ಪುನೀತ್ ರಾಜ್ಕುಮಾರ್ ಮಿಲನ ಸಿನಿಮಾ ನಾಯಕಿ ಇದೇ ಮೊದಲ ಬಾರಿಗೆ ADHD ಆರೋಗ್ಯ ಸಮಸ್ಯೆ ಕುರಿತು ಬಹಿರಂಗಪಡಿಸಿದ್ದಾರೆ. ಕನ್ನಡದಲ್ಲಿ ಕೆಲ ಸೂಪರ್ ಹಿಟ್ ಸಿನಿಮಾ ನೀಡಿದ ನಾಯಕಿಗೆ ಏನಾಗಿದೆ?
ಪುನೀತ್ ರಾಜ್ಕುಮಾರ್ ಜೊತೆ ಸೂಪರ್ ಹಿಟ್ ಮಿಲನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಪಾರ್ವತಿ ತಿರುವೊತ್ತು ಇದೀಗ ತಮ್ಮ ಆರೋಗ್ಯದ ಕುರಿತು ಮಾತನಾಡಿದ್ದಾರೆ. ಮಿಲನ್, ಪೃಥ್ವಿ, ಮಳೆ ಬರಲಿ ಮಂಜು ಇರಲಿ ಸೇರಿದಂತೆ ಸ್ಯಾಂಡಲ್ವುಡ್ನ ಪ್ರಮುಖ ಸಿನಿಮಾದಲ್ಲಿ ನಾಯಕಿಯಾಗಿ ಜನರ ಮೆಚ್ಚುಗೆಗೆ ಪಡೆದಿದ್ದ ನಟಿ ಪಾರ್ವತಿ ತಿರುವೊತು ತಮಗೆ ಎಡಿಎಚ್ಡಿ (ADHD) ಆರೋಗ್ಯ ಸಮಸ್ಯೆ ಇರುವುದಾಗಿ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ನನಗೆ ಎಡಿಎಚ್ಡಿ ಸಮಸ್ಯೆ ಇದೆ
ಇದೇ ಮೊದಲ ಬಾರಿಗೆ ಪಾರ್ವತಿ ತಮ್ಮ ವೈಯುಕ್ತಿಕ ಜೀವನ, ಆರೋಗ್ಯ ಕುರಿತು ಮಾತನಾಡಿದ್ದಾರೆ. ನನಗೆ ADHD ಸಮಸ್ಯೆ ಇದೆ. ಇದನ್ನು ನಿಭಾಯಿಸುವ ಪ್ರಯತ್ನದಲ್ಲಿದ್ದೇನೆ. ನನ್ನ ಆರೋಗ್ಯ ವಿಷಯವನ್ನು ದೊಡ್ಡ ವಿಷಯ ಮಾಡಲು ನಾನು ಇಷ್ಟುಪಡುವುದಿಲ್ಲ. ಸಮಸ್ಯೆ ತಕ್ಕಂತೆ ನಾನು ನನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಬದಲಾಯಿಸಿಕೊಂಡಿದ್ದಾನೆ. ಆಹಾರ, ವ್ಯಾಯಾಮ, ನಿದ್ದೆ ಎಲ್ಲವೂ ಪೂರಕವಾಗಿ ಮಾಡಿಕೊಂಡಿದ್ದೇನೆ. ನನಗೆ ಸರಿಯಾದ ನಿದ್ದೆ ಬೇಕು. ಅದನ್ನು ನಾನು ಪಡೆದುಕೊಳ್ಳುತ್ತೇನೆ ಎಂದು ಪಾರ್ವತಿ ಹೇಳಿದ್ದಾರೆ.
ಏನಿದ ಎಡಿಎಚ್ಡಿ ಆರೋಗ್ಯ ಸಮಸ್ಯೆ
ಎಡಿಎಚ್ಡಿ ಮೆದುಳಿನ ಬೆಳವಣಿಗೆ ಹಾಗೂ ಮೆದುಳಿನ ಕಾರ್ಯನಿರ್ವಹಣೆ ಕುರಿತ ಸಮಸ್ಯೆ. ನರಗಳ ಬೆಳವಣಿಗೆಯಲ್ಲಿ ಆಗುವ ಸಮಸ್ಯೆಗಳಿಂದ ಈ ಎಡಿಎಚ್ಡಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯಿಂದ ಯಾವುದೇ ಕೆಲಸದ ಮೇಲೆ ಸಂಪೂರ್ಣ ಗಮನ ನೀಡಲು ಸಾಧ್ಯವಾಗುವುದಿಲ್ಲ. ವಿಚಲಿತಗೊಳ್ಳುವುದು, ಮರೆಯುವುದು ಸೇರಿದಂತೆ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.ಈ ಸಮಸ್ಯೆ ಕಾಣಿಸಿಕೊಂಡವರು ಹೈಪರ್ ಆ್ಯಕ್ಟೀವ್ ಆಗಿರುತ್ತಾರೆ. ಬಹುಬೇಗನೆ ತಾಳ್ಮೆ ಕಳೆದುಕೊಳ್ಳುವುದು ಸೇರಿದಂತೆ ಕೆಲ ಲಕ್ಷಣಗಳು ಈ ಸಮಸ್ಯೆಯಲ್ಲಿ ಗೋಚರಿಸುತ್ತದೆ.
ಶೂಟಿಂಗ್ ಬಳಿಕ ಪಾರ್ಟಿ
ಈ ಹಿಂದೆ ಸಿನಿಮಾ ಶೂಟಿಂಗ್ ಬಳಿಕ ನಾನು ನೇರವಾಗಿ ಮನೆಗೆ ಮರಳುತ್ತಿದ್ದೆ. ಯಾರ ಜೊತೆಗೆ ಹೆಚ್ಚು ಸಂಪರ್ಕದಲ್ಲಿರಲು ಬಯಸುತ್ತಿರಲಿಲ್ಲ. ಅಂದು ನನಗೆ ಅದು ಸರಿ ಏನಿಸಿತ್ತು. ಹಾಗಾಗಿ ಅದೇ ಶೈಲಿಯನ್ನು ರೂಢಿಸಿಕೊಂಡು ಬಂದಿದ್ದೆ. ಆದರೆ ಈಗ ಸೋಶಿಯಲ್ ಆಗಿದ್ದೇನೆ. ಶೂಟಿಂಗ್ ಬಳಿಕ ಪಾರ್ಟಿ ಮಾಡುತ್ತೇನೆ. ಎಲ್ಲರ ಜೊತೆ ಮಾತನಾಡುತ್ತೇನೆ. ಹಲವು ಉತ್ತಮ ಗೆಳೆಯರನ್ನು ಪಡೆದುಕೊಂಡಿದ್ದೇನೆ ಎಂದು ಪಾರ್ವತಿ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಜೊತೆ ಮಿಲನ್ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟ ಪಾರ್ವತಿ ಬಳಿಕ ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. 2013ರಲ್ಲಿ ಶಿವರಾಜ್ ಕುಮಾರ್ ಜೊತೆ ಅಂದರ್ ಬಾಹರ್ ಸಿನಿಮಾದಲ್ಲೂ ಪಾರ್ವತಿ ನಟಿಸಿದ್ದಾರೆ. ಇದು ಕನ್ನಡದ ಕೊನೆಯ ಸಿನಿಮಾ, ಬಳಿಕ ಮಲೆಯಾಳಂ, ತಮಿಳು, ತೆಲುಗು ಸಿನಿಮಾದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.
















