ಸೌರವ್ ಗಂಗೂಲಿ ಅವರ ಜೀವನ ಆಧಾರಿತ 'ದಾದಾ' ಸಿನಿಮಾದ ಚಿತ್ರೀಕರಣ ಕೋಲ್ಕತ್ತಾದಲ್ಲಿ ಭರದಿಂದ ಸಾಗುತ್ತಿದೆ. ರಾಜ್‌ಕುಮಾರ್ ರಾವ್ ಗಂಗೂಲಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವು ಗಂಗೂಲಿಯವರ ಕ್ರಿಕೆಟ್ ಪಯಣ ಮತ್ತು ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲಲಿದೆ.

ಕೋಲ್ಕತ್ತಾ (ಮೇ.28): ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರ ಜೀವನ ಆಧಾರಿತ ಸಿನಿಮಾ ಸೆಟ್ಟೇರಿದ್ದು, ಸದ್ಯ ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿ ಭರ್ಜರಿ ಶೂಟಿಂಗ್ ನಡೆಯುತ್ತಿದೆ. ‘ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ’ (Dada: The Sourav Ganguly Story) ಹೆಸರಿನ ಈ ಹೈ-ಪ್ರೊಫೈಲ್ ಬಯೋಪಿಕ್‌ನಲ್ಲಿ ಗಂಗೂಲಿ ಪಾತ್ರಕ್ಕೆ ಬಾಲಿವುಡ್‌ನ ರಾಷ್ಟ್ರಪ್ರಶಸ್ತಿ ವಿಜೇತ ನಟ ರಾಜ್‌ಕುಮಾರ್ ರಾವ್ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಚಿತ್ರದ ಮುಂಬೈ ಶೆಡ್ಯೂಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಚಿತ್ರತಂಡ ಕೋಲ್ಕತ್ತಾದಲ್ಲಿ 15 ದಿನಗಳ ಸುದೀರ್ಘ ಚಿತ್ರೀಕರಣಕ್ಕಾಗಿ ಬೀಡುಬಿಟ್ಟಿದೆ. ವಿಶೇಷವೆಂದರೆ, ತಮ್ಮ ನಿವಾಸ ಮತ್ತು ಈಡನ್ ಗಾರ್ಡನ್ಸ್‌ನಲ್ಲಿ ಚಿತ್ರೀಕರಣ ನಡೆಯುವಾಗ ಸೌರವ್ ಗಂಗೂಲಿ ಅವರೇ ಖುದ್ದಾಗಿ ಹಾಜರಿದ್ದು ಚಿತ್ರತಂಡಕ್ಕೆ ಸಲಹೆಗಳನ್ನು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟ ರಾಜ್‌ಕುಮಾರ್ ರಾವ್ ಈ ವಾರದ ಆರಂಭದಲ್ಲೇ ಕೋಲ್ಕತ್ತಾ ತಲುಪಿದ್ದು, ಮೈದಾನದಲ್ಲಿ ಕಠಿಣ ವರ್ಕೌಟ್ ಮುಗಿಸಿ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಗಂಗೂಲಿ ಅವರ ಹುಟ್ಟೂರಾದ ಬೆಹಾಲಾದ ಸಣ್ಣ ಗಲ್ಲಿಗಳಿಂದ ಹಿಡಿದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವವರೆಗಿನ ರೋಚಕ ಜರ್ನಿಯನ್ನು ಈ ಸಿನಿಮಾದಲ್ಲಿ ಸೆರೆಹಿಡಿಯಲಾಗುತ್ತಿದೆ.

ಇತ್ತೀಚೆಗೆ ಸೌರವ್ ಗಂಗೂಲಿ ಅವರ ಬೆಹಾಲಾದ ಸ್ವಗೃಹದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಕೋಲ್ಕತ್ತಾದ ಐತಿಹಾಸಿಕ ‘ಈಸ್ಟ್ ಬೆಂಗಾಲ್ ಕ್ಲಬ್’ ಮೈದಾನದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಗಂಗೂಲಿ ಅವರು ಆರಂಭಿಕ ದಿನಗಳಲ್ಲಿ ‘ಆರ್ಯನ್ ಕ್ಲಬ್’ ಪರ ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ಇಲ್ಲಿ ಲೈವ್ ಆಗಿ ಮರುಸೃಷ್ಟಿಸಲಾಗಿದೆ. ಇದರೊಂದಿಗೆ ಕೋಲ್ಕತ್ತಾದ ಹೆಮ್ಮೆಯ ‘ಈಡನ್ ಗಾರ್ಡನ್ಸ್’ ಕ್ರೀಡಾಂಗಣದಲ್ಲೂ ಪ್ರಮುಖ ದೃಶ್ಯಗಳ ಶೂಟಿಂಗ್ ನಡೆದಿದೆ.

ಪ್ರೇಮಕಥೆಯೂ ಅನಾವರಣ; ಚಿತ್ರದಲ್ಲಿದೆ ಭರ್ಜರಿ ತಾರಾಬಳಗ!

ಈ ಚಿತ್ರವನ್ನು ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ ಪಾತ್ರದಲ್ಲಿ ನಟಿ ತಾನ್ಯಾ ಮಾಣಿಕ್ತಲ ಕಾಣಿಸಿಕೊಳ್ಳಲಿದ್ದಾರೆ. ಗಂಗೂಲಿ ಅವರ ಕ್ರಿಕೆಟ್ ಬದುಕಿನ ಆಕ್ರಮಣಕಾರಿ ಆಟದ ಜೊತೆಗೆ ಅವರ ವೈಯಕ್ತಿಕ ಜೀವನದ ಸುಂದರ ಪ್ರೇಮಕಥೆಯೂ ಚಿತ್ರದಲ್ಲಿ ಅನಾವರಣಗೊಳ್ಳಲಿದೆ.

ಚಿತ್ರದಲ್ಲಿ ಬಂಗಾಳಿ ಸಂಸ್ಕೃತಿಯ ನೇಟಿವಿಟಿಯನ್ನು ಕಾಪಾಡಿಕೊಳ್ಳಲು ಬಂಗಾಳಿ ಚಿತ್ರರಂಗದ ಪ್ರಮುಖ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸೌರವ್ ಅವರ ತಾಯಿ ನಿರುಪಾ ಗಂಗೂಲಿ ಪಾತ್ರದಲ್ಲಿ ಅಪರಾಜಿತಾ ಆಧ್ಯಾ ಹಾಗೂ ತಂದೆ ಚಂಡಿ ಗಂಗೂಲಿ ಪಾತ್ರದಲ್ಲಿ ಹಿರಿಯ ನಟ ಶಾಶ್ವತ ಚಟರ್ಜಿ (ಕಹಾನಿ ಸಿನಿಮಾ ಖ್ಯಾತಿ) ನಟಿಸುತ್ತಿದ್ದಾರೆ. ಮಾಜಿ ಬಿಸಿಸಿಐ (BCCI) ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಅವರ ಲಾರ್ಜರ್ ದ್ಯಾನ್ ಲೈಫ್ ಬಯೋಪಿಕ್ ಸದ್ಯ ಕ್ರಿಕೆಟ್ ಪ್ರೇಮಿಗಳು ಹಾಗೂ ಸಿನಿಮಾ ರಂಗದಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ದಾದಾ ಲಾರ್ಡ್ಸ್ ಮೈದಾನದಲ್ಲಿ ಟೀ ಶರ್ಟ್ ಬಿಚ್ಚಿ ಬೀಸಿದ ಆ ಐತಿಹಾಸಿಕ ಕ್ಷಣ ಬೆಳ್ಳಿತೆರೆಯ ಮೇಲೆ ಹೇಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Scroll to load tweet…