‘ರಾಮಾಯಣ’ ಸಿನಿಮಾದಲ್ಲಿ ಬಳಸಲಾಗುತ್ತಿರುವ ವಿಪರೀತ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ಸ್ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ವಿದೇಶಿ ಪ್ರೇಕ್ಷಕರಿಗೆ ಅದ್ದೂರಿ ತಂತ್ರಜ್ಞಾನ ಹಾಗೂ ದೃಶ್ಯ ವೈಭವ ಆಕರ್ಷಕವಾಗಬಹುದು. ಆದರೆ ಭಾರತೀಯ ಪ್ರೇಕ್ಷಕರಿಗೆ ಶ್ರೀರಾಮ ಕೇವಲ ಸಿನಿಮಾ ಪಾತ್ರವಲ್ಲ, ಭಕ್ತಿ ಮತ್ತು ನಂಬಿಕೆಯೊಂದಿಗೆ ಸಂಬಂಧ ಹೊಂದಿರುವ ಆರಾಧ್ಯ ವ್ಯಕ್ತಿತ್ವ' ಎಂದಿದ್ದಾರೆ.
Mukesh Khanna comments about Ramayana movie and Rama role projection- ಭಾರತೀಯ ಚಿತ್ರರಂಗದಲ್ಲಿ ಸದ್ಯ ಭಾರಿ ಕುತೂಹಲ ಮೂಡಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಮುಂಚೂಣಿಯಲ್ಲಿದೆ. ಸಾವಿರಾರು ಕೋಟಿ ರೂಪಾಯಿ ಬಜೆಟ್, ಬಾಲಿವುಡ್‌ನ ಜನಪ್ರಿಯ ತಾರೆಯರು, ಹಾಲಿವುಡ್ ಮಟ್ಟದ ತಂತ್ರಜ್ಞಾನ ಹಾಗೂ ಭಾರತೀಯ ಪುರಾಣದ ಮಹತ್ವದ ಕಥೆ... ಹೀಗೆ ಸಿನಿಮಾ ಆರಂಭವಾದ ದಿನದಿಂದಲೇ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಆದರೆ ಇದೀಗ ‘ರಾಮಾಯಣ’ದ ಬಗ್ಗೆ ಹಿರಿಯ ನಟ ಮುಕೇಶ್ ಖನ್ನಾ (Mukesh Khanna) ಮಾಡಿರುವ ಟೀಕೆಗಳು ಹೊಸ ಚರ್ಚೆಗೆ ಕಾರಣವಾಗಿವೆ.
‘ಶಕ್ತಿಮಾನ್’ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ಮುಕೇಶ್ ಖನ್ನಾ, ‘ರಾಮಾಯಣ’ ಚಿತ್ರದ ಟ್ರೇಲರ್ ಹಾಗೂ ಸಾಹಸ ದೃಶ್ಯಗಳ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ‘ಮರ್ಯಾದಾ ಪುರುಷೋತ್ತಮ’ನ ಶಾಂತ ಸ್ವರೂಪಕ್ಕಿಂತಲೂ ಹೆಚ್ಚು ಮಾಸ್ ಆಕ್ಷನ್ ಹೀರೋ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದೇ ವಿಚಾರವನ್ನು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮುಕೇಶ್ ಖನ್ನಾ, ರಣಬೀರ್ ಕಪೂರ್ ನಿರ್ವಹಿಸುತ್ತಿರುವ ಶ್ರೀರಾಮನ ಪಾತ್ರದ ಕೆಲವು ಆಕ್ಷನ್ ದೃಶ್ಯಗಳನ್ನು ಉಲ್ಲೇಖಿಸಿದ್ದಾರೆ. ರಾಮನು ಮರ ಹತ್ತಿ ಬಾಣ ಬಿಡುವ ರೀತಿಯ ದೃಶ್ಯಗಳು ತಮ್ಮ ಕಲ್ಪನೆಯಲ್ಲಿರುವ ಶ್ರೀರಾಮನ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ರಾಮಾಯಣದ ಸಾಂಪ್ರದಾಯಿಕ ಕಥನಗಳಲ್ಲಿ ಇಂತಹ ಆಕ್ಷನ್ ಶೈಲಿಯನ್ನು ನೋಡಿಲ್ಲ ಎಂಬುದು ಅವರ ಅಭಿಪ್ರಾಯ.
ಇಷ್ಟಕ್ಕೇ ನಿಲ್ಲದ ಅವರು, ಶ್ರೀರಾಮನ ಪಾತ್ರವನ್ನು ಸಲ್ಮಾನ್ ಖಾನ್, ರಜನಿಕಾಂತ್ ಅಥವಾ ಅಮಿತಾಭ್ ಬಚ್ಚನ್ ಅವರಂತಹ ಮಾಸ್ ಹೀರೋಗಳ ಶೈಲಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಶ್ರೀರಾಮನು ಶಾಂತಿ, ಸಂಯಮ ಮತ್ತು ಧರ್ಮದ ಪ್ರತೀಕವಾಗಿದ್ದಾನೆ. ಹೀಗಾಗಿ ಆತನನ್ನು ಅತಿಯಾದ ಆಕ್ಷನ್ ದೃಶ್ಯಗಳ ಮೂಲಕ ಪ್ರದರ್ಶಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಸಮುದ್ರದ ಬಳಿ ಶ್ರೀರಾಮನು ಶಕ್ತಿಪ್ರದರ್ಶನ ಮಾಡುವ ಬದಲು ಪ್ರಾರ್ಥನೆ ಮಾಡುತ್ತಿದ್ದ ಎಂಬ ಸಾಂಪ್ರದಾಯಿಕ ನಿರೂಪಣೆಯನ್ನು ನೆನಪಿಸಿರುವ ಮುಕೇಶ್ ಖನ್ನಾ, ರಾಮನೇ ಎಲ್ಲವನ್ನೂ ಒಬ್ಬನೇ ಮಾಡುತ್ತಿದ್ದರೆ ವಾನರ ಸೇನೆಯ ಪಾತ್ರವೇನು ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ರಾಮನ ಪಾತ್ರವನ್ನು ಯಾವ ರೀತಿಯಲ್ಲಿ ರೂಪಿಸಲಾಗಿದೆ ಎಂಬುದರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ‘ರಾಮಾಯಣ’ ಸಿನಿಮಾದಲ್ಲಿ ಬಳಸಲಾಗುತ್ತಿರುವ ವಿಪರೀತ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ಸ್ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ವಿದೇಶಿ ಪ್ರೇಕ್ಷಕರಿಗೆ ಅದ್ದೂರಿ ತಂತ್ರಜ್ಞಾನ ಹಾಗೂ ದೃಶ್ಯ ವೈಭವ ಆಕರ್ಷಕವಾಗಬಹುದು. ಆದರೆ ಭಾರತೀಯ ಪ್ರೇಕ್ಷಕರಿಗೆ ಶ್ರೀರಾಮ ಕೇವಲ ಸಿನಿಮಾ ಪಾತ್ರವಲ್ಲ, ಭಕ್ತಿ ಮತ್ತು ನಂಬಿಕೆಯೊಂದಿಗೆ ಸಂಬಂಧ ಹೊಂದಿರುವ ಆರಾಧ್ಯ ವ್ಯಕ್ತಿತ್ವ ಎಂಬುದು ಅವರ ವಾದವಾಗಿದೆ.
ರಣಬೀರ್ ಕಪೂರ್ ಈ ಹಿಂದೆ ‘ಅನಿಮಲ್’ ಸಿನಿಮಾದಲ್ಲಿ ನಿರ್ವಹಿಸಿದ್ದ ಹಿಂಸಾತ್ಮಕ ಹಾಗೂ ಆಕ್ರಮಣಕಾರಿ ಪಾತ್ರದ ಇಮೇಜ್ ಕೂಡ ಶ್ರೀರಾಮನ ಪಾತ್ರದ ಮೇಲೆ ಪರಿಣಾಮ ಬೀರಬಹುದೇ ಎಂಬ ಆತಂಕವನ್ನು ಮುಕೇಶ್ ಖನ್ನಾ ವ್ಯಕ್ತಪಡಿಸಿದ್ದಾರೆ. ಆದರೆ ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರು ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಬೇರೆ ವಿಚಾರ.
ಇನ್ನು ‘ರಾಮಾಯಣ’ ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಬೃಹತ್ ಸಿನಿಮಾ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿದ್ದರೆ, ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಸುಮಾರು 4,000 ಕೋಟಿ ರೂಪಾಯಿ ಬಜೆಟ್ ಇದೆ ಎನ್ನಲಾಗಿದೆ. ಹಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಹಾಗೂ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.


