ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದ 23ನೇ ವರ್ಷದ ಶರನ್ನವರಾತ್ರಿ ಉತ್ಸವದಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ಸಾರ್ವಜನಿಕರೊಂದಿಗೆ ದಾಂಡಿಯಾ ನೃತ್ಯ ಮಾಡಿದ್ದಾರೆ. ಸಾಮಾನ್ಯ ಮಹಿಳೆಯಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಹೆಜ್ಜೆ ಹಾಕಿದ ಅವರ ಸರಳತೆ ಮತ್ತು ಉತ್ಸಾಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಿಕ್ಕಮಗಳೂರು (ಅ.19): ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಶರನ್ನವರಾತ್ರಿ ಉತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು, ಯುವ ಶಾಸಕಿ ನಯನಾ ಮೋಟಮ್ಮ (Nayana Motamma) ಅವರು ಸಾರ್ವಜನಿಕರೊಂದಿಗೆ ಅತ್ಯಂತ ಲವಲವಿಕೆಯಿಂದ ದಾಂಡಿಯಾ ನೃತ್ಯಕ್ಕೆ (Dandiya Dance) ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯ ಮಹಿಳೆಯಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಣ್ಮನ ಸೆಳೆದ ಶಾಸಕಿಯ ಸರಳತೆ ಮತ್ತು ಉತ್ಸಾಹ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
23ನೇ ವರ್ಷದ ಶರನ್ನವರಾತ್ರಿ ಉತ್ಸವದ ಸಂಭ್ರಮ:
ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 23ನೇ ವರ್ಷದ ಶರನ್ನವರಾತ್ರಿ ಉತ್ಸವ ಅತ್ಯಂತ ವೈಭವದಿಂದ ಜರುಗಿತು. ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಹಬ್ಬ ಕಳೆಗಟ್ಟಿತ್ತು. ಈ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದಿದ್ದು ಮಹಿಳೆಯರ ಸಾಂಪ್ರದಾಯಿಕ ದಾಂಡಿಯಾ ನೃತ್ಯ.
ದಾಂಡಿಯಾ ನೃತ್ಯದಲ್ಲಿ ಮಿಂಚಿದ ಶಾಸಕಿ:
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಕೇವಲ ವೇದಿಕೆಯ ಭಾಷಣಕ್ಕೆ ಸೀಮಿತವಾಗದೆ, ಕೆಳಗಿಳಿದು ಬಂದು ಮಹಿಳೆಯರೊಂದಿಗೆ ಕೈಜೋಡಿಸಿದರು. ಸುಂದರವಾದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದ ಶಾಸಕಿಯವರು ಕೈಯಲ್ಲಿ ದಾಂಡಿಯಾ ಕೋಲುಗಳನ್ನು ಹಿಡಿದು, ಹಿನ್ನೆಲೆಯಲ್ಲಿ ಮೊಳಗುತ್ತಿದ್ದ ಜಾನಪದ ಹಾಗೂ ಭಕ್ತಿಗೀತೆಗಳ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ನಗುಮುಖದೊಂದಿಗೆ ಅತ್ಯಂತ ಲವಲವಿಕೆಯಿಂದ ಅವರು ಕುಣಿದ ರೀತಿ ನೆರೆದಿದ್ದವರಲ್ಲಿ ಮತ್ತಷ್ಟು ಹುರುಪು ತುಂಬಿತು.
ಜನಪ್ರತಿನಿಧಿಯೊಬ್ಬರು ಯಾವುದೇ ಬಿಗುಮಾನವಿಲ್ಲದೆ ತಮ್ಮೊಂದಿಗೆ ಬೆರೆತು ಸಂತಸ ಹಂಚಿಕೊಂಡಿದ್ದನ್ನು ಕಂಡು ಸ್ಥಳೀಯ ಮಹಿಳೆಯರು ಹರ್ಷ ವ್ಯಕ್ತಪಡಿಸಿದರು. ಸದ್ಯ ಶಾಸಕಿ ನಯನಾ ಮೋಟಮ್ಮ ಅವರ ಈ ದಾಂಡಿಯಾ ನೃತ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಶಾಸಕಿಯ ಎನರ್ಜಿ ಮತ್ತು ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


