ಡಾ. ರಾಜ್‌ಕುಮಾರ್ ಅವರ ಮೂಲ ಹೆಸರಾದ 'ಮುತ್ತುರಾಜು' ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಸಿನಿಮಾಗಳಲ್ಲಿ ಮುಂದುವರೆದಿದೆ. ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನಂತರ, ಈಗ ಯುವ ರಾಜ್‌ಕುಮಾರ್ ಅವರ 'ಎಕ್ಕ' ಸಿನಿಮಾದಲ್ಲೂ ‘ಮುತ್ತು’ ಪರಂಪರೆ ಮುಂದುವರೆದಿದೆ.
ಬೆಂಗಳೂರು (ಜು.11): ಕನ್ನಡ ಚಿತ್ರರಂಗದಲ್ಲಿ ಮುತ್ತುರಾಜ್ ಯುಗ ಇನ್ನೂ ನಡೆಯುತ್ತಿದೆ. ಹೌದು, ಕನ್ನಡ ಚಿತ್ರರಂಗದ ವರನಟ ಖ್ಯಾತಿಯ ಡಾ. ರಾಜ್ ಕುಮಾರ್ ಅವರ ಮೂಲ ಹೆಸರು ಮುತ್ತುರಾಜು ಆಗಿದೆ, ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಮುತ್ತು ಎನ್ನುವ ಹೆಸರುಗಳನ್ನು ಅವರ ಮಕ್ಕಳು ತಮ್ಮ ಸಿನಿಮಾದಲ್ಲಿ ಇಟ್ಟುಕೊಂಡು ಖ್ಯಾತಿಯನ್ನು ಬೆಳೆಸುತ್ತಲೇ ಇದ್ದಾರೆ. ಈಗಾಗಲೇ ಶಿವ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸಿನಿಮಾಗಳಲ್ಲಿ ಮುತ್ತು ಎನ್ನುವ ಹೆಸರಿಟ್ಟುಕೊಂಡಿದ್ದಾರೆ. ಅದರಲ್ಲಿ ಯಶಸ್ಸು ಕೂಡ ಕಂಡಿದ್ದಾರೆ. ಇದೀಗ ಅವರ 3ನೇ ತಲೆಮಾರಿನ ಯುವ ರಾಜ್‌ಕುಮಾರ್ ಕೂಡ ಎಕ್ಕ ಸಿನಿಮಾದಲ್ಲಿ ಮುತ್ತು ಎನ್ನುವ ಹೆಸರನ್ನಿಟ್ಟುಕೊಂಡು ಯಶಸ್ಸಿನ ಗೂಳಿಯ ಬೆನ್ನೇರಲು ಮುಂದಾಗಿದ್ದಾರೆ.
ಹೌದು, ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ ಅಮೂಲಾಗ್ರ ಮುತ್ತು, ಮರೆಯಲಾಗದ ಮಾಣಿಕ್ಯ ಎಂದರೆ ಮುತ್ತುರಾಜ್ ಅಲಿಯಾಸ್ ಮುತ್ತುರಾಜ ಅಲಿಯಾಸ್ ರಾಜ್ ಕುಮಾರ್. ಡಾ.ರಾಜ್ ಕುಮಾರ್ ಅವರ ಅಮೋಘ ಅಭಿನಯ, ಸದ್ಗುಣ, ವಿನಯವಂತಿಕೆ, ಸರಳತೆ ಹಾಗೂ ಅಭಿಮಾನಿಗಳನ್ನು ಗೌರವಿಸುತ್ತಿದ್ದ ಅವರ ಗುಣಗಳಿಗೆ ಎಲ್ಲರೂ ತಲೆಬಾಗುತ್ತಿದ್ದರು. ಮಹಾನ್ ವ್ಯಕ್ತಿತ್ವವನ್ನು ಹೊಂದಿದ್ದ ಹಾಗೂ ಸಿನಿಮಾ ಮಾಡುವುದಕ್ಕೆಂದೇ ತಮ್ಮ ಜೀವವನ್ನು ಸವೆಸಿದ ಮೇರು ವ್ಯಕ್ತಿತ್ವದ ರಾಜ್ ಕುಮಾರ್ ಅವರ ಕುಟುಂಬಕ್ಕೆ ದೊಡ್ಡಮನೆ ಎಂಬ ಖ್ಯಾತಿಯನ್ನೂ ಕೊಡಲಾಗಿದೆ. ಡಾ.ರಾಜ್‌ಕುಮಾರ್ ಅವರ ದೊಡ್ಮನೆ ಕುಟುಂಬದಲ್ಲಿ ಮೂರು ತಲೆಮಾರುಗಳಿಂದ ಮುತ್ತುರಾಜು ಎಂಬ ಹೆಸರನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಬರುವ ಕೆಲಸವನ್ನು ಮಾಡಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಮಿಂಚುತ್ತಿರುವ ಶಿವರಾಜ್ ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ಮುತ್ತು ಎನ್ನುವ ಹೆಸರನ್ನಿಟ್ಟುಕೊಂಡಿದ್ದಾರೆ. ತವರಿನ ಸಿರಿ ಸಿನಿಮಾನದಲ್ಲಿ ಮುತ್ತಣ್ಣ ಎಂದು ಹೆಸರಿಟ್ಟುಕೊಂಡಿದ್ದರು. ಇದಕ್ಕೂ ಮುಂಚಿತವಾಗಿ 1994ರಲ್ಲಿ ಮುತ್ತಣ್ಣ ಎಂಬ ಸಿನಿಮಾವನ್ನೇ ಮಾಡಿದ್ದರು. ಇದರಲ್ಲಿ ಮುತ್ತಣ್ಣ ಪೀಪಿ ಊದುವ, ಮುತ್ತಣ್ಣ ಡೋಲು ಬಡಿಯುವ, ನನ್ನ ತಂಗಿಯ ಮದುವೇ... ಡೋಲು ಡೋಲು ಡೋಲು.. ಹಾಡು ಮುತ್ತು ಎನ್ನುವ ಹೆಸರನ್ನು ಎಲ್ಲರ ಬಾಯಲ್ಲಿಯೂ ನಲಿದಾಡುವಂತೆ ಮಾಡಿತ್ತು. ಈ ಮೂಲಕ ಡಾ. ರಾಜ್ ಕುಮಾರ್ ಅವರ ಹೆಸರು ಎಲ್ಲೆಡೆ ಕೇಳುವಂತೆ ಮಾಡಿದ್ದರು.
ಇದಾದ ನಂತರ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜ್ ದಿ ಶೋಮ್ಯಾನ್ ಸಿನಿಮಾ 2009ರಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ಪುನೀತ್ ಅವರು ಮುತ್ತುರಾಜ್ ಎಂಬ ಹೆಸರನ್ನೇ ಇಟ್ಟುಕೊಂಡಿದ್ದರು. ಈ ಮೂಲಕ ಅವರ ತಂದೆಗೆ ಗೌರವ ಸಲ್ಲಿಕೆ ಮಾಡಿದ್ದರು. ಮುತ್ತು ಎಂಬ ಹೆಸರನ್ನು ಇಟ್ಟುಕೊಂಡ ಇವರ ಸಿನಿಮಾಗಳು ಕೂಡ ಯಶಸ್ವಿಯಾಗಿದ್ದವು. ಈ ಮೂಲಕ ಅಪ್ಪನ ಮೂಲ ಹೆಸರನ್ನು ಉಳಿಸಲು ತಮ್ಮ ಕೊಡುಗೆ ನೀಡಿದ್ದರು.
ಇದೀಗ ಡಾ.ರಾಜ್ ಕುಮಾರ್ ಅವರ 3ನೇ ತಲೆಮಾರಿನ ಯುಗ ಆರಂಭವಾಗಿದೆ. ಇದೀಗ ಯುವ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ 'ಎಕ್ಕ'ದಲ್ಲಿ ಮುತ್ತು ಎಂದು ಹೆಸರಿಟ್ಟುಕೊಂಡಿದ್ದಾರಂತೆ. ಈ ಮೂಲಕ ತಮ್ಮ ತಾತನ ಹೆಸರನ್ನು 3ನೇ ತಲೆಮಾರಿನಲ್ಲಿಯೂ ಹೊತ್ತು ಮೆರೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮುತ್ತು ಎಂಬ ಹೆಸರನ್ನು ಕೇಳುವ ಎಷ್ಟೋ ಅಭಿಮಾನಿಗಳು ಈಗಲೂ ಅಸಲಿ ಮುತ್ತುರಾಜು ಆಗಿರುವ ಡಾ. ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಇದೀಗ ಎಕ್ಕ ಸಿನಿಮಾ ಮೂಲಕವೂ ಮುತ್ತುರಾಜು ಅಭಿಮಾನಿಗಳ ಮುಂದೆ ಬರಲಿದ್ದಾರೆ.
