ಸಿಆರ್‌ಪಿಎಫ್ ಬಸ್ ಮೇಲೆ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿದ ಜೈಷ್-ಎ- ಮೊಹಮ್ಮದ್ ಸಂಘಟನೆಯ ಉಗ್ರನನ್ನು ಆದಿಲ್ ಅಹಮದ್ ದರ್ ಎಂದು ಗುರುತಿಸಲಾಗಿದೆ. ದಾಳಿ ಬಗ್ಗೆ ಜೈಷ್ ಉಗ್ರ ಸಂಘಟನೆ ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋ ಬಿಡುಗಡೆಯಾಗುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಉಗ್ರ ಹೇಳಿದ್ದಾನೆ.
ಜಮ್ಮು-ಕಾಶ್ಮೀರ : ಸಿಆರ್‌ಪಿಎಫ್ ಬಸ್ ಮೇಲೆ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿದ ಜೈಷ್-ಎ- ಮೊಹಮ್ಮದ್ ಸಂಘಟನೆಯ ಉಗ್ರನನ್ನು ಆದಿಲ್ ಅಹಮದ್ ದರ್ ಎಂದು ಗುರುತಿಸಲಾಗಿದೆ. ಆದಿಲ್ ಅಹಮದ್ ಗಾಡಿ ಅಲಿಯಾಸ್ ಗೌಂಡಿವಾಗ್ ವಕಾಸ್ ಕಮಾಂಡೋ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದ ಈತ ಕಳೆದ ವರ್ಷವಷ್ಟೇ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ. ಈತ ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಪೋರ ನಿವಾಸಿಯಾಗಿದ್ದಾನೆ.
2016ರ ಮಾ.19ರ ಬಳಿಕ ಆದಿಲ್ ದರ್ ತನ್ನ ಸ್ನೇಹಿತರಾದ ತೌಸೀಫ್ ಹಾಗೂ ವಾಸೀಮ್ ಜೊತೆ ನಾಪತ್ತೆಯಾಗಿದ್ದ. ತೌಸೀಫ್‌ನ ಹಿರಿಯ ಸಹೋದರ ಮಂಜೂರ್ ಅಹಮದ್ ದರ್ ಕೂಡ ಒಬ್ಬ ಉಗ್ರನಾಗಿದ್ದು, 2016ರಲ್ಲಿ ಆತ ಹತ್ಯೆಯಾಗಿದ್ದ. ಶಾಲೆಯನ್ನು ಅರ್ಧಕ್ಕೇ ಬಿಟ್ಟಿದ್ದ ಆದಿಲ್ ಗಾರೆಕೆಲಸಗಾರನಾಗಿ ಕೆಲಸಕ್ಕೆ ಸೇರಿದ್ದ. ಈತನಿಗೆ ಇಬ್ಬರು ಸಹೋದರರು ಇದ್ದಾರೆ.
ವಿಡಿಯೋದಲ್ಲಿ ಏನಿದೆ?
ದಾಳಿ ನಡೆದ ಕೆಲ ಹೊತ್ತಿನಲ್ಲೇ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಜೈಷ್ ಧ್ವಜ ಹಾಗೂ ಅತ್ಯಾಧುನಿಕ ರೈಫಲ್ಸ್‌ಗಳನ್ನು ಹಿಡಿದು ಕಾಣಿಸಿಕೊಂಡಿರುವ ಉಗ್ರ ಆದಿಲ್ ಅಹಮದ್ ದರ್, ‘ಈ ವಿಡಿಯೋ ಬಿಡುಗಡೆ ಆಗುವ ವೇಳೆಗೆ ನಾನು ಸ್ವರ್ಗದಲ್ಲಿ ಇರುತ್ತೇನೆ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ನಾನು ಒಂದು ವರ್ಷವನ್ನು ಕಳೆದಿದ್ದೇನೆ. ಕಾಶ್ಮೀರ ಜನರಿಗೆ ಇದು ನನ್ನ ಕೊನೆಯ ಸಂದೇಶ’ ಎಂದು ಹೇಳಿಕೊಂಡಿದ್ದಾನೆ.
