ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆರೋಪಿಗಳಿಗೆ ಮನೆ ಊಟ ನೀಡದ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ವಕೀಲರು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ, ರೇಣುಕಾಸ್ವಾಮಿ ತಾಯಿಯನ್ನು ಹಾಸ್ಟೈಲ್ ಸಾಕ್ಷಿ ಎಂದು ಪರಿಗಣಿಸುವ ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ವಕೀಲರು ಮುಂದಾಗಿದ್ದಾರೆ. ಪ್ರಕರಣದ ಆರೋಪಿಗಳಾದ ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ಇಂದು ನ್ಯಾಯಾಲಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಈ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್, ಆರೋಪಿಗಳಿಗೆ ವಾರಕ್ಕೆ ಒಮ್ಮೆ ಮನೆ ಊಟ ನೀಡುವಂತೆ ಸ್ಪಷ್ಟ ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶ ಇದ್ದರೂ ಜೈಲು ಅಧಿಕಾರಿಗಳು ಇದನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಯಾವುದೇ ಹೆಚ್ಚುವರಿ ಸ್ಪಷ್ಟನೆ ಕೇಳದೆ, ನೇರವಾಗಿ ಆದೇಶ ಪಾಲಿಸುವಂತೆ ಕೋರ್ಟ್ ಸೂಚನೆ ನೀಡಿದ್ದರೂ ಸಹ ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ವಕೀಲರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ರೇಣುಕಾಸ್ವಾಮಿ ತಾಯಿಯನ್ನು ಹಾಸ್ಟೈಲ್ ಸಾಕ್ಷಿ ಎಂದು ಪರಿಗಣಿಸುವ ಮನವಿ ತಿರಸ್ಕಾರ

ಇದೇ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಮತ್ತೊಂದು ಹಿನ್ನಡೆ ಎದುರಾಗಿದ್ದು, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ಹಾಸ್ಟೈಲ್ ಸಾಕ್ಷಿ (ಪ್ರತಿಕೂಲ ಸಾಕ್ಷಿ) ಎಂದು ಪರಿಗಣಿಸುವಂತೆ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಸಾಕ್ಷಿ ಹೇಳಿಕೆ ವೇಳೆ ರತ್ನಪ್ರಭಾ ಹಲವು ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ, ವಿಶೇಷ ಸರ್ಕಾರಿ ಅಭಿಯೋಜಕ (SPP) ಈ ಮನವಿ ಸಲ್ಲಿಸಿದ್ದರು.

ರತ್ನಪ್ರಭಾ ನೀಡಿದ ಹೇಳಿಕೆಯಲ್ಲಿ ಉಂಟಾದ ಗೊಂದಲದ ಹಿನ್ನಲೆಯಲ್ಲಿ, ಅವರನ್ನು ಹಾಸ್ಟೈಲ್ ಸಾಕ್ಷಿ ಎಂದು ಘೋಷಿಸಿ, ಪಾಟೀ ಸವಾಲ್ (ಕ್ರಾಸ್ ಎಕ್ಸಾಮಿನೇಶನ್) ನಡೆಸಲು ಅವಕಾಶ ನೀಡುವಂತೆ ಪ್ರಾಸಿಕ್ಯೂಷನ್ ಕೋರಿತ್ತು. ಆದರೆ 57ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಈ ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಆದೇಶ ಹೊರಡಿಸಿದೆ.

ಆರೋಪಿಗಳ ಜಾಮೀನು ಅರ್ಜಿಗೆ ನಿರಾಕರಣೆ

ಇನ್ನೊಂದೆಡೆ, ಪ್ರಕರಣದ ಪ್ರಮುಖ ಆರೋಪಿ ಪ್ರದೂಷ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ಕೋರ್ಟ್ ವಜಾಗೊಳಿಸಿದೆ. ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ತಾತ್ಕಾಲಿಕ ಜಾಮೀನು ನೀಡುವಂತೆ ಪ್ರದೂಷ್ ಮನವಿ ಮಾಡಿಕೊಂಡಿದ್ದರು. ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯ, ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಪ್ರಾಸಿಕ್ಯೂಷನ್‌ಗೆ ಮತ್ತೊಂದು ಹಿನ್ನಡೆ

ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಒಂದರ ಮೇಲೊಂದು ಹಿನ್ನಡೆ ಎದುರಾಗುತ್ತಿದೆ. ಸಾಕ್ಷಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವ ಮನವಿ, ಪಾಟೀ ಸವಾಲ್‌ಗೆ ಅವಕಾಶ ನೀಡುವ ಬೇಡಿಕೆ ಸೇರಿದಂತೆ ಎಲ್ಲಾ ಪ್ರಮುಖ ಮನವಿಗಳನ್ನು ಕೋರ್ಟ್ ತಿರಸ್ಕರಿಸಿದೆ. ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಸಲ್ಲಿಸಿದ್ದ ಮನವಿಗಳನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ.