ಸಚಿವ ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಡಿನ್ನರ್ ಪಾರ್ಟೀಲಿ ಯಾವುದೇ ಚರ್ಚೆ ನಡೆದಿಲ್ಲ ಎಂದರು. ಅಲ್ಲದೆ, ಬೆಳಗಾವಿಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದೂ, ಹಿಪ್ಪರಗಿ ಬ್ಯಾರೇಜ್‌ ನಷ್ಟಕ್ಕೆ ಮಹಾರಾಷ್ಟ್ರದಿಂದ ನೀರು ಕೇಳುವ ಚಿಂತನೆ ಇದೆ ಎಂದರು.

ಬೆಳಗಾವಿ (ಮಾ.14): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಡಿನ್ನರ್ ಪಾರ್ಟಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಅಧ್ಯಕ್ಷ ಸ್ಥಾನ ಸಿಕ್ಕಾಗ ನೋಡೋಣ. ಆಗ ಚರ್ಚೆ ಮಾಡೋಣ. ಡಿನ್ನರ್ ಪಾರ್ಟಿಯಲ್ಲಿ ಈ ವಿಷಯದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಯಾವುದೇ ನಿರ್ಣಯವಾಗಿಲ್ಲ. ದೆಹಲಿಗೆ ತೆರಳಿದ ಸಂದರ್ಭದಲ್ಲೂ ಪಕ್ಷದ ನೇತೃತ್ವ ಬದಲಾವಣೆ ಕುರಿತು ಉಂಟಾಗಿರುವ ಗೊಂದಲವನ್ನು ಇತ್ಯರ್ಥಗೊಳಿಸುವಂತೆ ಮಾತ್ರ ಸೂಚನೆ ನೀಡಲಾಗಿದೆ ಎಂದರು.ನಾಯಕತ್ವ ಬದಲಾವಣೆ ಸಂಬಂಧ ಇರುವ ಗೊಂದಲವನ್ನು ಬಗೆಹರಿಸಬೇಕೆಂದು ಹೈಕಮಾಂಡ್‌ಗೆ ಹೇಳಿದ್ದೇವೆ. ಅದನ್ನು ಅವರೇ ಬಗೆಹರಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೆಳಗಾವಿ ಜಿಲ್ಲೆಗೆ ದೊರಕುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸ್ಥಾನ ಸಿಕ್ಕಾಗ ಸಂತೋಷಪಡೋಣ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಇಲ್ಲ:

ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿಯೂ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಆಯಾ ಗ್ರಾಪಂ ಮಟ್ಟದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಾರೆ. ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಸ್ವಂತ ನೀರಿನ ಟ್ಯಾಂಕರ್‌ಗಳಿದ್ದು ಅವುಗಳಿಂದ ನೀರಿನ ವ್ಯವಸ್ಥೆ ಕಲ್ಪಿಸಲು ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಟ್ಯಾಂಕರ್‌ ಇಲ್ಲದ ಗ್ರಾಪಂಗಳು ಟ್ಯಾಂಕರ್‌ಗಳನ್ನು ಖರೀದಿಸಬೇಕು. ಸದ್ಯಕ್ಕೆ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಏಪ್ರಿಲ್‌ ನಂತರ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ತಿಳಿಸಿದರು.

ನೀರು ಬಿಡುಗಡೆಗೆ ಮನವಿ: ಹಿಪ್ಪರಗಿ ಬ್ಯಾರೇಜ್‌ನ 22ನೇ ಕ್ರಸ್ಟ್ ಗೇಟ್ ಮುರಿದು ಬಿದ್ದ ಪರಿಣಾಮ ಕೃಷ್ಣಾ ನದಿಯ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಪೋಲಾಗಿದೆ. ಸುಮಾರು 2 ರಿಂದ 3 ಟಿಎಂಸಿ ಅಡಿ ನೀರು ಹರಿದು ಹೋಗಿದೆ. ಆದ್ದರಿಂದ ನೀರಿನ ಕೊರತೆ ನೀಗಿಸಲು ಮಹಾರಾಷ್ಟ್ರ ಸರ್ಕಾರದಿಂದ ಸುಮಾರು 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ವಿನಂತಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆ ಪ್ರಸ್ತುತ ಜಾರಿಯಲ್ಲಿದೆ. ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಶೇ.85 ರಷ್ಟು ಕಾರ್ಯ ಪೂರ್ಣಗೊಂಡಿದೆ. ಸುಮಾರು ಶೇ.92 ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಮಾಡುವ ಗುರಿ ತಲುಪಲು ಅಧಿಕಾರಿಗಳಿಗೆ ತಿಳಿಸಿದ್ದಾಗಿ ಹೇಳಿದರು.

ಮಹಾನಗರ ಪಾಲಿಕೆ ಸಭೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸುಮಾರು 60 ಸಾವಿರ ಮತದಾರರು ಕಾಣೆಯಾಗಿರುವ ಬಗ್ಗೆ ಕೇಳಿ ಬಂದ ಆರೋಪಕ್ಕೆ ಪ್ರತಿಕ್ರಿಯಿಸಿ, ಇನ್ನೂ ಪ್ರಕ್ರಿಯೆ ನಡೆಯುತ್ತಿದೆ. ಮೂರು ಬಾರಿ ಮನೆಗೆ ಹೋಗಿ ಪರಿಶೀಲಿಸಲಾಗುತ್ತಿದೆ. ಮತದಾರರನ್ನು ಹುಡುಕುವುದು ಅಧಿಕಾರಿಗಳ ಜವಾಬ್ದಾರಿ. ಮುಂದಿನ ವಾರ ಮತ್ತೊಂದು ಸಭೆ ಕರೆಯಲಾಗಿದೆ ಎಂದರು.

ಮೇಟಿ ಕುಟುಂಬಕ್ಕೆ ಟಿಕೆಟ್‌:

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ, ಅವರ ಕುಟುಂಬಸ್ಥರಿಗೆ ಟಿಕೆಟ್‌ ನೀಡಲಾಗುವುದು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸಲು ಈಗಾಗಲೇ ಸಿದ್ಧತೆ ನಡೆಸಿದ್ದೇವೆ. ಹೈಕಮಾಂಡ್, ಕ್ಷೇತ್ರದ ಮತದಾರರು, ಕುಟುಂಬದ ಒಮ್ಮತದ ಆಧಾರದ ಮೇಲೆ ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು.ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಡೆಯುತ್ತಿರುವ ನೂತನ ಜಿಲ್ಲಾಡಳಿತ ಭವನ ಮತ್ತು ನವೀಕರಣ ಕಾಮಗಾರಿಗಳನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಪರಿಶೀಲಿಸಿದರು.