಂದು ವೇಳೆ ನಿಂತಿದ್ದರೆ ಅದನ್ನು ಧೈರ್ಯವಾಗಿ ಏಕೆ ಘೋಷಿಸುತ್ತಿಲ್ಲ ಎಂಬ ಪ್ರಶ್ನೆಗಳು ಮೂಡತೊಡಗಿವೆ.