ಇಡೀ ದಿನ ಪರಸ್ಪರ ಬಂದೂಕು ಹಿಡಿದು ನಿಂತ ಭಾರತ-ಚೀನಾ ಸೈನಿಕರು!
ಗಡಿಯಲ್ಲಿ ಮತ್ತೆ ಚೀನಿ ಸೈನಿಕರಿಂದ ಉದ್ವಿಗ್ನ ವಾತಾವರಣ ಸೃಷ್ಟಿ| ಲಡಾಖ್ ಬಳಿಯ ಪ್ಯಾಂಗಾಂಗ್ ಸರೋವರದ ಬಳಿ ಭಾರತ-ಚೀನಾ ಸೈನಿಕರ ಜಟಾಪಟಿ| ಭಾರತೀಯ ಸೈನಿಕರು ಗಸ್ತು ತಿರುಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಚೀನಿ ಸೈನಿಕರು| ಇಡೀ ದಿನ ಪರಸ್ಪರ ಬಂದೂಕು ಹಿಡಿದು ನಿಂತ ಉಭಯ ಸೇನೆಯ ಸೈನಿಕರು| ಸಂಜೆ ವೇಳೆ ಉಭಯ ಸೇನೆಯ ಸೇನಾಧಿಕಾರಿಗಳ ಸಂಧಾನ ಮಾತುಕತೆ ಯಶಸ್ವಿ|
ಲೇಹ್(ಸೆ.12): ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಉಭಯ ರಾಷ್ಟ್ರಗಳ ನಡುವಿನ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಆಗಾಗ ಸ್ಫೋಟವಾಗುತ್ತಲೇ ಇದ್ದು, ಮತ್ತೆ ಚೀನಾ-ಭಾರತ ಸೈನಿಕರು ಪರಸ್ಪರ ಸಂಘರ್ಷ ನಡೆಸಿದ ಘಟನೆ ವರದಿಯಾಗಿದೆ.
ಸೇನಾ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಲಡಾಖ್ ಬಳಿಯ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ಏರ್ಪಟ್ಟಿದೆ.
ಪ್ಯಾಂಗಾಂಗ್ ಸರೋವರದ ಬಳಿ ವಾಸ್ತವಿಕ ಗಡಿ ರೇಖೆಯ ಬಳಿ ನಿನ್ನೆ ಭಾರತೀಯ ಸೈನಿಕರು ಗಸ್ತು ತಿರುಗುವ ವೇಳೆ, ಚೀನಿ ಸೈನಿಕರೊಂದಿಗೆ ಸಂಘರ್ಷ ಏರ್ಪಟ್ಟಿದೆ ಎಂದು ಸೇನೆ ಮಾಹಿತಿ ನೀಡಿದೆ.
ಭಾರತೀಯ ಸೈನಿಕರು ಗಸ್ತು ತಿರುಗುವುದಕ್ಕೆ ಚೀನಿ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ. ಅಲ್ಲದೇ ಉಭಯ ಸೇನೆ ಹೆಚ್ಚುವರಿ ಸೈನಿಕರನ್ನು ಸ್ಥಳಕ್ಕೆ ಕರೆಸಿಕೊಂಡ ಪರಿಣಾಮ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿತ್ತು ಎಂದು ಸೇನೆ ತಿಳಿಸಿದೆ.
ಆದರೆ ಸಂಜೆ ವೇಳೆ ಭಾರತ ಮತ್ತು ಚೀನಾ ಸೇನೆಯ ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆಂದು ಸೇನೆ ಸ್ಪಷ್ಟಪಡಿಸಿದೆ.
ಪ್ಯಾಂಗಾಂಗ್ ಸರೋವರದ ಬಳಿ ಈ ಹಿಂದೆ ಚೀನಾ ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿತ್ತು. ಈ ವೇಳೆ ತಡೆಯಲು ಬಂಧ ಭಾರತೀಯ ಸೈನಿಕರ ಮೇಲೆ ಚೀನಿ ಸೈನಿಕರು ಕಲ್ಲು ತೂರಿದ್ದರು. ಭಾರತ-ಚೀನಾ ಸೈನಿಕರ ನಡುವಿನ ಸಂಘರ್ಷದ ವಿಡಿಯೋ ಭಾರೀ ವೈರಲ್ ಆಗಿತ್ತು.