ಡೋಕ್ಲಾಮ್ ನಲ್ಲಿ ಚೀನಾ ಚಟುವಟಿಕೆ: ಅಮೆರಿಕ ಅಧಿಕಾರಿ ಎಚ್ಚರಿಕೆ!
ಡೋಕ್ಲಾಮ್ ಕುರಿತು ಭಾರತದ ಉದಾಸೀನ ಸಲ್ಲ
ಡೋಕ್ಲಾಮ್‌ನಲ್ಲಿ ಚೀನಾ ಚಟುವಟಿಕೆ ನಡೆಸುತ್ತಿದೆ
ಅಮೆರಿಕ ಅಧಿಕಾರಿ ಆಲಿಸ್ ಜಿ. ವೆಲ್ಸ್ ಹೇಳಿಕೆ
ಗಡಿ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣ
ವಾಷಿಂಗ್ಟನ್(ಜು.26): ಚೀನಾ ಸದ್ದಿಲ್ಲದೆ ಡೋಕ್ಲಾಮ್ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರೆಸಿದೆ. ಆದರೆ ಭಾರತ ಮತ್ತು ಭೂತಾನ್ ಇದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಲು ಯತ್ನಿಸುತ್ತಿವೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲೂ ಚೀನಾದ ಕಾರ್ಯಗಳು ಮತ್ತು ಅದರ ತಂತ್ರಗಳು ಹೆಚ್ಚುತ್ತಿದ್ದು, ಭಾರತ ತನ್ನ ಉತ್ತರದ ಗಡಿಯನ್ನು ಬಲವಾಗಿ ಸಮರ್ಥಿಸುತ್ತಿದೆ ಎಂದು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಉಪ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ ವೆಲ್ಸ್ ಹೇಳಿದ್ದಾರೆ. ಭಾರತದ ಗಡಿ ಪ್ರದೇಶಗಳಲ್ಲಿ ಚೀನಾ ರಸ್ತೆಗಳನ್ನು ನಿರ್ಮಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವೆಲ್ಸ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಭಾರತ ಮತ್ತು ಚೀನಾ ನಡುವೆ ತೀವ್ರ ಘರ್ಷಣೆಗೆ ಕಾರಣವಾಗಿದ್ದ ಡೊಕ್ಲಾಮ್ ಗಡಿ ಬಿಕ್ಕಟ್ಟು ಇತ್ತೀಚಿಗಷ್ಟೇ ಅಂತ್ಯಗೊಂಡಿತ್ತು. ಎರಡು ತಿಂಗಳು ನಿರಂತರ ಘರ್ಷಣೆಯ ಬಳಿಕ ಗಡಿಯಿಂದ ಎರಡೂ ಕಡೆಯ ಸೇನೆಗಳನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಹಿಂದೆ ಸರಿಯುವ ನಾಟಕವಾಡಿದ ಚೀನಾ ಇದೀಗ ಮತ್ತೆ ಡೋಕ್ಲಾಮ್ ನಲ್ಲಿ ತನ್ನ ಚಟುವಟಿಕೆ ಹೆಚ್ಚಿಸುತ್ತಿದೆ ಎಂದು ವೆಲ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.