'ಮಾಸ್ಟರ್‌ಚೆಫ್ ಇಂಡಿಯಾ' ಮೊದಲ ಸೀಸನ್ ವಿಜೇತೆ, ಖ್ಯಾತ ಚೆಫ್ ಪಂಕಜ್ ಭದೌರಿಯಾ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಆಸ್ಪತ್ರೆಯಿಂದಲೇ ಈ ಸುದ್ದಿಯನ್ನು ಹಂಚಿಕೊಂಡಿರುವ ಅವರು, ಈ ಕಠಿಣ ಸಮಯದಲ್ಲಿ ತಮ್ಮ ಅಭಿಮಾನಿಗಳ ಪ್ರಾರ್ಥನೆ ಮತ್ತು ಬೆಂಬಲವನ್ನು ಕೋರಿದ್ದಾರೆ.
ಮುಂಬೈ (ಮೇ.28): ‘ಮಾಸ್ಟರ್‌ಚೆಫ್ ಇಂಡಿಯಾ’ ರಿಯಾಲಿಟಿ ಶೋನ ಮೊದಲ ಸೀಸನ್ ವಿಜೇತೆಯಾಗಿ ದೇಶಾದ್ಯಂತ ಮನೆಮಾತಾಗಿದ್ದ ಖ್ಯಾತ ಸೆಲೆಬ್ರಿಟಿ ಚೆಫ್ ಪಂಕಜ್ ಭದೌರಿಯಾ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಕಹಿ ಸುದ್ದಿಯನ್ನು ಸ್ವತಃ ಪಂಕಜ್ ಅವರೇ ಇಂದು (ಮೇ 28) ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಬೆಡ್‌ನಿಂದಲೇ ಫೋಟೋ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವ ಅವರು, ಸದ್ಯ ತಮಗೆ ಅಭಿಮಾನಿಗಳ ಪ್ರಾರ್ಥನೆ ಮತ್ತು ಬೆಂಬಲದ ಅಗತ್ಯವಿದೆ ಎಂದು ಭಾವುಕರಾಗಿ ಕೇಳಿಕೊಂಡಿದ್ದಾರೆ.
ಆಸ್ಪತ್ರೆಯ ಉಡುಪನ್ನು ಧರಿಸಿ, ಕೈಗೆ ಕ್ಯಾನುಲಾ (Cannula) ಮತ್ತು ವೈರ್‌ಗಳನ್ನು ಅಳವಡಿಸಿಕೊಂಡಿರುವ ಸ್ಥಿತಿಯಲ್ಲಿರುವ ತಮ್ಮ ಫೋಟೋವನ್ನು ಪಂಕಜ್ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬರೆದುಕೊಂಡಿರುವ ಅವರು, "ನನಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಬೆಂಬಲ ನನಗೆ ಬೇಕಾಗಿದೆ" ಎಂದು ಕೈಮುಗಿಯುವ ಎಮೋಜಿ ಹಾಕಿ ವಿನಂತಿಸಿದ್ದಾರೆ.
ಸರಣಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದ ಬಳಿಕ ಆಸ್ಪತ್ರೆಯಿಂದಲೇ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಅವರು, "ಸರಣಿ ಪರೀಕ್ಷೆಗಳಿಗಾಗಿ ಹೋಗುತ್ತಿದ್ದೇನೆ... ಇದು ನಿಜಕ್ಕೂ ಸಂತೋಷ ಕೊಡುವ ಜಾಗವಲ್ಲ" ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಬಳಿಕ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಮತ್ತೊಂದು ಭಾವುಕ ವಿಡಿಯೋ ಸಂದೇಶ ನೀಡಿರುವ ಪಂಕಜ್, "ನನಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನೀವೆಲ್ಲರೂ ನನ್ನ ಕುಟುಂಬದ ಸದಸ್ಯರಂತಿದ್ದೀರಿ. ಅದಕ್ಕಾಗಿಯೇ ಈ ವಿಷಯವನ್ನು ನಾನೇ ವೈಯಕ್ತಿಕವಾಗಿ ನಿಮಗೆ ತಿಳಿಸುತ್ತಿದ್ದೇನೆ. ಈ ಕಠಿಣ ಸಮಯದಲ್ಲಿ ನನಗೆ ನಿಮ್ಮ ಪ್ರಾರ್ಥನೆಯ ಅಗತ್ಯವಿದೆ. ಪ್ರಾರ್ಥನೆಗಳು ಪವಾಡಗಳನ್ನು ಸೃಷ್ಟಿಸಬಲ್ಲವು ಎಂದು ಹೇಳುತ್ತಾರೆ. ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಶಿಕ್ಷಕ ವೃತ್ತಿ ಬಿಟ್ಟು ‘ಮಾಸ್ಟರ್‌ಚೆಫ್’ ಮುಕುಟ ಧರಿಸಿದ್ದ ಪಂಕಜ್
2010ರಲ್ಲಿ ಆರಂಭವಾದ ಭಾರತದ ಮೊದಲ ‘ಮಾಸ್ಟರ್‌ಚೆಫ್ ಇಂಡಿಯಾ’ ಸೀಸನ್ 1 ರಲ್ಲಿ ವಿಜೇತೆಯಾಗುವ ಮೂಲಕ ಪಂಕಜ್ ಭದೌರಿಯಾ ದೇಶಾದ್ಯಂತ ರಾತ್ರೋರಾತ್ರಿ ಪ್ರಖ್ಯಾತರಾಗಿದ್ದರು. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರು ಈ ಶೋನ ನಿರೂಪಕರಾಗಿದ್ದರು. ಭಾರತದ ಇತಿಹಾಸದಲ್ಲೇ ಅತ್ಯಂತ ಮೊದಲ ‘ಮಾಸ್ಟರ್‌ಚೆಫ್’ ಪಟ್ಟ ಗೆದ್ದ ಹೆಗ್ಗಳಿಕೆ ಪಂಕಜ್ ಅವರದ್ದಾಗಿದೆ. ವಿಶೇಷವೆಂದರೆ, ಪಂಕಜ್ ಅವರು ಮೂಲತಃ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಈ ಅಡುಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವುದಕ್ಕಾಗಿ ಅವರು ತಮ್ಮ 16 ವರ್ಷಗಳ ಸುದೀರ್ಘ ಶಿಕ್ಷಕಿ ವೃತ್ತಿಜೀವನವನ್ನೇ ತ್ಯಜಿಸಿದ್ದರು.
ಪ್ರಸ್ತುತ ಪಂಕಜ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅವರು ನಿರಂತರವಾಗಿ ಹೊಸ ರೆಸಿಪಿ ವಿಡಿಯೋಗಳು, ಕುಕಿಂಗ್ ಟಿಪ್ಸ್ ಮತ್ತು ಆಹಾರಕ್ಕೆ ಸಂಬಂಧಿಸಿದ ಆಕರ್ಷಕ ಕಂಟೆಂಟ್‌ಗಳನ್ನು ಹಂಚಿಕೊಳ್ಳುತ್ತಾ ಸದಾ ಸಕ್ರಿಯರಾಗಿದ್ದಾರೆ.


