ನಾನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಸದ್ಯ ಅಭಿಮಾನಿಗಳು ಬಲು ನಿರೀಕ್ಷೆಯಿಂದ ಕಾಯ್ತಿದ್ದ ದಿನ ಇಷ್ಟು ಬೇಗ ಬಂದೇ ಬಿಟ್ಟಿದೆ. ಶರತ್​-ದುರ್ಗಾ ಮದ್ವೆಯಾಗಿದೆ ಈ ಖುಷಿಯಲ್ಲಿ ಟೀಮ್​ ಏನು ಮಾಡಿದೆ ನೋಡಿ... 

ಎಡವಟ್ಟು ದುರ್ಗಾ ಎಂದರೆ, ಸೀರಿಯಲ್​ ಪ್ರೇಮಿಗಳಿಗೆ ಮೊದಲು ನೆನಪಾಗೋದು ನಾನಿನ್ನ ಬಿಡಲಾರೆಯ ದುರ್ಗಾ. ಹೌದು. ಈಕೆ ಮಾಡೊದೆಲ್ಲಾ ಎಡವಟ್ಟೇ. ಆದರೂ ಸೌಮ್ಯ ಸ್ವಭಾವ ಇನ್ನೂ ಚಿಕ್ಕಮಕ್ಕಳ ಮುಗ್ಧತೆ ಇರುವ ಯುವತಿ ದುರ್ಗಾ. ಆತ್ಮದ ಜೊತೆ ಮಾತನಾಡುವ ಶಕ್ತಿ ಇರುವ ಏಕೈಕ ನಟಿ ಈಕೆ! ಅಂದಹಾಗೆ, ಈಕೆ ನಿಜ ಜೀವನದಲ್ಲಿ ಆತ್ಮಗಳ ಜೊತೆ ಮಾತನಾಡಲ್ಲ, ಬದಲಿಗೆ ನಾನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಸತ್ತುಹೋಗಿರೋ ಅಂಬಿಕಾ ಇವಳಿಗೆ ಕಾಣಿಸುತ್ತಿದ್ದಾಳೆ. ಆಕೆ ಸತ್ತು ಹೋಗಿದ್ದಾಳೆ ಎನ್ನುವುದು ದುರ್ಗಾಗೆ ಗೊತ್ತಿಲ್ಲ. ಅಷ್ಟಕ್ಕೂ ಅವಳು ಯಾರು ಎನ್ನೋದೇ ಗೊತ್ತಿಲ್ಲ. ಆದರೂ ಇಬ್ಬರೂ ಫ್ರೆಂಡ್ಸ್​ ಆಗಿದ್ದಾರೆ. ಅಂಬಿಕಾಗೋ ದುರ್ಗಾ ಮೇಲೆ ಇನ್ನಿಲ್ಲದ ಪ್ರೀತಿ. ತನ್ನ ಗಂಡನನ್ನೇ ದುರ್ಗಾಗೆ ಮದ್ವೆ ಮಾಡಿಸೋ ಪ್ಲ್ಯಾನ್​ ಈ ಅಂಬಿಕಾ ಎನ್ನೋ ಆತ್ಮದ್ದು. ಇದು ಕ್ಯೂಟ್​ ಆತ್ಮ ಎಂದೇ ಫೇಮಸ್ಸು.

ಇದೀಗ ಕುತೂಹಲದ ತಿರುವಿನಲ್ಲಿ ದುರ್ಗಾ ಮತ್ತು ಶರತ್​ ಮದುವೆಯಾಗಿದೆ. ದುರ್ಗಾಳಿಗೆ ಬೇರೊಂದು ಮದುವೆ ಮಾಡಿ ಆಕೆಯನ್ನು ಓಡಿಸೋ ಪ್ಲ್ಯಾನ್​ ಮಾಡಲಾಗಿತ್ತು. ಆದರೆ ದುರ್ಗಾ ಮದುವೆಯಾಗುವುದು ಪುಟಾಣಿ ಹಿತಾಗೆ ಇಷ್ಟವಿರಲಿಲ್ಲ. ಅಂಬಿಕಾ ಆತ್ಮಕ್ಕೂ ತನ್ನ ತಂಗಿಯನ್ನು ಗಂಡನಿಗೇ ಕೊಟ್ಟು ಮದುವೆ ಮಾಡುವ ಆಸೆ. ಆದರೆ ಅದ್ಯಾವುದೂ ನಡೆಯದೇ ಹೋಗಿತ್ತು. ದುರ್ಗಾಳ ಚಿಕ್ಕಮ್ಮನಿಗೆ ಹಣದ ಆಮಿಷ ಒಡ್ಡಿ ಯಾವುದೋ ಮೋಸಗಾರನ ಜೊತೆ ಮದುವೆಗೆ ರೆಡಿ ಮಾಡಲಾಗಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಆತ ಮೋಸಗಾರ ಎನ್ನುವುದು ತಿಳಿಯಿತು.

ಆದರೆ ಇದನ್ನು ಹೇಳಿದರೂ ತನ್ನ ಚಿಕ್ಕಮ್ಮನಿಗೆ ಮದುವೆಯಾಗುವ ಮಾತು ಕೊಟ್ಟಿದ್ದರಿಂದ ಮದುವೆಯಾಗುತ್ತೇನೆ ಎಂದು ದುರ್ಗಾ ಪಟ್ಟು ಹಿಡಿದಳು. ಕೊನೆಗೆ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಶರತ್​ ಹಸೆಮಣೆ ಏರಿ ದುರ್ಗಾಳನ್ನು ಮದುವೆಯಾಗಿರುವುದನ್ನು ನೋಡಬಹುದು. ಇದನ್ನು ನೋಡಿ ಅಂಬಿಕಾ, ಹಿತಾ ಸೇರಿ ಅವರ ಪರವಾಗಿ ಇರುವವರೆಲ್ಲರೂ ಸಕತ್​ ಖುಷಿ ಪಟ್ಟಿದ್ದಾರೆ. ಇದೀಗ ಅತ್ತ ಮದ್ವೆಯಾಗ್ತಿದ್ದಂತೆಯೇ ಇತ್ತ ಅಂಬಿಕಾ, ಹಿತಾ, ಅಂಬಿಕಾ ಅಪ್ಪ ಮತ್ತು ವಿಲನ್​ ಎಲ್ಲರೂ ಸೇರಿ ಭರ್ಜರಿ ಸ್ಟೆಪ್​ ಹಾಕಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಅಂಬಿಕಾ ಪಾತ್ರಧಾರಿ ನೀತಾ ಅಶೋಕ್​ ಕುರಿತು ಹೇಳುವುದಾದರೆ, 2014 ಯಶೋಧೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ನೀತಾ ಅಶೋಕ್ ನೀಲಾಂಬರಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಜಬರದಸ್ತ್‌ ಶಂಕರ್ ತೆಲುಗು ಸಿನಿಮಾ ಮೂಲಕ ಸಿನಿಮಾ ಜರ್ನಿ ಶುರು ಮಾಡಿದ್ದು. 2022ರಲ್ಲಿ ಕಿಚ್ಚ ಸುದೀಪ್‌ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಹಿತಾ ಅರ್ಥಾತ್​ ಪುಟಾಣಿ ಮಹಿತಾ ಕುರಿತು ಹೇಳುವುದಾದರೆ, ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್​ ಕೂಡ. ಈಕೆ ಇನ್​ಸ್ಟಾಗ್ರಾಮ್​ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್​ನ ಟೈಟಲ್ ಸಾಂಗ್​ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.

ಮಹಿತಾ, ಸ್ಕೂಲ್ ಮತ್ತು ಸೀರಿಯಲ್‌ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ. ಈ ಕುರಿತು ಹಿಂದೊಮ್ಮೆ ಈಕೆಯ ಅಮ್ಮ ತನುಜಾ ಮಾಧ್ಯಮದ ಜೊತೆ ಮಾತನಾಡಿದ್ದರು. 'ಚಿಕ್ಕ ವಯಸ್ಸಿನಲ್ಲಿ ಮಹಿತಾಗೆ ಹಾಡಿನಲ್ಲಿ ತುಂಬಾ ಆಸಕ್ತಿ ಇತ್ತು. ಕೋವಿಡ್​ ಸಮಯದಲ್ಲಿ ನಾನು ಜನರಿಗೆ ಅರಿವು ಮೂಡಿಸುವ ವಿಡಿಯೋ ಮಾಡುತ್ತಿದ್ದ ವೇಳೆ ಅವಳಲ್ಲಿ ಇದ್ದ ನಟನೆಯ ಕಲೆಯನ್ನು ಗುರುತಿಸಿದೆ. ಮಗಳು ಬರೀ ಓದಬೇಕು ಎಂದು ನಾನು ಯಾವತ್ತೂ ಒತ್ತಡ ಹಾಕುವುದಿಲ್ಲ. ಆಕೆಗೆ ಯಾವುದೇ ಟ್ಯಾಲೆಂಟ್ ಇದ್ದರೂ ಸಪೋರ್ಟ್ ಮಾಡಬೇಕು ಅನ್ನೋ ಆಸೆ ನನಗೆ ಇತ್ತು. ಅದರಂತೆಯೇ ಅವಳ ಆಸಕ್ತಿಗೆ ನೀರೆರೆದೆ. ಅವರಿಗೆ ಒಳ್ಳೆಯ ವೇದಿಕೆಯೂ ಸಿಗುತ್ತಾ ಹೋಯಿತು ಎಂದಿದ್ದರು. ಅವಳ ಹಣೆಯಲ್ಲಿ ನಟಿಯಾಗುವುದೇ ಬರೆದಿದ್ದರೆ ಅದೇ ಆಗುತ್ತಾಳೆ. ಅವಳಿಗೆ ಏನೇ ಆಸಕ್ತಿ ಇದ್ದರೂ ಆ ಕ್ಷೇತ್ರದಲ್ಲಿ ನಾವು ಮುಂದುವರೆಯಲು ಬಿಡುತ್ತೇವೆ ಎಂದಿದ್ದರು.

View post on Instagram