KGF ಅಬ್ಬರಕ್ಕೆ ವಿಜಯ್ ಅಭಿನಯದ ಬೀಸ್ಟ್ ಮೂವಿ ಧೂಳಿಪಟ, ಒಂದೇ ದಿನಕ್ಕೆ ಎತ್ತಂಗಡಿ!
* ಕೆಜಿಎಫ್ ಆರ್ಭಟದ ಮುಂದೆ ಉಡೀಸ್ ಆದ ಬೀಸ್ಟ್
* ಒಂದೇ ದಿನಕ್ಕೆ ಎತ್ತಂಗಡಿಯಾದ ಬೀಸ್ಟ್
* ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ಬೀಸ್ಟ್
ಬೆಂಗಳೂರು(ಏ.14): ನಿರೀಕ್ಷೆಯಂತೆ ದೇಶಾದ್ಯಂತ ನಟ ಯಶ್ ಅಭಿನಯದ ಕೆಜಿಎಫ್ 2 ಧೂಳೆಬ್ಬಿಸುತ್ತಿದೆ. ಕೆಜಿಎಸ್ ಆರ್ಭಟಕ್ಕೆ ಬೀಸ್ಟ್ ಮೂವಿ ಧೂಳಿಪಟವಾಗಿದ್ದು, ಒಂದೇ ದಿನಕ್ಕೆ ಎತ್ತಂಗಡಿಯಾಗಿದೆ.
ಹೌದು ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಕೂಡಾ ಕೆಜಿಎಫ್‌ಗೆ ಟಕ್ಕರ್ ನೀಡಲು ಮುಂದಾಗಿತ್ತು. ಆದರೀಗ ಈ ಸ್ಪರ್ಧೆಯಲ್ಲಿ ಬೀಸ್ಟ್ ಮುಗ್ಗರಿಸಿದ್ದು, ಕೆಜಿಎಫ್ ನಾಗಾಲೋಟ ಮುಂದುವರೆಸಿದೆ. ಈ ಮೂಲಕ ಇದೇ ಮೊಟ್ಟಮೊದಲ ಬಾರಿಗೆ ಒಂದೇ ದಿನದಲ್ಲಿ ಎತ್ತಂಗಡಿಯಾದ ಸಿನೆಮಾ ಬೀಸ್ಟ್ ಆಗಿದೆ.
ಕೆಜಿಎಫ್ ಜೊತೆಗೇ ರಿಲೀಸ್ ಆದ ಬೀಸ್ಟ್ ಐದು ಶೋ ಪೂರ್ತಿಯಾಗಿಲ್ಲ. ಇದಕ್ಕೂ ಮೊದಲೇ ನಗರದ ಹಲವಾರು ಥಿಯೇಟರ್‌ಗಳಲ್ಲಿ ಈ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ. ಬೆರಳೆಣಿಕೆಯ ಥಿಯೇಟರ್ ಬಿಟ್ಟರೆ ಎಲ್ಲಾ ಥೀಯೇಟರ್‌ಗಳಲ್ಲೂ ಕೆಜಿಎಫ್ ಸಿನೆಮಾ ಅಬ್ಬರವೇ ಕಂಡು ಬಂದಿದೆ. ಕೆಜಿಎಫ್ ವೀಕ್ಷಿಸಲು ಥಿಯೇಟರ್‌ನತ್ತ ಸಾಗರದಂತೆ ಅಭಿಮಾನಿಗಳು ಹರಿದು ಬರುತ್ತಿದ್ದಾರೆ.
ಇನ್ನು ಪ್ರೀಮಿಯರ್ ಶೋ ನಲ್ಲೆ ಥಿಯೇಟರ್ ಹೌಸ್ ಫುಲ್ ಆಗಿದ್ದು, ಶ್ರೀನಿವಾಸ ಥಿಯೇಟರ್ ನಲ್ಲಿ ರಾತ್ರಿ ಒಂದು ಗಂಟೆಯಿಂದ ನಿರಂತರ ಶೋ ಆರಂಭವಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆಗೆ ಸೆಲೆಬ್ರೆಷನ್ ಶೋ ನಡೆದಿದೆ. ಇನ್ನು ಅಭೀಮಾನಿಗಳು ಥಿಯೇಟರ್ ಎದುರೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಮೊದಲ ದಿನ 200 ಕೋಟಿ ಗಳಿಕೆ ನಿರೀಕ್ಷೆ:
ಮೊದಲ ದಿನವೇ ‘ಕೆಜಿಎಫ್ 2’ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದಾಖಲೆ ಮಾಡುವ ಸಾಧ್ಯತೆ ಇದ್ದು, ವಿಶ್ವಾದ್ಯಂತ ಅಂದಾಜು 150 ರಿಂದ 200 ಕೋಟಿ ರು. ಕಲೆಕ್ಷನ್ ಆಗಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಕರ್ನಾಟಕದಲ್ಲೇ 550 ಸ್ಕ್ರೀನ್‌ಗಳಲ್ಲಿ ‘ಕೆಜಿಎಫ್ 2’ ಬಿಡುಗಡೆ ಆಗಲಿದ್ದು, ಮೊದಲ ದಿನವೇ ಒಟ್ಟು 5 ಸಾವಿರ ಶೋಗಳು ಪ್ರದರ್ಶನ ಕಾಣಲಿವೆ. ಹೀಗಾಗಿ ರಾಜ್ಯದಲ್ಲೇ 25 ಕೋಟಿ ರು. ಕಲೆಕ್ಷನ್ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಬೆಳಗ್ಗೆ 4 ಗಂಟೆಗೆ ಮೊದಲ ಶೋ:
ರಾತ್ರಿ 12 ಗಂಟೆಯ ಹೊರತಾಗಿ ರಾಜ್ಯದಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನ ಗುರುವಾರ ಬೆಳಗ್ಗೆ 4 ಹಾಗೂ 6 ಗಂಟೆಗೆ ಆರಂಭವಾಗುತ್ತಿದೆ. ಹೀಗಾಗಿ ಕೋವಿಡ್ ನಂತರ ದೊಡ್ಡ ಮಟ್ಟದ ಕ್ರೇಜ್‌ನಲ್ಲಿ ತೆರೆಗೆ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರಗಳ ಪೈಕಿ ಕನ್ನಡದ ಸಿನಿಮಾ ಇದಾಗಿದೆ. ಅಲ್ಲದೆ ಭಾರತದ ಅತಿ ದೊಡ್ಡ ಬಿಡುಗಡೆಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ಕೆಜಿಎಫ್ 2’ ಪಾತ್ರವಾಗಿದ್ದು, ಶೋಗಳ ಸಂಖ್ಯೆ, ಗಳಿಕೆಯ ವಿಚಾರದಲ್ಲಿ ಈ ಹಿಂದೆ ಬಂದ ಪ್ಯಾನ್ ಇಂಡಿಯಾ ಸಿನಿಮಾಗಳ ಎಲ್ಲ ದಾಖಲೆಗಳನ್ನು ಹಿಂದಿಕ್ಕಿದೆ.
ಮುಗಿಲು ಮುಟ್ಟಿದ ಸಂಭ್ರಮ:
ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಡೊಳ್ಳು ಕುಣಿತ, ಹೂವಿನ ಹಾರಗಳ ಅಲಂಕಾರದಿಂದ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ಗಳಲ್ಲಿ ಯಶ್ ಕಟೌಟ್, ಪೋಸ್ಟರ್‌ಗಳು ಗಮನಸೆಳೆಯುತ್ತಿವೆ. ಊರ್ವಶಿ ಥಿಯೇಟರ್ ಮುಂಭಾಗ ರಾಕಿ ಭಾಯ್ ಬೃಹತ್ ಕಟೌಟ್ ಇದೆ. ತ್ರಿವೇಣಿ, ನವರಂಗ್, ವೀರೇಶ್ ಸೇರಿದಂತೆ ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್ ಮುಂಭಾಗ ಯಶ್ ಕಟೌಟ್ ಹಾಗೂ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ.
ಮುಂಬೈನಲ್ಲಿ ಯಶ್ 100 ಅಡಿ ಕಟೌಟ್
‘ಲಾರ್ಜರ್ ದೆನ್ ಲೈಫ್’ ಎನ್ನುವ ಪರಿಕಲ್ಪನೆಯಲ್ಲಿ ಯಶ್ ಅವರ 100 ಅಡಿಗಳ ಕಟೌಟನ್ನು ಮುಂಬೈನ ಥಿಯೇಟರ್‌ಗಳ ಎದುರು ಹಾಕಲಾಗಿದೆ. ಕಾರ್ನಿವಾಲ್ ಸಿನಿಮಾಸ್ ಥಿಯೇಟರ್‌ನಲ್ಲಿ ಇದೇ ಮೊದಲ ಬಾರಿ ಕನ್ನಡದ ನಟರೊಬ್ಬರ ಇಷ್ಟುಎತ್ತರದ ಕಟೌಟ್ ನಿಲ್ಲಿಸಲಾಗಿದೆ.
ನಿನ್ನೆ ರಾತ್ರಿಯೇ ಕೆಲವೆಡೆ ಶೋ!
ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್ ಸೇರಿದಂತೆ ರಾಜ್ಯದ ಹಲವು ಥಿಯೇಟರ್‌ನಲ್ಲಿ ಕೆಜಿಎಫ್-2 ಸಿನಿಮಾ ಬುಧವಾರ ರಾತ್ರಿ 12 ಗಂಟೆಗೇ ಮೊದಲ ಪ್ರದರ್ಶನ ಕಂಡಿದೆ. ಗುರುವಾರ ಬೆಳಿಗ್ಗೆ 4 ಹಾಗೂ 6 ಗಂಟೆಗೂ ಅನೇಕ ಥಿಯೇಟರ್‌ಗಳಲ್ಲಿ ಮೊದಲ ಪ್ರದರ್ಶನ ನಿಗದಿಯಾಗಿದೆ. ಕೋವಿಡ್ ನಂತರ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಯಶ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಕೆಜಿಎಫ್ 2 ಚಿತ್ರದ ವಿಶ್ವದ ಲೆಕ್ಕ
ಬಿಡುಗಡೆಯಾಗಲಿರುವ ಸ್ಕ್ರೀನ್‌ಗಳು : 12000
ಮೊದಲ ದಿನದ ಶೋಗಳ ಸಂಖ್ಯೆ: 16 ರಿಂದ 18 ಸಾವಿರ
ಮೊದಲ ದಿನದ ಕಲೆಕ್ಷನ್ ಅಂದಾಜು: 150 ರಿಂದ 200 ಕೋಟಿ
ಕರ್ನಾಟಕದಲ್ಲಿ ಕೆಜಿಎಫ್ 2 ಲೆಕ್ಕ
ಸ್ಕ್ರೀನ್‌ಗಳು: 550
ಮೊದಲ ದಿನದ ಶೋಗಳು: 5,000
ಮೊದಲ ಶೋ ಆರಂಭ: ರಾತ್ರಿ 12 ಗಂಟೆಗೆ
ಮೊದಲ ದಿನದ ಕಲೆಕ್ಷನ್: 25 ಕೋಟಿ
ರಾಜ್ಯವಾರು ಸ್ಕ್ರೀನ್‌ಗಳ ಸಂಖ್ಯೆ
ಕರ್ನಾಟಕ: 550
ಆಂಧ್ರ ಹಾಗೂ ತೆಲಂಗಾಣ: 1,000
ಕೇರಳ: 500
ತಮಿಳುನಾಡು: 350
ಉತ್ತರ ಭಾರತ: 450
ಹೊರ ದೇಶಗಳಲ್ಲಿ: 3,500