ಬೆಂಗಳೂರು (ಸೆ.16): ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಿವಂಗತ ನಟ ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣಕ್ಕೆ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆನ್‌ಲೈನ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಗೃಹ ಕಚೇರಿ ಕೃಷ್ಣಾದಿಂದ ಆನ್‌ಲೈನ್‌ ಮೂಲಕ ಮೈಸೂರು ತಾಲೂಕು ಹಾಲಾಳು ಗ್ರಾಮದಲ್ಲಿ ನಡೆದ ವಿಷ್ಣು ಸ್ಮಾರಕ ಭವನ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉಪಸ್ಥಿತರಿದ್ದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಸ್ಮಾರಕ ನಿರ್ಮಾಣದ ಸ್ಥಳದಲ್ಲಿದ್ದ ಶಾಸಕರಾದ ರಾಮದಾಸ್‌, ಜಿ.ಟಿ.ದೇವೇಗೌಡ, ವಿಷ್ಣುವರ್ಧನ್‌ ಅವರ ಪತ್ನಿ ಡಾ.ಭಾರತಿ ವಿಷ್ಣುವರ್ಧನ್‌, ಅಳಿಯ ಅನಿರುದ್ಧ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಪಾಲ್ಗೊಂಡಿದ್ದರು

ಶಂಕು ನೆರವೇರಿಸಿ ಮಾತನಾಡಿದ ಯಡಿಯೂರಪ್ಪ ಅವರು, ‘ವಿಷ್ಣುವರ್ಧನ್‌ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಡಾ.ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಈಗಾಗಲೇ ತಡವಾಗಿದ್ದು ಕಾಮಗಾರಿಗಳನ್ನು ಆದಷ್ಟುಬೇಗನೆ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

11 ಕೋಟಿ ರು. ಮಂಜೂರು:  ಮೈಸೂರು ತಾಲೂಕಿನ ಎಚ್‌.ಡಿ.ಕೋಟೆ ರಸ್ತೆಯ ಮಾರ್ಗದಲ್ಲಿ ಬರುವ ಹಾಲಾಳು ಗ್ರಾಮದ ಐದು ಎಕರೆ ಪ್ರದೇಶದಲ್ಲಿ ಪೊಲೀಸ್‌ ವಸತಿಗೃಹ ನಿರ್ಮಾಣ ಸಂಸ್ಥೆಯ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಆಯವ್ಯಯದಲ್ಲಿ 11 ಕೋಟಿ ರು.ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಲು 5 ಕೋಟಿ ರು.ಅನುದಾನ ಬಿಡುಗಡೆ ಮಾಡಲಾಗಿದೆ. ಡಾ.ವಿಷ್ಣುವರ್ಧನ್‌ ಸ್ಮಾರಕವು ಸುಸಜ್ಜಿತವಾಗಿ ನಿರ್ಮಾಣಗೊಳ್ಳಲು ಎಲ್ಲ ರೀತಿಯ ಕ್ರಮಕೈಗೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗಲಿದೆ: ಭಾರತಿ ..

‘ಡಾ.ವಿಷ್ಣುವರ್ಧನ್‌ ಅವರು ‘ನಾಗರಹಾವು’ ಸಿನಿಮಾದಿಂದ ಆಪ್ತರಕ್ಷಕ ಸಿನಿಮಾವರೆಗೆ ಸತತ 38 ವರ್ಷಗಳ ಕಾಲ ನೂರಾರು ಸದಭಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ಜನರ ಮನಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಸಿನಿಮಾರಂಗದ ಜತೆಗೆ ವಿಶೇಷವಾದ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು ಸಮಾಜದ ಆಗು-ಹೋಗುಗಳ ಬಗ್ಗೆ ಸ್ಪಂದಿಸುವ ಮತ್ತು ಮಾನವೀಯತೆಯನ್ನು ತೋರುವ ವಿಶೇಷ ಗುಣ ಅವರಲ್ಲಿತ್ತು. ವಿಷ್ಣುವರ್ಧನ್‌ ಅವರ ಪತ್ನಿ ಪದ್ಮಶ್ರೀ ಪುರಸ್ಕೃತ ಡಾ.ಭಾರತಿ ವಿಷ್ಣುವರ್ಧನ್‌ ಅವರು ಪಂಚಭಾಷಾ ತಾರೆಯಾಗಿ ಅತ್ಯುತ್ತಮ ಕಲಾವಿದೆಯಾಗಿ ನಮ್ಮ ನಡುವೆ ಇರುವುದು ಸಂತೋಪದ ಸಂಗತಿ. ಡಾ.ವಿಷ್ಣುವರ್ಧನ್‌ ಅವರ ಕೀರ್ತಿ ಜನಮಾನಸದಲ್ಲಿ ಎಂದೆಂದಿಗೂ ಅಜರಾಮರವಾಗಿರಲಿ. ಇವರ ನಟನಾ ಕೌಶಲ್ಯ, ಅವರ ಸಾಧನೆಯ ಹಾದಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ’ ಎಂದು ಹೇಳಿದರು.

6 ಅಡಿ ಎತ್ತರದ ವಿಷ್ಣು ಪುತ್ಥಳಿ:

ಮೈಸೂರಿನ ಹಾಲಾಳು ಗ್ರಾಮ ವಿಷ್ಣು ಸ್ಮಾರಕ ನಿರ್ಮಾಣ ಸ್ಥಳದಲ್ಲಿದ್ದ ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ವಿಷ್ಣುವರ್ಧನ್‌ ಹುಟ್ಟೂರಿನಲ್ಲೇ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಿಗಳ ಕೂಗಿಗೆ ಪ್ರತಿಫಲ ಸಿಕ್ಕಂತಾಗಿದೆ. ವಿಷ್ಣು ಅವರ ವಿದ್ಯಾಭ್ಯಾಸ ಸಹ ಮೈಸೂರಿನಲ್ಲೇ ಆಗಿದ್ದು, ಅವರಿಗೂ ಹಾಗೂ ಮೈಸೂರಿಗೂ ಅವಿನಾಭಾವ ನಂಟಿದೆ. ಒಟ್ಟು 11 ಕೋಟಿ ರು.ವೆಚ್ಚದ ಯೋಜನೆ ಇದಾಗಿದ್ದು, 5.5 ಎಕರೆ ಜಾಗದಲ್ಲಿ ಎರಡು ಎಕರೆಯಲ್ಲಿ ವಿಷ್ಣುವರ್ಧನ್‌ ಅವರ ಸ್ಮಾರಕ ತಲೆ ಎತ್ತಲಿದೆ. ಜತೆಗೆ ಆರು ಅಡಿ ಎತ್ತರದ ವಿಷ್ಣು ವರ್ಧನ್‌ ಅವರ ಪುತ್ಥಳಿಯೂ ತಲೆ ಎತ್ತುತ್ತಿರುವುದು ಸಂತಸದ ವಿಚಾರವಾಗಿದೆ. ಪುಣೆ ಫಿಲ್ಮ್‌ ಆ್ಯಂಡ್‌ ಟೆಲಿವಿಷನ್‌ ಇನ್ಸಿಟಿಟ್ಯೂಟ್‌ ಆಫ್‌ ಇಂಡಿಯಾದ ಶಾಖೆ ಸಹ ಇಲ್ಲಿ ಆರಂಭವಾಗಲಿದೆ. ಜತೆಗೆ ಇಲ್ಲಿ ಮ್ಯೂಸಿಯಂ ಕೂಡ ನಿರ್ಮಾಣವಾಗಲಿರುವುದರಿಂದ ವಿಷ್ಣು ಅವರ ನೆನಪುಗಳು ಚಿತ್ರ ರಸಿಕರ ಕಣ್ಮನ ಸೆಳೆಯಲಿವೆ ಎಂದು ಹೇಳಿದರು.