Asianet Suvarna News Asianet Suvarna News

ಶ್ರೀದೇವಿ ಭೈರಪ್ಪ ವಿರುದ್ಧ 10 ಕೋಟಿಯ ಮಾನನಷ್ಟ ಕೇಸ್‌ ಹಾಕಿದ ಸಪ್ತಮಿ ಗೌಡ!

ತಮ್ಮ ವಿರುದ್ಧ ಸ್ಪೋಟಕ ಆರೋಪ ಮಾಡಿದ್ದ ಶ್ರೀದೇವಿ ಭೈರಪ್ಪ ವಿರುದ್ಧ ನಟಿ ಸಪ್ತಮಿ ಗೌಡ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅದರೊಂದಿಗೆ ಮಾಧ್ಯಮಗಳಿಗೂ ಕೂಡ ಸಪ್ತಮಿ ಗೌಡ ನಿರ್ಬಂಧ ವಿಧಿಸಿದ್ದಾರೆ.

Sapthami gowda filed 10 crore defamation case against Sridevi Byrappa san
Author
First Published Jun 15, 2024, 8:54 PM IST

ಬೆಂಗಳೂರು (ಜೂನ್‌.15): ರಾಘವೇಂದ್ರ ರಾಜ್‌ಕುಮಾರ್‌ ಅವರ 2ನೇ ಪುತ್ರ ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವಿಚ್ಛೇದನ ವಿಚಾರದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪ ಮಾಡಿದ ಕಾರಣಕ್ಕೆ ನಟಿ ಸಪ್ತಮಿ ಗೌಡ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಯುವ ರಾಜ್‌ಕುಮಾರ್‌ ಅವರ ವಕೀಲರು ನೀಡಿದ್ದ ನೋಟಿಸ್‌ಗೆ ಉತ್ತರ ನೀಡುವ ವೇಳೆ ಶ್ರೀದೇವಿ, ಸಪ್ತಮಿ ಗೌಡ ಅವರ ಹೆಸರನ್ನು ನೇರವಾಗಿ ಉಲ್ಲೇಖ ಮಾಡಿದ್ದು ಮಾತ್ರವಲ್ಲದೆ, ಅವರ ವಿರುದ್ಧ ಕೆಲವು ಸ್ಪೋಟಕ ಆರೋಪಗಳನ್ನು ಮಾಡಿದ್ದರು. ಇದನ್ನು ಮಾಧ್ಯಮಗಳು ಕೂಡ ವರದಿ ಮಾಡಿದ್ದವು. ಈ ಕುರಿತಾಗಿ ಲೀಗಲ್‌ ನೋಟಿಸ್‌ಅನ್ನು ಶ್ರೀದೇವಿ ಭೈರಪ್ಪಗೆ ನೀಡಿರುವ ಸಪ್ತಮಿ ಗೌಡ, ತಮ್ಮ ಹೆಸರನ್ನು  ರಿಪ್ಲೈ ನೋಟಿಸ್‌ನಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಹೇಳಿದ್ದಾರೆ ಇಲ್ಲದೇ ಹೋದಲ್ಲಿ 10 ಕೋಟಿ ರೂಪಾಯಿ ಮಾನನಷ್ಟ ಹಣ ನೀಡುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

ಇನ್ನೊಂದೆಡೆ ಶ್ರೀದೇವಿ ಅವರ ಕುಟುಂಬ ಹಾಗೂ ಮಾಧ್ಯಮದವರ ವಿರುದ್ಧವೂ ಸಪ್ತಮಿ ಗೌಡ ತಡೆಯಾಜ್ಞೆ ತಂದಿದ್ದಾರೆ. ಯುವ ರಾಜ್‌ಕುಮಾರ್‌ ಅವರ ವಿಚ್ಛೇದನ ಪ್ರಕರಣದ ವಿಚಾರಣೆಯಲ್ಲಿ ಎಲ್ಲಿಯೂ ಕೂಡ ಸಪ್ತಮಿ ಗೌಡ ಎನ್ನುವ ಹೆಸರನ್ನು ಬಳಸಬಾರದು ಎಂದು ತಡೆಯಾಜ್ಞೆ ತಂದಿದ್ದಾರೆ. ಸಪ್ತಮಿ ಗೌಡ ಅವರ ಅರ್ಜಿ ಆಲಿಸಿದ ಕೋರ್ಟ್‌, ಶ್ರೀದೇವಿ ಮತ್ತು ಅವರ ಕುಟುಂಬದ ಸದಸ್ಯರ‌ ವಿರುದ್ಧ ತಡೆಯಾಜ್ಞೆ ನೀಡಿದೆ.

ಜೂನ್‌ 6 ರಂದು ಯುವ ರಾಜ್‌ಕುಮಾರ್‌ ತನಗೆ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಈ ವೇಳೆ ಪತ್ನಿಯಿಂದ ನಮಗೆ ಮಾನಸಿಕ ವಾಗಿ ಹಿಂಸೆಯಾಗುತ್ತಿದೆ ಎಂದು ಆರೋಪ ಮಾಡಿದ್ದರು. ಡಾ.ರಾಜ್‌ಕುಮಾರ್‌ ಅವರ ಕುಟುಂಬದಲ್ಲಿ ಮೊಟ್ಟಮೊದಲ ವಿಚ್ಚೇದನ ಅರ್ಜಿ ಇದಾಗಿದ್ದ ಕಾರಣಕ್ಕೆ ದೊಡ್ಡ ಸುದ್ದಿಯಾಗಿತ್ತು. ಆ ಬಳಿಕ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌, ಶ್ರೀದೇವಿ ಭೈರಪ್ಪ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದರು.

ಯುವ ಪತ್ನಿ ಆರೋಪಕ್ಕೆ ಕೆರಳಿದ ನಟಿ ಸಪ್ತಮಿ, ಕಾನೂನು ಹೋರಾಟಕ್ಕೆ ಮುಂದಾದ ಕಾಂತಾರ ನಟಿ!

ಶ್ರೀದೇವಿ ಭೈರಪ್ಪಗೆ ಅನೈತಿಕ ಸಂಬಂಧವಿದೆ, ಅಲ್ಲದೆ, ಕುಟುಂಬದ ಹೆಸರಿನಲ್ಲಿ ಸಾಕಷ್ಟು ಅಕ್ರಮ ವ್ಯವಹಾರಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಶ್ರೀದೇವಿ ಭೈರಪ್ಪ ತಮ್ಮ ಬಾಯ್‌ಫ್ರೆಂಡ್‌ ರಾಧಯ್ಯ ಅವರೊಂದಿಗೆ ಮದುವೆಯ ನಂತರವೂ ಸಂಬಂಧ ಇಟ್ಟುಕೊಂಡಿದ್ದರು. ಅವರಿಂದಲೇ ಮಗು ಪಡೆಯುವ ಯೋಚನೆಯನ್ನೂ ಮಾಡಿದ್ದರು ಎಂದು ಆರೋಪಿಸಿದ್ದರು. ಅದಲ್ಲದೆ, ತಾವು ಕಳಿಸಿದ ಲೀಗಲ್‌ ನೋಟಿಸ್‌ಗೆ ಸೂಕ್ತ ರೀತಿಯಲ್ಲಿ ಅವರು ಉತ್ತರವನ್ನೂ ನೀಡಿರಿಲಿಲ್ಲ ಎಂದಿದ್ದರು.

ಯುವ ರಾಜ್‌ಕುಮಾರ್‌-ಸಪ್ತಮಿ ಗೌಡ ರೆಡ್‌ಹ್ಯಾಂಡ್‌ ಆಗಿ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ರು: ಶ್ರೀದೇವಿ ಭೈರಪ್ಪ

ಇನ್ನೊಂದೆಡೆ ಶ್ರೀದೇವಿ ಭೈರಪ್ಪ ತಮ್ಮ ರಿಪ್ಲೈ ನೋಟಿಸ್‌ನಲ್ಲಿ ನೇರವಾಗಿ ಯುವ ರಾಜ್‌ಕುಮಾರ್‌ ಹಾಗೂ ನಟಿ ಸಪ್ತಮಿ ಗೌಡ ನಡುವೆ ಸಂಬಂಧವಿದೆ ಎಂದೇ ಆರೋಪ ಮಾಡಿದ್ದರು. ಇದು ನನಗೆ ಕುಟುಂಬದವರು ಹಾಗೂ ಆಪ್ತ ಸ್ನೇಹಿತರಿಂದ ತಿಳಿದಿತ್ತು ಎಂದು ತಿಳಿಸಿದ್ದಾರೆ. ಇವರಿಬ್ಬರನ್ನೂ ನಾನು ಹೋಟೆಲ್‌ ರೂಮ್‌ನಲ್ಲಿಯೇ ಇದ್ದಿದ್ದನ್ನು ನೋಡಿದ್ದೇನೆ ಎಂದು ಶ್ರೀದೇವಿ ಭೈರಪ್ಪ ತಿಳಿಸಿದ್ದರು. ಈ ಆರೋಪ ಬಂದ ಬೆನ್ನಲ್ಲಿಯೇ ಸಪ್ತಮಿ ಗೌಡ, ಶ್ರೀದೇವಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು.

Latest Videos
Follow Us:
Download App:
  • android
  • ios