ಬೆಂಗಳೂರಿನಲ್ಲಿ, ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದಾಳೆ. ಗಲಾಟೆ ತಾರಕಕ್ಕೇರಿದಾಗ ಪತಿಯ ಹೊಟ್ಟೆ ಹಾಗೂ ಎದೆಗೆ ಇರಿದ ಪರಿಣಾಮ ಆತ ಮೃತಪಟ್ಟಿದ್ದಾನೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.
ಬೆಂಗಳೂರು: ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ ಆರೋಪದ ಮೇಲೆ ಪತ್ನಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಮುಖ್ಯರಸ್ತೆಯ ಹೊಂಗಸಂದ್ರ ನಿವಾಸಿ ಮುರುಗೇಶ್ (50) ಕೊ*ಲೆಯಾದವ. ಕೃತ್ಯ ಎಸಗಿದ ಸಂಬಂಧ ಪತ್ನಿ ಲಕ್ಷ್ಮೀ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮುರುಗೇಶ್ ಮತ್ತು ಲಕ್ಷ್ಮೀ ಸುಮಾರು 15 ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ವಿಪರೀತ ಮದ್ಯ ವ್ಯಸನಿಯಾಗಿದ್ದ ಮುರುಗೇಶ್ ನಿತ್ಯ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ.
ಚಾಕುವಿನಿಂದ ಗಂಡನಿಗೆ ಇರಿದ ಪತ್ನಿ
ಮಂಗಳವಾರ ತಡರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡಿ, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ಲಕ್ಷ್ಮೀ, ಚಾಕುವಿನಿಂದ ಮುರುಗೇಶ್‌ನ ಹೊಟ್ಟೆ ಹಾಗೂ ಎದೆಭಾಗಕ್ಕೆ ಇರಿದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಗಲಾಟೆ ಶಬ್ಧ ಕೇಳಿದ ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದಾಗಿ ದೃಢಪಡಿಸಿದ್ದಾರೆ.
ಮುರುಗೇಶ್ ಪತ್ನಿ ಲಕ್ಷ್ಮಿ ಬಂಧನ:
ಈ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊದಲಿಗೆ ಆತನೇ ಚುಚ್ಚಿಕೊಂಡಿದ್ದಾನೆ ಎಂದು ಲಕ್ಷ್ಮಿ ಕಥೆ ಕಟ್ಟಿದ್ದಾಳೆ. ಆದರೆ ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದ ಬಳಿಕ ತಾನೇ ಕೊನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಪೊಲೀಸರು ಲಕ್ಷ್ಮಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


