ಪತ್ರ ಬರೆಯುವುದು ಒಂದು ಸುಂದರ ಅನುಭೂತಿ. ಮೊಬೈಲ್ ಮೆಸೇಜ್ ಬಂದ ಮೇಲೆ ಪತ್ರ ಬರೆಯುವ ಆನಂದದಿಂದ ವಂಚಿತರಾದವರಿಗೆ ನಟಿ ಅಮೂಲ್ಯ ಬಂಪರ್ ಆಫರ್ ಕೊಟ್ಟಿದ್ದಾರೆ. ನಟಿ ಹೇಳಿದ್ದೇನು ಕೇಳಿ...
ಪತ್ರ ಬರೆಯುವುದು ಏನು ಎಂದೇ ಇಂದಿನ ಪೀಳಿಗೆಯವರಿಗೆ ಗೊತ್ತೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಲ ನಮ್ಮ ಕಣ್ಣೆದುರೇ ಬದಲಾಗಿ ಹೋಗಿದೆ. ಆದರೆ ಪೆನ್ನನ್ನು ಹಿಡಿದು ಪತ್ರದಲ್ಲಿ ನಮ್ಮ ಮನದ ಅನುಭವವನ್ನು ಬರೆಯುವ, ಅದರಲ್ಲಿ ನಮ್ಮ ಮನದ ಇಂಗಿತವನ್ನು ಅಕ್ಷರ ರೂಪದಲ್ಲಿ ಇಳಿಸುವ ರೀತಿಯೇ ಅನನ್ಯವಾದದ್ದು. ಈಗಿನ ವಾಟ್ಸ್ಆ್ಯಪ್ ಮಸೇಜ್ನಲ್ಲಿಯೇ ಮೆಸೇಜ್ ಕಳುಹಿಸುವವರಿಗೆ ಬಹುಶಃ ಆ ಪತ್ರ ಬರೆಯುವ ಅನುಭೂತಿ ಏನು ಎನ್ನುವುದೇ ಗೊತ್ತಿಲ್ಲ. ಆದರೆ ಈ ಎರಡೂ ಅನುಭೂತಿ ಪಡೆದುಕೊಂಡಿರುವವರಿಗೆ ಮಾತ್ರ ಅಂದು ಪತ್ರ ತಂದು ಅದರಲ್ಲಿ ಮನಸ್ಸಿನ ಮಾತು ಬರೆದು ಪೋಸ್ಟ್ ಬಾಕ್ಸ್ಗೆ ಹಾಕಿ, ಅದು ತಲುಪಿದೆಯೋ ಇಲ್ಲವೋ ಎಂದು ಚಡಪಡಿಸಿ, ಆ ಪತ್ರಕ್ಕೆ ಉತ್ತರ ಯಾವಾಗ ಬರುತ್ತದೆಯೋ ಎಂದು ಕಾಯುವ ಒಂದು ಸುಂದರ ಕ್ಷಣ ಮಾತ್ರ ಅದನ್ನು ಅನುಭವಿಸಿದವರಿಗೇ ಗೊತ್ತು.
ಅಷ್ಟಕ್ಕೂ ಪತ್ರ ಬರೆಯುವುದು (Letter writing) ಎಂದರೆ ಅದೊಂದು ಕಲೆಯೂ ಹೌದು. ಪತ್ರವು ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಸ್ಪಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ವ್ಯಕ್ತಪಡಿಸುವ ಮಾಧ್ಯವಾಗಿದೆ. ಆ ಕ್ಷಣವನ್ನು ಮತ್ತೆ ಅನುಭವಿಸಲು ವಾಹಿನಿ ಅನುವು ಮಾಡಿಕೊಂಡಿದೆ. ಪತ್ರಗಳು ನಮ್ಮ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಾವು ಯಾರೊಂದಿಗಾದರೂ ಪತ್ರಗಳ ಮೂಲಕ ಸಂವಹನ ನಡೆಸಿದಾಗ, ಅದು ಆ ವ್ಯಕ್ತಿಯೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸಲಾಗುತ್ತದೆ. ಮಾತ್ರವಲ್ಲದೇ ಪತ್ರ ಬರೆಯುವುದು ನಮ್ಮ ಕೈಬರಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಪತ್ರ ಬರೆಯುವುದು ನಮ್ಮ ಸೃಜನಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಆದ್ದರಿಂದ ಪತ್ರ ಬರೆಯುವ ಕಲೆಯನ್ನು ಜೀವಂತವಾಗಿ ಇರಿಸಲು ಕೆಲವು ಕಡೆಗಳಲ್ಲಿ ಮಕ್ಕಳಿಂದ ಪತ್ರ ಬರೆಸುವ ಕಾರ್ಯಾಗಾರವೂ ನಡೆಯುತ್ತಿದೆ. ಮಕ್ಕಳಿಗಷ್ಟೇ ಅಲ್ಲದೇ, ನಾವು ಮರೆತೇ ಹೋಗಿರುವ ಆ ಒಂದು ಸುಂದರ ಕ್ಷಣವನ್ನು ಮತ್ತೆ ತರಲು ಮುಂದಾಗಿದೆ ಜೀ ಕನ್ನಡ ವಾಹಿನಿಯಲ್ಲಿ (Zee Kannada) ಆರಂಭ ಆಗ್ತಿರೋ ನಾವು ನಮ್ಮವರು ಸೀರಿಯಲ್. ಈ ಸೀರಿಯಲ್ನಲ್ಲಿ ತಾರಾ, ಶರಣ್ ಮತ್ತು ಅಮೂಲ್ಯ ನಟಿಸಿದ್ದಾರೆ. ಇವತ್ತಿನಿಂದ ಈ ಸೀರಿಯಲ್ ಆರಂಭವಾಗುತ್ತಿದೆ. ಇದೀಗ ನಟಿ ಅಮೂಲ್ಯ ಅವರು ತಮ್ಮನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದ ನಿರ್ದೇಶಕ ಎಸ್.ನಾರಾಯಣ ಅವರಿಗೆ ಪತ್ರ ಬರೆಯುವ ಮೂಲಕ ಈ ಒಂದು ಆಫರ್ ಅನ್ನು ವೀಕ್ಷಕರಿಗೆ ತೆರೆದಿಟ್ಟಿದ್ದಾರೆ.
ಪತ್ರ ಬರೆಯುವ ಮಹತ್ವ ಹೇಳಿದ ನಟಿ, ನೀವು ತುಂಬಾ ಇಷ್ಟಪಡುವವರಿಗೆ ಲೆಟರ್ ಬರೆಯಿರಿ ಎನ್ನುವ ಆಫರ್ ಕೊಟ್ಟಿದ್ದಾರೆ. ಪತ್ರ ಎಂದಾಕ್ಷಣ ನನಗೆ ಮೊದಲಿಗೆ ನನಗೆ ನೆನಪಾಗಿದ್ದು ಇಂಡಸ್ಟ್ರಿಗೆ ಹೆಸರು ಕೊಟ್ಟ ಎಸ್.ನಾರಾಯಣ ಸರ್ ಎನ್ನುತ್ತಾ ನಟಿ, ಪತ್ರ ಬರೆದಿದ್ದಾರೆ. ಅದರಲ್ಲಿ ಅವರು, 'ನಿಮ್ಮ ಆಶೀರ್ವಾದ ನನಗೆ ತುಂಬಾ ಮುಖ್ಯ. ನಿಮ್ಮ ಆಶೀರ್ವಾದ ತೆಗೆದುಕೊಳ್ಳಲು ನಾನು ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ಬಿಸಿಬೇಳೆ ಬಾತ್ ಮತ್ತು ಮೊಟ್ಟೆ ಪುಲಾವ್ ನೆನಪಾಗ್ತಿದೆ. ನನಗೆ ಅದು ಬೇಕು. ನಿಮ್ಮ ಪ್ರೀತಿಯ ಕೂಸು' ಎಂದು ಬರೆದಿದ್ದಾರೆ. ಕೊನೆಗೆ ವೀಕ್ಷಕರಿಗೆ ಆಫರ್ ಕೊಟ್ಟಿದ್ದು, ಹಾಗೆ ನಿಮ್ಮ ಪ್ರೀತಿ ಪಾತ್ರರಿಗೆ ಕಾಗದ ಬರೆದು @zeekannada ಟ್ಯಾಗ್ ಮಾಡಿ ಎಂದಿದ್ದಾರೆ. ಇನ್ನೇಕೆ ತಡ ಪೆನ್ನು ಪತ್ರ ಹಿಡಿದು ಪತ್ರ ಬರೆದು ಟ್ಯಾಗ್ ಮಾಡಿ...
