ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಅವರನ್ನು ತಾವು ಮದುವೆಯಾಗಿದ್ದು ಏಕೆ ಎಂಬ ಸೀಕ್ರೆಟ್ ಸಂಗತಿಯನ್ನು ಕೊನೆಗೂ ನಟ ವಿಜಯ್ ದೇವರಕೊಂಡ ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ‘ಅದೊಂದೇ ಕಾರಣ’ ಎಂಬ ವಿಜಯ್ ಮಾತು ಏನು? ಇಲ್ಲಿದೆ ನೋಡಿ ಗುಟ್ಟು!

Vijay Deverakonda-Rashmika Mandanna Love and Marriage story secret to know here finally- ಟಾಲಿವುಡ್‌ನ ಹಾಟ್‌ಫೇವರಿಟ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಪ್ರೇಮಕಥೆ ಬಗ್ಗೆ ವರ್ಷಗಳಿಂದಲೂ ಸಾಕಷ್ಟು ಕುತೂಹಲವಿತ್ತು. ತೆರೆ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಕಂಡ ಅಭಿಮಾನಿಗಳು, ನಿಜ ಜೀವನದಲ್ಲೂ ಈ ಜೋಡಿ ಒಂದಾಗಲಿ ಎಂದು ಕಾಯುತ್ತಿದ್ದರು. ಹಲವು ವರ್ಷಗಳ ಕಾಲ ಡೇಟಿಂಗ್ ವಿಚಾರದಲ್ಲಿ ಸಸ್ಪೆನ್ಸ್ ಕಾಯ್ದುಕೊಂಡಿದ್ದ ವಿಜಯ್ ಮತ್ತು ರಶ್ಮಿಕಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ತಮ್ಮ ಎಂಟು ವರ್ಷಗಳ ಸಂಬಂಧದ ಬಗ್ಗೆ ವಿಜಯ್ ದೇವರಕೊಂಡ ನೀಡಿರುವ ಹೇಳಿಕೆಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

'ಗೀತ ಗೋವಿಂದಂ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ

2018ರಲ್ಲಿ ತೆರೆಗೆ ಬಂದ 'ಗೀತ ಗೋವಿಂದಂ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಸಹನಟರಾದರು. ಬಳಿಕ, 2019ರಲ್ಲಿ ತೆರೆಕಂಡ ‘ಡಿಯರ್ ಕಾಮ್ರೇಡ್’ ಸಿನಿಮಾದ ಮೂಲಕ ವಿಜಯ್-ರಶ್ಮಿಕಾ ಜೋಡಿ ಮತ್ತಷ್ಟು ಜನಪ್ರಿಯವಾಗಿತ್ತು. ಆದರೆ ಇವರಿಬ್ಬರ ಪರಿಚಯ ಅದಕ್ಕೂ ಮುನ್ನವೇ ಆಗಿತ್ತು. ಸಹನಟರಾಗಿ ಪರಿಚಯವಾಗಿದ್ದ ಇಬ್ಬರ ನಡುವೆ ಮೊದಲು ಸ್ನೇಹ ಬೆಳೆದಿದ್ದು, ನಂತರ ಅದೇ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತ್ತು ಎನ್ನುವುದು ವಿಜಯ್ ಮಾತುಗಳಿಂದ ತಿಳಿದುಬಂದಿದೆ.

ನ್ಯೂಸ್ ಬುಕ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ತಮ್ಮ ಸಂಬಂಧದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಕ್ಕೆ ತಾವು ಎಂದಿಗೂ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಗತ್ತಿನಿಂದ ತಮ್ಮ ಸಂಬಂಧವನ್ನು ಮುಚ್ಚಿಡಲು ಯಾವುದೇ ಕಣ್ಣಾಮುಚ್ಚಾಲೆ ಆಡುತ್ತಿರಲಿಲ್ಲ, ಆದರೆ ವೈಯಕ್ತಿಕ ವಿಚಾರವನ್ನು ಎಲ್ಲರ ಮುಂದೆ ಚರ್ಚಿಸುವ ಅಗತ್ಯವಿಲ್ಲ ಎಂಬುದು ತಮ್ಮ ನಿಲುವಾಗಿತ್ತು ಎಂದು ಹೇಳಿದ್ದಾರೆ.

ಇನ್ನು ರಶ್ಮಿಕಾಳನ್ನೇ ಮದುವೆಯಾಗಬೇಕು ಎಂಬ ನಿರ್ಧಾರ ಯಾವಾಗ ಬಂತು ಎಂಬುದನ್ನೂ ವಿಜಯ್ ವಿವರಿಸಿದ್ದಾರೆ. ಜೀವನದ ಸಣ್ಣ ಸಣ್ಣ ಸಂದರ್ಭಗಳಲ್ಲಿ ರಶ್ಮಿಕಾಳ ಅನುಪಸ್ಥಿತಿ ತಮ್ಮ ಗಮನಕ್ಕೆ ಬರಲು ಆರಂಭಿಸಿದಾಗ, ಆಕೆ ತಮ್ಮ ಜೀವನದಲ್ಲಿ ಎಷ್ಟು ಮಹತ್ವದ ವ್ಯಕ್ತಿಯಾಗಿದ್ದಾರೆ ಎಂಬ ಅರಿವು ಮೂಡಿತಂತೆ.

ಒಂದೇ ಫಿಟ್ನೆಸ್ ಟ್ರೈನರ್ ಬಳಿ ವರ್ಕೌಟ್

ಇಬ್ಬರೂ ಒಂದೇ ಫಿಟ್ನೆಸ್ ಟ್ರೈನರ್ ಬಳಿ ವರ್ಕೌಟ್ ಮಾಡುತ್ತಿದ್ದರು. ಒಟ್ಟಿಗೆ ಸಮಯ ಕಳೆಯುವುದು, ಊಟ ಮಾಡುವುದು ಸೇರಿದಂತೆ ಹಲವು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕೆಲವೊಮ್ಮೆ ತಾವು ಒಬ್ಬರೇ ಊಟ ಮಾಡುವಾಗ, ‘ರಶ್ಮಿಕಾ ನನ್ನ ಜೊತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು’ ಎಂಬ ಭಾವನೆ ಮೂಡುತ್ತಿತ್ತು ಎಂದು ವಿಜಯ್ ಹೇಳಿದ್ದಾರೆ. ಇದೇ ರೀತಿಯ ಸಣ್ಣ ಸಣ್ಣ ಕ್ಷಣಗಳು ಅವರ ಮನಸ್ಸಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದ್ದವು.

ಕಳೆದ ಒಂದು ವರ್ಷದಲ್ಲಿ ರಶ್ಮಿಕಾ ತಮ್ಮ ಜೀವನದಲ್ಲಿ ಎಷ್ಟು ವಿಶೇಷ ವ್ಯಕ್ತಿ ಎಂಬುದು ಮತ್ತಷ್ಟು ಸ್ಪಷ್ಟವಾಯಿತು. ಆ ಅರಿವು ಬಂದ ಕ್ಷಣದಲ್ಲೇ ಆಕೆಯನ್ನು ಮದುವೆಯಾಗುವ ನಿರ್ಧಾರ ಕೈಗೊಂಡೆ ಎಂದು ವಿಜಯ್ ಹೇಳಿರುವುದು ಅಭಿಮಾನಿಗಳಲ್ಲಿ ವಿಶೇಷ ಗಮನ ಸೆಳೆದಿದೆ.

ರಶ್ಮಿಕಾ ತಮ್ಮ ಜೀವನಕ್ಕೆ ಬಂದ ನಂತರ ಜಗತ್ತೇ ಇನ್ನಷ್ಟು ಸುಂದರವಾಗಿ ಕಾಣಲು ಆರಂಭಿಸಿತು ಎಂಬ ವಿಜಯ್ ಮಾತುಗಳು ಅವರ ಪ್ರೀತಿಯ ಆಳವನ್ನು ತೋರಿಸುತ್ತವೆ. ಹಲವು ವರ್ಷಗಳ ವದಂತಿ, ಕುತೂಹಲ ಮತ್ತು ಸಸ್ಪೆನ್ಸ್ ಬಳಿಕ ಈ ಜೋಡಿ ಈಗ ನಿಜ ಜೀವನದಲ್ಲೂ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.

ಇದೀಗ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಮದುವೆಯ ಬಳಿಕ ವಿಜಯ್ ಹಾಗೂ ರಶ್ಮಿಕಾ ಮತ್ತೊಮ್ಮೆ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ‘ರಣಬಾಲಿ’ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸುತ್ತಿದ್ದು, ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೀಗಾಗಿ ನಿಜ ಜೀವನದ ಜೋಡಿ ತೆರೆ ಮೇಲೂ ಮತ್ತೆ ಮೋಡಿ ಮಾಡಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಹುಟ್ಟಿಸಿದೆ.