ಹಿರಿಯ ನಟ ಉಮೇಶ್ ಅವರ ನಿಧನಕ್ಕೆ ನಟಿ ಗಿರಿಜಾ ಲೋಕೇಶ್ ಸಂತಾಪ ಸೂಚಿಸಿದ್ದು, ಅವರ ಕಷ್ಟದ ಜೀವನವನ್ನು ಸ್ಮರಿಸಿದ್ದಾರೆ. ಜೀವನದುದ್ದಕ್ಕೂ ಆರ್ಥಿಕ ಸಂಕಷ್ಟದಲ್ಲಿದ್ದ ಉಮೇಶ್, ಕೊನೆಯ ದಿನಗಳಲ್ಲಿ ಚಿತ್ರರಂಗದಿಂದ ನಿರ್ಲಕ್ಷಿಸಲ್ಪಟ್ಟಿದ್ದರು ಎಂದು ಅವರ ಒಡನಾಡಿಗಳು ನೋವು ಹಂಚಿಕೊಂಡಿದ್ದಾರೆ.
ಬೆಂಗಳೂರು (ನ.30): ಹಿರಿಯ ನಟ ಉಮೇಶಣ್ಣ ಅವರು ಹುಟ್ಟಿನಿಂದ ಸಾಯುವ ತನಕ ಶ್ರೀಮಂತಿಕೆಯನ್ನ ನೋಡೇ ಇಲ್ಲ. ಅವರ ಜೀವನ ಆಧಾರಿತ ಕ್ಯಾಸೆಟ್ ನನ್ನ ಬಳಿ ಇದೆ..ಅದನ್ನು ರಿಲೀಸ್ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದರು.
ನಟ ಉಮೇಶ್ ಅವರ ನಿಧನದ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆ ಬಂದಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಅವರನ್ನ ಉಮೇಶ್ ಅಣ್ಣ ಅಂತಾನೇ ಕರೀತಾಯಿದ್ದೆವು. ಅವರು ಹುಟ್ಟಿನಿಂದ ಸಾಯುವ ತನಕ ಶ್ರೀಮಂತಿಕೆಯನ್ನ ನೋಡೇ ಇಲ್ಲ. ಅವರ ಮಗನ ಕಳೆದುಕೊಂಡ ನೋವನ್ನ ಹೇಗೆ ತಡೆದುಕೊಂಡ್ರೋ..? ದೇವರೇ ಬಲ್ಲ. ನನ್ನನ್ನು ಯಾವಾಗಲೂ ಪ್ರೀತಿಯಿಂದ ಗಿರಿಮಾತೆ ಅನ್ನೋರು. ಅವರ ಜೀವನ ಆಧಾರಿತ ಕ್ಯಾಸೆಟ್ ನನ್ನ ಬಳಿ ಇದೆ..ಅದನ್ನು ರಿಲೀಸ್ ಮಾಡಬೇಕು ಅಂದುಕೊಂಡಿದ್ದೇನೆ. ಅವರ ಜೀವನ ತುಂಬಾ ಕಷ್ಟಕರವಾಗಿತ್ತು. ಆದ್ರೆ ಕೊನೇ ದಿನಗಳಲ್ಲಿ ಅವರ ಜೊತೆ ನಾನು ಸಮಯ ಕಳೆದಿದ್ದೇನೆ. ಅವರಿಗೆ ದೇವರು ಬೇಗ ಮುಕ್ತಿ ಕೊಡಲಿ ಅಂತ ನಾನು ಬೇಡಿಕೊಳ್ತೀನಿ. ಕಲಾವಿದರ ಸಂಘ ಹಾಗೂ ಸರ್ಕಾರ ನಮಗೆ ಸಹಕಾರ ಕೊಟ್ಟಿದೆ ಎಂದು ಹೇಳಿದರು.
ಕೊನೇ ಕ್ಷಣದಲ್ಲಿ ಬಹಳ ಕಷ್ಟ ಅನುಭವಿಸಿದರು:
ನಟ ಉಮೇಶ್ ಅವರ ಸ್ಥಳೀಯ ಒಡನಾಡಿ ಹಾಗೂ ಅಪ್ತೊರೊಬ್ಬರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಉಮೇಶಣ್ಣ ಒಬ್ಬ ಅದ್ಭುತ ಹಾಸ್ಯನಟ. ಅವರ ನಿಧನದಿಂದ ದುಃಖವಾಗಿ ನಾನು ನೋಡಲು ಬಂದೆ. ಗುಬ್ಬಿ ವೀರಣ್ಣ ಅವರ ಕಂಪನಿಯಿಂದ ಬಂದು ಕನ್ನಡ ಚಿತ್ರರಂಗದ ಅನೇಕ ಪ್ರಸಿದ್ಧ ನಟರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಎಲ್ಲರ ಜೊತೆಗೂ ನಟನೆ ಮಾಡಿದ್ದಾರೆ. ಅವರು ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. ಅವರು ಸಾಯುವಂತಹ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಕನ್ನಡ ಚಿತ್ರರಂಗವಾಗಲೀ ಅಥವಾ ದೊಡ್ಡ ಸ್ಟಾರ್ ನಟರಾಗಲೀ ಅವರಿಗೆ ಬಂದು ಹೇಗಿದ್ದೀರಿ ಎಂದು ವಿಚಾರಿಸುವ ಸೌಜನ್ಯವನ್ನೂ ತೋರಿಸಿಲ್ಲ.

ಉಮೇಶಣ್ಣ ಅವರು ನರಸಿಂಹರಾಜು ಹಾಗೂ ಮುಸುರಿ ಕೃಷ್ಣಮೂರ್ತಿ ಅವರ ಸ್ಥಾನವನ್ನು ತುಂಬುತ್ತಿದ್ದರು. ದ್ವಾರಕೀಶ್ ಅವರೊಂದಿಗೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾಗ ಅಲ್ಪಸ್ವಲ್ಪ ಹಣ ಬರುತ್ತದೆ ಜೀವನ ನಡೆಯುತ್ತದೆ. ಆದರೆ, ಅವರಿಗೆ ವಯಸ್ಸಾದಾಗ ಪಾತ್ರಗಳನ್ನು ಮಾಡಲು ಅವಕಾಶ ಸಿಗದೇ ತುಂಬಾ ಪರದಾಡಿದ್ದಾರೆ. ಕೊನೆ ಕೊನೆಗೆ ಅವರು ಧಾರಾವಾಹಿಗಳಲ್ಲಿ ಹೋಗಿ ನಟಿಸಿ ಜೀವನ ನಡೆಸಲು ಮುಂದಾಗಿದ್ದರು.
ಉಮೇಶಣ್ಣ ಕಷ್ಟದಲ್ಲಿದ್ದಾಗ ಯಾರೊಬ್ಬರೂ ಬರಲಿಲ್ಲ
ಕನ್ನಡ ಚಲನಚಿತ್ರ ಮಂಡಳಿ ಕೂಡ ಉಮೇಶಣ್ಣ ಅವರನ್ನು ಗುರುತಿಸಲಿಲ್ಲ. ಕೊನೇಗಾಲದಲ್ಲಿ ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಕೂಡ ಯಾರೂ ಗಮನಿಸಲಿಲ್ಲ. ಕೊನೇಗಾಲದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ ಎಂಬುದನ್ನು ಅವರ ಮನೆಯೊಳಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಇಡೀ ರಾಜ್ಯದ ಜನರನ್ನು ನಗಿಸಿದ ಉಮೇಶಣ್ಣ ಕಷ್ಟದಲ್ಲಿದ್ದಾಗ ಯಾರೊಬ್ಬರೂ ಬಂದು ನೋಡಲಿಲ್ಲ. ನಾನು ಅವರೊಂದಿಗೆ ಮಾತನಾಡಿದಾಗ ಈ ನೋವನ್ನು ಹಂಚಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿ ಅವರೊಂದಿಗೆ ಕುಳಿತು ಊಟಮಾಡಿದ್ದೇ ನಮಗೆ ಪುಣ್ಯ ಎಂದು ಹೇಳಿದರು.

